
ನವದೆಹಲಿ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್ (Darshan) ಪವಿತ್ರಾಗೌಡ (Pavithra Gowda) ಸೇರಿ ಇತರ ಆರೋಪಿಗಳಿಗೆ ನಾಳೆ ಮಹತ್ವದ ದಿನವಾಗಿದೆ. ಹೌದು... ಕರ್ನಾಟಕ ಹೈಕೋರ್ಟ್ ನೀಡಿದ್ದ ಜಾಮೀನು ರದ್ದತಿಗೆ ಕೋರಿ ಬೆಂಗಳೂರು ಪೊಲೀಸರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ಅಂತಿಮ ಆದೇಶವನ್ನು ನಾಳೆ ಸುಪ್ರೀಂ ಕೋರ್ಟ್ ಘೋಷಿಸಲಿದೆ.
ಸುಪ್ರೀಂಕೋರ್ಟ್ (Supreme Court) ನ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್. ಮಹದೇವನ್ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ವಿಚಾರಣೆ ನಡೆಸಿತ್ತು. ವಾದ, ಪ್ರತಿವಾದ ಆಲಿಸಿದ್ದ ಪೀಠ ಆದೇಶವನ್ನು ಕಾಯ್ದಿರಿಸಿದ್ದು ಇದೀಗ ನಾಳೆಗೆ ದಿನಾಂಕವನ್ನು ಘೋಷಿಸಿದೆ. ಇನ್ನು ಕಳೆದ ಜುಲೈ 24ರಂದು ನಡೆದ ಕೊನೆಯ ವಿಚಾರಣೆಯ ಸಂದರ್ಭದಲ್ಲಿ ದ್ವಿಸದಸ್ಯ ಪೀಠ ವಾದ-ಪ್ರತಿವಾದವನ್ನು ಮೂರು ಪುಟಗಳಲ್ಲಿ ಸಂಕ್ಷಿಪ್ತವಾಗಿ ಒಂದು ವಾರದಲ್ಲಿ ತಿಳಿಸಿ ಎಂದು ಸೂಚಿಸಿದ್ದರು. ಅದರಂತೆ ದರ್ಶನ್ ಮತ್ತು ಪವಿತ್ರಾ ಗೌಡ ಹಾಗೂ ಬೆಂಗಳೂರು ಪೊಲೀಸರ ಪರ ವಕೀಲರು ಲಿಖಿತ ರೂಪದಲ್ಲಿ ವಾದವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ನಟ ದರ್ಶನ್ ಅಂಡ್ ಗ್ಯಾಂಗ್ ಗೆ ಜಾಮೀನು ನೀಡಿದ್ದ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್ ತೀವ್ರವಾಗಿ ಟೀಕಿಸಿತ್ತು. ಜಾಮೀನು ನೀಡುವ ವಿಚಾರದಲ್ಲಿ ಹೈಕೋರ್ಟ್ ನ್ಯಾಯಾಧೀಶರು ಈ ರೀತಿಯಾದ ತಪ್ಪು ಮಾಡಬಹುದಾ ಎಂದು ಸುಪ್ರೀಂಕೋರ್ಟ್ ಕಟುವಾಗಿ ಪ್ರಶ್ನಿಸಿತ್ತು. ಹೀಗಾಗಿ ದರ್ಶನ್ ಜಾಮೀನು ರದ್ದಾಗುವ ಸಾಧ್ಯತೆ ಇದೆ.
Advertisement