
ಬೆಂಗಳೂರು: ಪ್ರವಾಸೋದ್ಯಮವನ್ನು ಸುಸ್ಥಿರವಾಗಿ ನಿರ್ವಹಿಸುವ ಮತ್ತು ಪಶ್ಚಿಮ ಘಟ್ಟಗಳನ್ನು ರಕ್ಷಿಸುವ ಪ್ರಯತ್ನದ ಭಾಗವಾಗಿ, ಊಟಿ ಮತ್ತು ಕೊಡೈಕೆನಾಲ್ ಸೇರಿದಂತೆ ಹಲವಾರು ಜನಪ್ರಿಯ ಪ್ರವಾಸಿ ತಾಣಗಳು ಈಗ ಹಸಿರು ಪಾಸ್ ಅಥವಾ ಇ-ಪಾಸ್ ಅಳವಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿವೆ.
ಉತ್ತರಾಖಂಡ ಮತ್ತು ಇತರ ಹಿಮಾಲಯ ಪ್ರದೇಶಗಳಲ್ಲಿ ಜಾರಿಗೊಳಿಸಿದಂತೆಯೇ ಪಶ್ಚಿಮ ಘಟ್ಟಗಳಿಗೂ ಹೆಚ್ಚಿನ ಹಾನಿಯಾಗದಂತೆ ವಿವರವಾದ ಸಾಗಣೆ ಸಾಮರ್ಥ್ಯ ಅಧ್ಯಯನ ಸಹ ಕೈಗೊಳ್ಳಲಾಗುತ್ತಿದೆ. ಘಟ್ಟಗಳ ಸಾಗಣೆ ಸಾಮರ್ಥ್ಯ ಅಧ್ಯಯನವನ್ನು ಕೈಗೊಳ್ಳುವ ಕಾರ್ಯವನ್ನು ಪಶ್ಚಿಮ ಘಟ್ಟಗಳ ಕಾರ್ಯಪಡೆ ಸಮಿತಿ(WGTFC)ಗೆ ವಹಿಸಲಾಗಿದೆ.
ಇತ್ತೀಚೆಗೆ ಸಲ್ಲಿಸಲಾದ ಮೌಲ್ಯಮಾಪನ ವರದಿಯಲ್ಲಿ, ಕರ್ನಾಟಕದ 10 ಜಿಲ್ಲೆಗಳಲ್ಲಿ, ಮುಖ್ಯವಾಗಿ ಕೊಡಗು, ಹಾಸನ, ಸಕಲೇಶಪುರ, ಶಿವಮೊಗ್ಗ, ಮಂಗಳೂರು, ಉತ್ತರ ಕನ್ನಡ ಮತ್ತು ಬೆಳಗಾವಿಯ ಜನಪ್ರಿಯ ಪ್ರವಾಸಿ ತಾಣಗಳಿಗೆ ಪಾಸ್ ಜಾರಿಗೊಳಿಸಲು ಸಮಿತಿ ಸೂಚಿಸಿದೆ.
ಕೊಡಗಿನ ಉದಾಹರಣೆಯನ್ನು ಉಲ್ಲೇಖಿಸಿದ ಅರಣ್ಯ ಮತ್ತು ಜಿಲ್ಲಾಡಳಿತ ಅಧಿಕಾರಿಗಳು, ಹಲವು ಹೋಂಸ್ಟೇಗಳು ಮತ್ತು ರೆಸಾರ್ಟ್‌ಗಳಿಗಾಗಿಯೇ ಹಲವು ರಸ್ತೆಗಳಿವೆ ಎಂದು ಹೇಳಿದರು. ಎಲ್ಲಾ ರಸ್ತೆಗಳನ್ನು ಬ್ಯಾರಿಕೇಡ್ ಮಾಡಲು ಮತ್ತು ಪರಿಶೀಲಿಸಲು ಸಾಧ್ಯವಿಲ್ಲ. ಆದರೆ ಊಟಿ ಮತ್ತು ಕೊಡೈಕೆನಾಲ್‌ನಲ್ಲಿ, ಎರಡು ಸ್ಥಳಗಳಿಗೆ ಹೋಗುವ ರಸ್ತೆಗಳನ್ನು ಗುರುತಿಸಿರುವುದರಿಂದ ಇದು ತುಂಬಾ ಸುಲಭವಾಗಿದೆ. "ನಿಯಂತ್ರಣ ಅಗತ್ಯವಿದೆ. ಕೊಡಗಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಜನಸಂದಣಿಯನ್ನು ನಿರ್ವಹಿಸುವುದು ಕಷ್ಟಕರವಾಗುತ್ತಿದೆ. ನೋಂದಣಿ ಪ್ರಕ್ರಿಯೆಯನ್ನು ಪರಿಚಯಿಸುವುದರೊಂದಿಗೆ ಚಾರಣ ಮಾರ್ಗಗಳಲ್ಲಿ ನಿರ್ಬಂಧಗಳನ್ನು ಜಾರಿಗೊಳಿಸಲಾಗಿದೆ. ಆದರೆ ಎಲ್ಲಾ ಸ್ಥಳಗಳಿಗೆ ಅಲ್ಲ" ಎಂದು ಕೊಡಗು ಜಿಲ್ಲಾಡಳಿತದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
"ವರದಿ ಸರ್ಕಾರದ ಮುಂದೆ ಇದೆ. ಸಂಬಂಧಪಟ್ಟವರ ಅಭಿಪ್ರಾಯ ಪಡೆದು ಇ-ಪಾಸ್ ಪರಿಚಯಿಸಲಾಗುವುದು. ಇದು ಪ್ರವಾಸೋದ್ಯಮವನ್ನು ನಿಯಂತ್ರಿಸುತ್ತದೆ, ಕಾನೂನುಬಾಹಿರ ಚಟುವಟಿಕೆಗಳನ್ನು ನಿಯಂತ್ರಿಸುತ್ತದೆ, ಜನಸಂದಣಿ ನಿರ್ವಹಣೆ ಮತ್ತು ಸುರಕ್ಷತೆಗೆ ಸಹಾಯ ಮಾಡುತ್ತದೆ" ಎಂದು WGTFC ಅಧ್ಯಕ್ಷ ಮೊಹಮ್ಮದ್ ತಬ್ರೆಜ್ ಶರೀಫ್ TNIE ಗೆ ಹೇಳಿದ್ದಾರೆ.
Advertisement