ಧರ್ಮಸ್ಥಳದಲ್ಲಿ ನಡೆದಿದೆ ಎನ್ನಲಾಗಿರುವ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ. ಸ್ಥಳ ಸಂಖ್ಯೆ 13ರಲ್ಲಿ 300ಕ್ಕೂ ಹೆಚ್ಚು ಶವಗಳನ್ನು ಹೂತು ಹಾಕಿದ್ದಾಗಿ ಹೇಳಿದ್ದು ಆ ಜಾಗದಲ್ಲಿ ನಿನ್ನೆಯಿಂದ ಅಗೆಯುವ ಕಾರ್ಯಾಚರಣೆ ಶುರುವಾಗಿತ್ತು. ಆದರೆ ಸರಿಸುಮಾರು 14 ಅಡಿ ಆಳ ಅಗೆದರೂ ಇಲ್ಲಿಯವರೆಗೂ ಒಂದೇ ಒಂದೂ ಕಳೇಬರ ಸಿಕ್ಕಿಲ್ಲ. ಹೀಗಾಗಿ ಅಗೆದಿರುವ ಜಾಗದಲ್ಲಿ ಮತ್ತೆ ಮಣ್ಣನ್ನು ಮುಚ್ಚಲಾಗುತ್ತಿದೆ. ಈಮಧ್ಯೆ, ಸಾಕ್ಷಿ ಹಾಗೂ ದೂರುದಾರ ತೋರಿಸಿರುವ 13ನೇ ಸ್ಥಳದಲ್ಲೂ ಅಸ್ಥಿಪಂಜರಗಳು ಪತ್ತೆಯಾಗದಿದ್ದರೆ ಎಸ್ಐಟಿ ಶೋಧ ಸ್ಥಗಿತಗೊಳಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಮಂಗಳವಾರ ಕಾಂಗ್ರೆಸ್ ಶಾಸಕಾಂಗ ಸಭೆ ನಡೆದಿದ್ದು, ಸಭೆಯಲ್ಲಿ ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣ ಕುರಿತು ಚರ್ಚೆಗಳು ನಡೆದಿವೆ. 13ನೇ ಸ್ಥಳದಲ್ಲೂ ಯಾವುದೇ ಅಸ್ಥಿಪಂಜರ ಪತ್ತೆಯಾಗದೇ ಹೋದಲ್ಲಿ ಎಸ್ಐಟಿ ಶೋಧ ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಗಬಹುದು. ಈ ಬಗ್ಗೆ ಸಚಿವರ ಜೊತೆಗೆ ಚರ್ಚೆ ಮಾಡಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಸಿಎಂ ತಿಳಿಸಿದ್ದಾರೆ. ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ನೇತೃತ್ವದಲ್ಲಿ ಪಕ್ಷದ ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರ ಗುಂಪು ಮುಂದಿನ ಭಾನುವಾರ ಧರ್ಮಸ್ಥಳಕ್ಕೆ ಭೇಟಿ ನೀಡಲಿದೆ. ಅಲ್ಲದೆ, ಸಾಮೂಹಿಕ ಸಮಾಧಿ ಪ್ರಕರಣವನ್ನು ಉಲ್ಲೇಖಿಸಿ ಧರ್ಮಸ್ಥಳದ ಹೆಸರನ್ನು ಹಾಳುಮಾಡುವ ಪ್ರಯತ್ನಗಳ ವಿರುದ್ಧ ಧರ್ಮಸ್ಥಳ ಭಕ್ತರು ರಾಜ್ಯದ ಹಲವೆಡೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಮಾಜಿ ಡಿಜಿಪಿ ಓಂ ಪ್ರಕಾಶ್ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಕೇಂದ್ರ ಅಪರಾಧ ವಿಭಾಗ (ಸಿಸಿಬಿ) 1,150 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದು, ಪತ್ನಿ ಪಲ್ಲವಿ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಿದೆ. 1981ನೇ ಬ್ಯಾಚ್ ಐಪಿಎಸ್ ಅಧಿಕಾರಿ ಪ್ರಕಾಶ್ ಅವರನ್ನು ಏಪ್ರಿಲ್ 20ರಂದು ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್ ನಿವಾಸದಲ್ಲಿ ಪಲ್ಲವಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಅಪರಾಧದ ತೀವ್ರತೆಯನ್ನು ಪರಿಗಣಿಸಿ, ಕರ್ನಾಟಕ ಸರ್ಕಾರ ತನಿಖೆಯನ್ನು ಸಿಸಿಬಿಗೆ ವರ್ಗಾಯಿಸಿತ್ತು. ಕೊಲೆಗೆ ಸಂಬಂಧಿಸಿದಂತೆ ಮೊದಲ ಎಸಿಎಂಎಂ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ಓಂ ಪ್ರಕಾಶ್ ಪತ್ನಿ ಪಲ್ಲವಿ ಅವರನ್ನು ಪ್ರಮುಖ ಆರೋಪಿಯನ್ನಾಗಿ ಹೆಸರಿಸಲಾಗಿದೆ. ಮಗಳು ಕೃತಿ ವಿರುದ್ಧ ಸಾಕಷ್ಟು ಪುರಾವೆಗಳಿಲ್ಲದ ಕಾರಣ ಆರೋಪಗಳಿಂದ ಮುಕ್ತಗೊಳಿಸಲಾಗಿದೆ. ಪಲ್ಲವಿ ಅವರನ್ನು ಕೊಲೆ ಆರೋಪದ ಮೇಲೆ ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.
ಕಾರವಾರ-ಅಂಕೋಲಾ ಕ್ಷೇತ್ರದ ಶಾಸಕ ಸತೀಶ್ ಸೈಲ್ ಅವರ ಸದಾಶಿವಗಡದಲ್ಲಿರುವ ಮನೆ ಮೇಲೆ ಇಂದು ಬುಧವಾರ ಬೆಳಗ್ಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ತಪಾಸಣೆ ನಡೆದಿದೆ. ಶಾಸಕರ ಮನೆಯ ಮುಂಭಾದಲ್ಲಿ ಸಿಐಎಸ್ಎಫ್ ಸಿಬ್ಬಂದಿಯ ಕಾವಲು ನಿಯೋಜಿಸಲಾಗಿದೆ. ಮಲ್ಲಿಕಾರ್ಜುನ ಶಿಪ್ಪಿಂಗ್ ಕಂಪನಿ ಮೂಲಕ ಅಕ್ರಮ ಅದಿರು ಸಾಗಾಟ ಮಾಡಿದ್ದ ಪ್ರಕರಣದಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ದೆ ಅವರ ತಂಡ ಸೈಲ್ ವಿರುದ್ಧ ದೂರು ದಾಖಲಿಸಿತ್ತು. ಸತೀಶ್ ಸೈಲ್ ಹೈಕೋರ್ಟ್ನಲ್ಲಿ ಜಾಮೀನು ಪಡೆದಿದ್ದಾರೆ.
ಬಳ್ಳಾರಿಯಲ್ಲಿ ATM ಕಿಯೋಸ್ಕ್ ಮುರಿದು ಹಣ ಕದಿಯುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸಿದ್ದಾರೆ. ಸೋಮವಾರ ಮಧ್ಯರಾತ್ರಿ ನಗರದ ಕಾಳಮ್ಮ ಸರ್ಕಲ್ ಬಳಿ ಇರುವ ಆಕ್ಸಿಸ್ ಬ್ಯಾಂಕ್ ಎಟಿಎಂಗೆ ನುಗ್ಗಿ ಕಳ್ಳತನ ಮಾಡಲು ಯತ್ನಿಸಿದ ಆರೋಪಿಯನ್ನು ರಾತ್ರಿ ಬೀಟ್ ಪೊಲೀಸರು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಬ್ರೂಸ್‌ಪೇಟೆ ಪೊಲೀಸ್ ಠಾಣೆಯ ಎಎಸ್‌ಐ ಮಲ್ಲಿಕಾರ್ಜುನ್ ಅವರಿಗೆ ಎಟಿಎಂನಲ್ಲಿ ಕಳ್ಳನ ಇರುವಿಕೆಯ ಬಗ್ಗೆ ಸುಳಿವು ಸಿಕ್ಕಿದ್ದು, ಕೂಡಲೇ ಎಎಸ್‌ಐ ಮತ್ತು ಇಬ್ಬರು ಕಾನ್‌ಸ್ಟೆಬಲ್‌ಗಳು ಎಟಿಎಂಗೆ ಧಾವಿಸಿ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತ ವ್ಯಕ್ತಿ ವೆಂಕಟೇಶ್ ಆಂಧ್ರ ಪ್ರದೇಶದ ಅನಂತಪುರದ ಮೂಲದವರಾಗಿದ್ದಾರೆ. ಪೊಲೀಸ್ ಕಾರ್ಯಾಚರಣೆಯ ರೋಚಕ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಇಂಥಹದ್ದೇ ಮತ್ತೊಂದು ಘಟನೆ ಸಂಭವಿಸಿದ್ದು, 10-12 ಕ್ಯಾಬ್ ಚಾಲಕರ ಗುಂಪು ಮಹಿಳೆಯನ್ನು ಹಿಂಬಾಲಿಸಿ ಹಲ್ಲೆ ನಡೆಸಿರುವ ಘಟನೆ ನಗರದ ಹುಳಿಮಾವು ನಲ್ಲಿ ನಡೆದಿದೆ. ಈ ಗುಂಪು ತನ್ನ ಕುಟುಂಬದ ಮೇಲೂ ಹಲ್ಲೆ ನಡೆಸಿದೆ ಎಂದು ಮಹಿಳೆ ಆರೋಪಿಸಿದ್ದಾರೆ. ಅಡ್ಡಾದಿಡ್ಡಿಯಾಗಿ ನನ್ನ ಕಾರನ್ನು ಹಿಂದಿಕ್ಕಿದ್ದ ಕ್ಯಾಬ್ ಚಾಲಕರೊಬ್ಬರು, ಕ್ಯಾತೆ ತೆಗೆದು ಜಗಳ ಮಾಡಿದರು. ನಂತರ ಗುಂಪು ತನ್ನ ಅಪಾರ್ಟ್‌ಮೆಂಟ್‌ನವರೆಗೆ ಇಟ್ಟಿಗೆ ಹಿಡಿದುಕೊಂಡು ಹಿಂಬಾಲಿಸಿತು ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ವ್ಯಕ್ತಿಯೊಬ್ಬ ಕಾರಿನ ಗಾಜನ್ನು ಗುದ್ದುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ. ಮಹಿಳೆಯ ತಂದೆ ಹುಳಿಮಾವು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
Advertisement