
ಬೆಂಗಳೂರು: ಕರ್ನಾಟಕದ ಹಲವು ಭಾಗಗಳಲ್ಲಿ ಇಂದು ಸಹ ನಿರಂತರ ಮಳೆಯಾಗಿದ್ದು ಬೆಳೆಗಳಿಗೆ ಹಾನಿಯಾಗಿದೆ. ರಸ್ತೆ ಸಂಪರ್ಕ ಕಡಿತಗೊಂಡಿವೆ. ಇನ್ನು ಪ್ರಮುಖ ಜಲಾಶಯಗಳು ಪೂರ್ಣ ಸಾಮರ್ಥ್ಯದ ಸಮೀಪಿಸುತ್ತಿದ್ದರೂ, ಮುನ್ನೆಚ್ಚರಿಕೆಯಾಗಿ ಜನರನ್ನು ಸ್ಥಳಾಂತರಿಸಲಾಯಿತು. ಧಾರವಾಡ, ಗದಗ, ದಾವಣಗೆರೆ, ಹಾವೇರಿ ಮತ್ತು ಉತ್ತರ ಕನ್ನಡದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಮನೆಗಳು ಮತ್ತು ಕೃಷಿಭೂಮಿಗೆ ಹಾನಿಯಾಗಿದೆ. ಮುನ್ನೆಚ್ಚರಿಕೆಯಾಗಿ ಕೆಲವು ಪ್ರದೇಶಗಳಲ್ಲಿ ಜನರನ್ನು ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಹರಿಯುತ್ತಿರುವ ನೀರಿನ ಪ್ರಮಾಣದಿಂದ ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ನಾರಾಯಣಪುರ ಜಲಾಶಯದಿಂದ 1.60 ಲಕ್ಷ ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದ್ದು ಹೀಗಾಗಿ ಶೀಲಹಳ್ಳಿ ಸೇತುವೆ ಮುಳುಗಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ನದಿ ದಂಡೆಯ ಉದ್ದಕ್ಕೂ ಇರುವ ಹಳ್ಳಿಗಳು ಈಗ ಪ್ರವಾಹದ ಭೀತಿಯಲ್ಲಿವೆ. ಶೀಲಹಳ್ಳಿ ಹಂಚಿನಾಳ ಸೇತುವೆ ಮುಳುಗಿರುವುದರಿಂದ ಕದ್ದರಗಡ್ಡಿ, ಯರಿಗೋಡಿ ಮತ್ತು ಹಂಚಿನಾಳ ಸೇರಿದಂತೆ ನದಿ ದಂಡೆಯ ಹಳ್ಳಿಗಳಿಗೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ಈಗ ಜಲದುರ್ಗ ಮೂಲಕ 45 ಕಿ.ಮೀ ಪರ್ಯಾಯ ಮಾರ್ಗವನ್ನು ತೆಗೆದುಕೊಂಡು ತಾಲ್ಲೂಕು ಕೇಂದ್ರ ಕಚೇರಿಯನ್ನು ತಲುಪಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ಅಪಾಯಕಾರಿ' ಮಟ್ಟಕ್ಕಿಂತ ಹೆಚ್ಚಾಗಿ ಹರಿಯುತ್ತಿರುವ ಕೃಷ್ಣಾ ನದಿಗೆ ಇಳಿಯದಂತೆ ಜಿಲ್ಲಾಡಳಿತದ ಹೈ ಅಲರ್ಟ್ ಎಚ್ಚರಿಕೆಗಳು ಮತ್ತು ನಿರ್ದೇಶನ ನೀಡಿದ್ದರೂ ಜಲಾವೃತವಾಗಿರುವ ಶೀಲಹಳ್ಳಿ ಸೇತುವೆಯ ಮೇಲೆ ಯುವಕರು ಬೈಕ್ ತೊಳೆಯುತ್ತಿರುವುದನ್ನು ತೋರಿಸುವ ವೀಡಿಯೊಗಳು ಆನ್‌ಲೈನ್‌ನಲ್ಲಿ ಕಾಣಿಸಿಕೊಂಡಿವೆ.
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗುತ್ತಿರುವುದರಿಂದ, ಕೃಷ್ಣಾ ಮತ್ತು ಭೀಮಾ ನದಿಗಳ ದಡದಲ್ಲಿ 'ಪ್ರವಾಹದ ಭೀತಿ' ಕೂಡ ಇದೆ. ಎರಡೂ ನದಿಗಳಿಗೆ ಹೆಚ್ಚಿನ ಪ್ರಮಾಣದ ನೀರು ಬಿಡುಗಡೆಯಾಗುತ್ತಿದೆ. ಭಾರೀ ಒಳಹರಿವಿನಿಂದಾಗಿ ಬಸವಸಾಗರ ಅಣೆಕಟ್ಟಿನ ಎಲ್ಲಾ 30 ಗೇಟ್‌ಗಳನ್ನು ತೆರೆಯಲಾಗಿದ್ದು, ಯಾದಗಿರಿ ಜಿಲ್ಲೆಯ ಗುರುಸಣಗಿ ಬ್ಯಾರೇಜ್‌ನ 17 ಗೇಟ್‌ಗಳನ್ನು ಸಹ ಎತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ, ಭಾರೀ ಮಳೆಯಿಂದಾಗಿ ಮಲಪ್ರಭಾ ನದಿ ಜಲಾನಯನ ಪ್ರದೇಶವು ಮುಳುಗಿದೆ. ನದಿಯ ಮೇಲಿನ ಪ್ರವಾಹದ ಸೇತುವೆಯನ್ನು ದಾಟಲು ಬೈಕ್ ಸವಾರ ಪ್ರಯತ್ನಿಸುತ್ತಿರುವ ವೀಡಿಯೊ ಹೊರಬಿದ್ದಿದೆ. ಅವರು ಬೈಕ್ ಸಮೇತ ಕೊಚ್ಚಿ ಹೋಗುತ್ತಿರುವುದು ಕಂಡುಬಂದಿದೆ. ಸ್ಥಳೀಯರು ಎಚ್ಚರಿಸುತ್ತಿದ್ದರೂ ಅವರು ತಮ್ಮ ಹುಚ್ಚಾಟ ನಡೆಸಿದ್ದು ಸ್ವಲ್ಪದರಲ್ಲೇ ಪಾರಾಗಿದ್ದಾರೆ.
ಬೀದರ್‌ನಲ್ಲಿ, ಅನಂತ ಪದ್ಮನಾಭ ದೇವಾಲಯದ ಗರ್ಭಗುಡಿಗೆ ನೀರು ನುಗ್ಗಿದೆ. ಈ ವರ್ಷ ಅತಿ ಹೆಚ್ಚು ಮಳೆಯಾಗಿ ರೈತರಿಗೆ ನಷ್ಟ ಉಂಟಾಗಿದೆ ಎಂದು ಬಿಜೆಪಿ ಶಾಸಕ ಶರಣು ಸಲಗರ್ ವಿಧಾನಸಭೆಗೆ ತಿಳಿಸಿದರು. ತೊಗರಿ, ಉದ್ದು ಮತ್ತು ಸೋಯಾಬೀನ್ ಸೇರಿದಂತೆ 1.21 ಲಕ್ಷ ಹೆಕ್ಟೇರ್‌ನಲ್ಲಿ ಬೆಳೆಗಳು ನಾಶವಾಗಿವೆ. ಅನೇಕ ಜಾನುವಾರುಗಳ ಸಾವುಗಳು ವರದಿಯಾಗಿವೆ. ದಯವಿಟ್ಟು ಬೀದರ್‌ನ ಬಸವಕಲ್ಯಾಣಕ್ಕೆ ಭೇಟಿ ನೀಡಿ ರೈತರ ನೋವನ್ನು ನೋಡಿ. ರೈತರಿಗೆ ಪರಿಹಾರವಾಗಿ ಕನಿಷ್ಠ 25,000 ರೂಪಾಯಿ ಘೋಷಿಸಿ ಎಂದು ಹೇಳಿದರು.
ಏತನ್ಮಧ್ಯೆ, ಮುಂದಿನ ಏಳು ದಿನಗಳಲ್ಲಿ ಕರ್ನಾಟಕದಾದ್ಯಂತ ವ್ಯಾಪಕ ಮಳೆಯಾಗುವ ಮುನ್ಸೂಚನೆಯನ್ನು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ನೀಡಿದೆ. ಕರಾವಳಿ ಮತ್ತು ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆಯಿದೆ. ಇಂದು ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಂದು ಅಥವಾ ಎರಡು ಸ್ಥಳಗಳಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ದಕ್ಷಿಣ ಕನ್ನಡದ ಹೆಚ್ಚಿನ ಭಾಗಗಳಲ್ಲಿ ಹಗುರದಿಂದ ಮಧ್ಯಮ ಮಳೆಯಾಗುವ ನಿರೀಕ್ಷೆಯಿದೆ.
ಉತ್ತರ ಒಳನಾಡಿನ ಬೆಳಗಾವಿಯಲ್ಲಿ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಭಾರೀ ಮಳೆಯಾಗಬಹುದು. ಬಾಗಲಕೋಟೆ, ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ ಮತ್ತು ಧಾರವಾಡದಲ್ಲಿ ಹಗುರದಿಂದ ಮಧ್ಯಮ ಮಳೆಯಾಗಬಹುದು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಶಿವಮೊಗ್ಗ, ತುಮಕೂರು, ಚಿಕ್ಕಮಗಳೂರು, ಕೊಡಗು, ಹಾಸನ ಮತ್ತು ಮಂಡ್ಯ ಸೇರಿದಂತೆ ದಕ್ಷಿಣ ಜಿಲ್ಲೆಗಳಲ್ಲಿಯೂ ಸಹ ಗಂಟೆಗೆ 30-40 ಕಿ.ಮೀ ವೇಗದಲ್ಲಿ ಗಾಳಿಯೊಂದಿಗೆ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕದ ಕರಾವಳಿ ಮತ್ತು ಒಳನಾಡಿನಲ್ಲಿ ಆಗಸ್ಟ್ 25ರವರೆಗೆ ಮಳೆ ಮುಂದುವರಿಯಲಿದೆ ಎಂದು ಐಎಂಡಿ ತಿಳಿಸಿದೆ. ಆಗಸ್ಟ್ 26 ರಂದು ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಬೀದರ್, ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಮೂಲಕ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಮುಂದಿನ 24-48 ಗಂಟೆಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ಮುನ್ಸೂಚನೆ ನೀಡಿದೆ.
ಜಲಾಶಯಗಳ ಸದ್ಯದ ನೀರಿನ ಮಟ್ಟ
ಬುಧವಾರದ ವೇಳೆಗೆ, ಆಲಮಟ್ಟಿ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟ 123.08 ಟಿಎಂಸಿ (ಸಾಮರ್ಥ್ಯ 123.08 ಟಿಎಂಸಿ), ತುಂಗಭದ್ರಾ ಅಣೆಕಟ್ಟೆಯಲ್ಲಿ 76.91 ಟಿಎಂಸಿ (105.79 ಟಿಎಂಸಿ), ಕೆಆರ್‌ಎಸ್‌ನಲ್ಲಿ 47.73 ಟಿಎಂಸಿ (49.45 ಟಿಎಂಸಿ), ಮತ್ತು ನಾರಾಯಣಪುರದಲ್ಲಿ 33.31 ಟಿಎಂಸಿ (33.31 ಟಿಎಂಸಿ) ಇದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ ತಿಳಿಸಿದೆ.
Advertisement