
ಧರ್ಮಸ್ಥಳ: ಧರ್ಮಸ್ಥಳದ ನೇತ್ರಾವತಿ ನದಿ ದಡದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರವೂ ಶೋಧ ಕಾರ್ಯ ಮುಂದುವರೆದಿದೆ.
ಬುಧವಾರ 13ನೇ ಸ್ಥಳದಲ್ಲಿ ಸುಮಾರು 18 ಅಡಿ ಆಳಕ್ಕೆ ನೆಲವನ್ನು ಅಗೆದು ಶೋಧಿಸಲಾಯಿತು. ಆದರೆ ಯಾವುದೇ ಮಾನವನ ಅವಶೇಷಗಳು ಪತ್ತೆಯಾಗಿರಲಿಲ್ಲ. ಇಂದು ಸಾಕ್ಷಿದಾರ ಕನ್ಯಾಡಿ ಬಳಿ ಹೊಸ ಜಾಗವನ್ನು ತೋರಿಸಿದ್ದು, ಅಲ್ಲಿಯೂ ಎಸ್ ಐಟಿ ಅಧಿಕಾರಿಗಳ ನೇತೃತ್ವದಲ್ಲಿ ಉತ್ಖನ ಕಾರ್ಯ ನಡೆಸಲಾಗುತ್ತಿದೆ.
ನೇತ್ರಾವತಿ ನದಿ ಪಕ್ಕದಲ್ಲಿರುವ ಈ ಜಾಗಕ್ಕೆ ಖಾಸಗಿ ಅಡಿಕೆ ತೋಟವೊಂದರ ಮೂಲಕ ಸಾಗಬೇಕಿದೆ. ಸ್ನಾನಘಟ್ಟದ ಪಕ್ಕದಲ್ಲಿ ಹರಿಯುವ ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿ ಈ ಸ್ಥಳ ಇದೆ.ವಿಶೇಷ ತನಿಖಾ ತಂಡದ ಅಧಿಕಾರಿಗಳು ಸಾಕ್ಷಿದಾರನ ಜೊತೆಗೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಜಾಗವನ್ನು ತಲುಪಿದರು.
ವಿಧಿ ವಿಜ್ಞಾನ ತಜ್ಞರು ಹಾಗೂ ನೆಲ ಅಗೆಯುವ ಕಾರ್ಮಿಕರು ಸ್ಥಳದಲ್ಲಿದ್ದು, ನೆಲ ಅಗೆಯುವ ಯಂತ್ರದೊಂದಿಗೆ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ. ಈ ಜಾಗಕ್ಕೆ ಮಾಧ್ಯಮ ಪ್ರತಿನಿಧಿಗಳಿಗೆ ಪ್ರವೇಶ ನಿರಾಕರಿಸಲಾಗಿದೆ.
ಸಾಕ್ಷಿದಾರ ಹೇಳಿರುವ 17 ಜಾಗಗಳ ಪೈಕಿ ಇದುವರೆಗೂ ಎರಡು ಕಡೆ ಮಾತ್ರ ಮೃತದೇಹದ ಅವಶೇಷಗಳು ಪತ್ತೆಯಾಗಿವೆ.
ದೂರುದಾರ-ಸಾಕ್ಷಿಯು ಮಾಜಿ ನೈರ್ಮಲ್ಯ ಕಾರ್ಮಿಕರಾಗಿದ್ದು, ಒಂದು ದಶಕದ ಹಿಂದೆ ಧರ್ಮಸ್ಥಳ ಗ್ರಾಮದಲ್ಲಿ ನಡೆದ ಅತ್ಯಾಚಾರ ಮತ್ತು ಕೊಲೆ ಸಂತ್ರಸ್ತರ ಶವಗಳನ್ನು ಹೂತಿದ್ದೆ ಎಂದು ಆರೋಪಿಸಿದ್ದಾರೆ. ಜುಲೈ 19 ರಂದು ರಚಿಸಲಾದ DGP ಪ್ರಣಬ್ ಮೊಹಂತಿ ನೇತೃತ್ವದಲ್ಲಿ SIT ಈ ಪ್ರಕರಣದ ತನಿಖೆ ನಡೆಸುತ್ತಿದೆ.
Advertisement