ರಾಜ್ಯ ಸಚಿವ ಸಂಪುಟದಿಂದ ವಜಾಗೊಂಡಿರುವ ಬಗ್ಗೆ ಕೆಎನ್ ರಾಜಣ್ಣ ಪ್ರತಿಕ್ರಿಯೆ ನೀಡಿದ್ದು, ತಮ್ಮ ವಜಾ ಹಿಂದೆ ದೊಡ್ಡ ಷಡ್ಯಂತ್ರ ಆಗಿದೆ ಎಂದು ಹೇಳಿದ್ದಾರೆ. ನನ್ನ ಬಳಿ ಇರುವ ಈ ಷಡ್ಯಂತ್ರ ವಿವರಗಳನ್ನು ಮುಂದಿನ ದಿನಗಳಲ್ಲಿ ತಿಳಿಸುತ್ತೇನೆ. ಇದು ಹೈಕಮಾಂಡ್ ನಿರ್ಧಾರವಾಗಿದೆ. ಪಕ್ಷ ತೆಗೆದುಕೊಂಡ ನಿರ್ಧಾರಕ್ಕೆ ಬದ್ಧನಾಗಿದ್ದೇನೆ ನನ್ನ ಬಗ್ಗೆ ರಾಹುಲ್ ಗಾಂಧಿಗೆ ತಪ್ಪು ಗ್ರಹಿಕೆ ಆಗಿದೆ. ನಾನೇ ಖುದ್ದು ದೆಹಲಿಗೆ ತೆರಳಿ ರಾಹುಲ್ ಗಾಂಧಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಕೆಎನ್ ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿರುವುದನ್ನು ವಿರೋಧಿಸಿ ಅವರ ಬೆಂಬಲಿಗರು ಮಂಗಳವಾರ ತುಮಕೂರು ಜಿಲ್ಲೆಯ ಮಧುಗಿರಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ರಾಜಣ್ಣ ಅಭಿಮಾನಿ ಶಿವಲಿಂಗ ಎಂಬುವವರು ಪೆಟ್ರೋಲ್ ಸುರಿದುಕೊಂಡಿದ್ದು, ಸ್ಥಳದಲ್ಲಿದ್ದವರು ಅವರನ್ನು ತಡೆದು ಸಮಾಧಾನಪಡಿಸಿದ್ದಾರೆ. ಇನ್ನು ರಾಜಣ್ಣ ವಜಾ ವಿಷಯ ವಿಧಾನಮಂಡಲದ ಉಭಯ ಸದನಗಳಲ್ಲಿ ಕೋಲಾಹಲಕ್ಕೆ ಕಾರಣವಾಗಿತ್ತು.
ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಸ್ಪಾಟ್ ಸಂಖ್ಯೆ 13'ರಲ್ಲಿ ಗ್ರೌಂಡ್ ಪೆನೆಟ್ರೇಟಿಂಗ್ ರಾಡಾರ್ ತಂತ್ರಜ್ಞಾನ ಬಳಸಿ ತೀವ್ರ ಶೋಧ ಪ್ರಾರಂಭಿಸಿದೆ. ಎಸ್‌ಐಟಿ ಮುಖ್ಯಸ್ಥ ಪ್ರಣಬ್ ಮೊಹಂತಿ ನೇತೃತ್ವದಲ್ಲಿ ಪರಿಶೀಲನೆ ನಡೆಸಲಾಗುತ್ತಿದ್ದು, ಎಸ್ಐಟಿ ಹಿರಿಯ ಅಧಿಕಾರಿಗಳು, ಪುತ್ತೂರು ಸಹಾಯಕ ಆಯಕ್ತ ಸ್ಟೆಲ್ಲಾ ವರ್ಗೀಸ್ ಹಾಗೂ ಇತರ ತಜ್ಞ ಅಧಿಕಾರಿಗಳ ಸುಮಾರು 60 ಮಂದಿಯ ತಂಡ ಶೋಧಕಾರ್ಯಾಚರಣೆಯಲ್ಲಿ ಸಕ್ರಿಯವಾಗಿದೆ. ಇದೇ ಪ್ರಕರಣದ ಸಂಬಂಧ ಈಗ ಮಾನವ ಹಕ್ಕಗಳ ಆಯೋಗವೂ ತನಿಖೆ ಆರಂಭಿಸಿದೆ. ಆಯೋಗದ ನಾಲ್ವರು ಸದಸ್ಯರ ತಂಡ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ಆಗಮಿಸಿದ್ದು, ದೇವಾಲಯದ ಆವರಣ, ಗ್ರಾಮ ಪಂಚಾಯಿತಿ ಕಚೇರಿ, ಸ್ಥಳೀಯ ಪೊಲೀಸ್ ಕಚೇರಿ, SIT ಸೇರಿದಂತೆ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ತನಿಖೆ ಪರಿಶೀಲನೆ ನಡೆಸಿದೆ.
ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪದಲ್ಲಿ ಸಚಿವ ಕೆಎನ್ ರಾಜಣ್ಣ ತಲೆದಂಡ, ಆರ್ ಸಿಬಿ ವಿಜಯೋತ್ಸವದ ವೇಳೆ ಕಾಲ್ತುಳಿತ ಸೇರಿದಂತೆ ವಿವಿಧ ವಿಷಯಗಳ ಕುರಿತು ಉಂಟಾದ ಗದ್ದಲದ ನಡುವೆ ಬರೋಬ್ಬರಿ 15 ವಿಧೇಯಕಗಳು ಮಂಡನೆಯಾಗಿವೆ. ಸಚಿವರದ ಡಾ. ಜಿ ಪರಮೇಶ್ವರ್, ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಸಂತೋಷ್ ಲಾಡ್, ಸುಧಕಾರ್ ಹಾಗೂ ಬೋಸರಾಜ ಪರವಾಗಿ ಕಾನೂನು ಸಚಿವ ಎಚ್ ಕೆ ಪಾಟೀಲ್ ವಿವಿಧ ಇಲಾಖೆಗೆ ಸಂಬಂಧಿಸಿದ 15 ವಿಧೇಯಕಗಳನ್ನ ಮಂಡನೆ ಮಾಡಿದ್ದಾರೆ. 2025ನೇ ಸಾಲಿನ ಕರ್ನಾಟಕ ವೈದ್ಯಕೀಯ ನೋಂದಣಿ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಕರ್ನಾಟಕ ರಾಜ್ಯ ವಿಶ್ವವಿದ್ಯಾನಿಲಯಗಳ (ತಿದ್ದುಪಡಿ) ವಿಧೇಯಕ, 2025ನೇ ಸಾಲಿನ ಬಾಲ್ಯ ವಿವಾಹ ನಿಷೇಧ (ಕರ್ನಾಟಕ ತಿದ್ದುಪಡಿ) ವಿಧೇಯಕಗಳು ಮಂಡನೆಯಾದ ಪ್ರಮುಖ ಮಸೂದೆಗಳಾಗಿವೆ.
ಕರ್ನಾಟಕದ ಹಲವೆಡೆ ಭಾರೀ ಮಳೆಯಾಗುತ್ತಿದ್ದು, ಮಲೆನಾಡು, ಕರಾವಳಿ, ಬೆಳಗಾವಿ, ಬೆಂಗಳೂರಿನಲ್ಲಿ ಮಳೆಯಿಂದ ಜನರು ತತ್ತರಿಸಿದ್ದಾರೆ. ಈ ಮಧ್ಯೆ, ಬಂಗಾಳಕೊಲ್ಲಿಯ ವಾಯುವ್ಯ ಭಾಗದಲ್ಲಿ ಆಗಸ್ಟ್ 13 ರಂದು ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿದ್ದು, ಆಗಸ್ಟ್ 16ರವರೆಗೂ ಕರ್ನಾಟಕ ಹಲವೆಡೆ ವ್ಯಾಪಕ ಮಳೆಯಾಗುವ ಸಂಭವ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡು, ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯಲ್ಲೋ ಅಲರ್ಟ್ ಘೋಷಿಸಿದ್ದರೆ, ಆ.16ರಂದು ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಲೋಕಸಭೆ ವಿಪಕ್ಷದ ನಾಯಕ ರಾಹುಲ್ ಗಾಂಧಿ ಮತಗಳ್ಳತನದ ಆರೋಪ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಬೆನ್ನಲ್ಲೇ ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ಸಿ.ಎಂ ಇಬ್ರಾಹಿಂ, ಸಿದ್ದರಾಮಯ್ಯ ವಿರುದ್ಧ ಮತ ಖರೀದಿ ಆರೋಪ ಮಾಡಿದ್ದಾರೆ. ಇದನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ, ಇದೀಗ ಸಿದ್ದರಾಮಯ್ಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ. ಈ ಸಂಬಂಧ ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಕೇಂದ್ರ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದು, ಕ್ರಮಕ್ಕೆ ಮನವಿ ಮಾಡಿದ್ದಾರೆ. 2018ರಲ್ಲಿ ಬಾದಾಮಿಯಲ್ಲಿ ನಾನು ಮತ್ತು ಮಾಜಿ ಶಾಸಕ ಬಿ.ಬಿ ಚಿಮ್ಮನಕಟ್ಟಿ ಸೇರಿ ಸಾಲ ಮಾಡಿ 3000 ಮತಗಳನ್ನು ಖರೀದಿ ಮಾಡಿದ್ದೆವು, ಆರು ತಿಂಗಳ ನಂತರ ಸಿದ್ದರಾಮಯ್ಯ ಆ ಸಾಲವನ್ನು ವಾಪಸ್ ಕೊಟ್ಟರು ಎಂದು ಸಿ.ಎಂ ಇಬ್ರಾಹಿಂ ಬಹಿರಂಗ ಹೇಳಿಕೆ ನೀಡಿದ್ದರು.
Advertisement