ರಾಜ್ಯದ ದಲಿತ ಸಮುದಾಯದ ಬಹುಕಾಲದ ಬೇಡಿಕೆಯಾದ ಒಳ ಮೀಸಲಾತಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದ್ದು, ಎಡಗೈ ಹಾಗೂ ಬಲಗೈ ಸಮುದಾಯಕ್ಕೆ ತಲಾ ಶೇ. 6 ರಷ್ಟು ಮೀಸಲಾತಿ ಕಲ್ಪಿಸಲಾಗುವುದು, ಇನ್ನು 63 ಜಾತಿಗಳಿರುವ ಇತರ ಸಮುದಾಯಕ್ಕೆ ಶೇಕಡ 5ರಷ್ಟು ಮೀಸಲಾತಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬುಧವಾರ ವಿಧಾನಸಭೆಯಲ್ಲಿ ಘೋಷಿಸಿದ್ದಾರೆ. ವಿಧಾಸಭೆಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಿನ್ನೆ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಜಾರಿ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ. ಈ ಮೂಲಕ ದಶಗಳ ಹೋರಾಟಕ್ಕೆ ನಮ್ಮ ಸರ್ಕಾರ ನ್ಯಾಯ ಒದಗಿಸಿದೆ ಎಂದು ತಿಳಿಸಿದ್ದಾರೆ. ಇದೇ ವೇಳೆ, ಒಳ ಮೀಸಲಾತಿ ಜಾರಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಲು ಸರ್ಕಾರ ತೀರ್ಮಾನ ಮಾಡಿದೆ ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳು ಆರ್ಥಿಕ ಕೊರತೆ ಸೃಷ್ಟಿ ಮಾಡಿದ್ದು, ಮೂಲಸೌಕರ್ಯಗಳ ಅನುದಾನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ ಎಂದು ಭಾರತದ ಲೆಕ್ಕನಿಯಂತ್ರಕರು ಮತ್ತು ಮಹಾ ಲೆಕ್ಕಪರಿಶೋಧಕರ ವರದಿ (ಸಿಎಜಿ) ವ್ಯಾಖ್ಯಾನಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಲೆಕ್ಕಪರಿಶೋಧನಾ ವರದಿಯನ್ನು ಮಂಡಿಸಿದರು. ಗ್ಯಾರಂಟಿ ಯೋಜನೆಗಳಿಗೆ ಹೆಚ್ಚಿನ ವೆಚ್ಚ ಮಾಡಿದ ಪರಿಣಾಮ 2023-24ನೇ ಸಾಲಿನಲ್ಲಿ 9,271 ಕೋಟಿ ರು. ರಾಜಸ್ವ ಕೊರತೆ ಉಂಟಾಗಿದೆ. ಅಲ್ಲದೆ, ವಿತ್ತೀಯ ಕೊರತೆ 65,522 ಕೋಟಿ ರೂ.ಗೆ ಏರಿಕೆಯಾಗುವಂತಾಗಿದೆ ಎಂದು ಸಿಎಜಿ ವರದಿ ಹೇಳಿದೆ. ವಿತ್ತೀಯ ಕೊರತೆ ಮತ್ತು ರಾಜಸ್ವ ಕೊರತೆಯನ್ನು ಸರಿದೂಗಿಸಲು ರಾಜ್ಯ ಸರ್ಕಾರ 63 ಸಾವಿರ ಕೋಟಿ ರೂ. ನಿವ್ವಳ ಮಾರುಕಟ್ಟೆ ಸಾಲವನ್ನು ಪಡೆದುಕೊಂಡಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಕೋಲಾರ ಜಿಲ್ಲೆಯ ವೇಮಗಲ್-ಕುರುಗಲ್ ಪಟ್ಟಣ ಪಂಚಾಯಿತಿ ಚುನಾವಣೆಯ ಫಲಿತಾಂಶ ಬುಧವಾರ ಪ್ರಕಟವಾಗಿದ್ದು, ಆಡಳಿತಾರೂಢ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಒಟ್ಟು 17 ವಾರ್ಡ್‌ಗಳಲ್ಲಿ ಆರು ವಾರ್ಡ್‌ಗಳಲ್ಲಿ ಕಾಂಗ್ರೆಸ್ ಗೆದ್ದರೆ, ಜೆಡಿಎಸ್-ಬಿಜೆಪಿ ಮೈತ್ರಿಕೂಟ ಹತ್ತು ವಾರ್ಡ್‌ಗಳನ್ನು ಗೆದ್ದಿದೆ. ಒಂದು ವಾರ್ಡ್‌ನಲ್ಲಿ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ. 2019 ರಲ್ಲಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರ ವೇಮಗಲ್ ಗ್ರಾಮ ಪಂಚಾಯಿತಿ ಮತ್ತು ಕುರುಗಲ್ ಪಂಚಾಯತ್ ಅನ್ನು ವಿಲೀನಗೊಳಿಸಿ 17 ವಾರ್ಡ್‌ಗಳನ್ನು ಒಳಗೊಂಡ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಿತ್ತು. ಮೊದಲ ಬಾರಿಗೆ ನಡೆದ ವೇಮಗಲ್ - ಕುರುಗಲ್ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಇದಾಗಿದೆ.
ಆನ್‌ಲೈನ್ ರಿಯಲ್ ಮನಿ ಗೇಮಿಂಗ್ ಮೇಲೆ ಸಂಪೂರ್ಣ ನಿಷೇಧ ಹೇರುವ ಕೇಂದ್ರದ ನಿರ್ಧಾರಕ್ಕೆ ಐಟಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಬುಧವಾರ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಇದು "ಮೋದಿ ಸರ್ಕಾರದ ಕೆಟ್ಟ ನೀತಿ ನಿರೂಪಣೆಯ ಮತ್ತೊಂದು ಮಾಸ್ಟರ್‌ಸ್ಟ್ರೋಕ್" ಎಂದು ಟೀಕಿಸಿದ್ದಾರೆ. ಕೇಂದ್ರದ ಈ ನಿರ್ಧಾರವು ರಾಜ್ಯದ ಆದಾಯ, ಉದ್ಯೋಗ ಮತ್ತು ಹೂಡಿಕೆಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ. "ಆನ್‌ಲೈನ್ ಆರ್‌ಎಂಜಿ ಮೂಲಕ ಭಾರತವು ಜಿಎಸ್‌ಟಿ ಮತ್ತು ಆದಾಯ ತೆರಿಗೆಯಿಂದ ವಾರ್ಷಿಕ 20,000 ಕೋಟಿ ರೂ. ಗಳಿಸುತ್ತಿದೆ. ನಿಷೇಧ ರಾಜ್ಯಗಳ ಈ ಆದಾಯವನ್ನು ಕಸಿದುಕೊಳ್ಳುತ್ತದೆ" ಎಂದು ಪ್ರಿಯಾಂಕ್ ಖರ್ಗೆ 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ. 2,000 ಕ್ಕೂ ಹೆಚ್ಚು ಗೇಮಿಂಗ್ ಸ್ಟಾರ್ಟ್‌ಅಪ್‌ಗಳು ಮತ್ತು ಐಟಿ, ಎಐ ಹಾಗೂ ವಿನ್ಯಾಸದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಉದ್ಯೋಗಗಳು ಅಪಾಯಕ್ಕೆ ಸಿಲುಕುತ್ತವೆ ಎಂದು ಸಚಿವರು ಆರೋಪಿಸಿದ್ದಾರೆ.
ಧರ್ಮಸ್ಥಳ ಪ್ರಕರಣದ ಸಂಬಂಧ ದಿನದಿಂದ ದಿನಕ್ಕೆ ಹೊಸ ಮಾಹಿತಿ ಬಹಿರಂಗವಾಗುತ್ತಿದ್ದು, ನೇತ್ರಾವತಿ ನದಿ ದಡದಲ್ಲಿ ನೂರಾರು ಮಹಿಳೆಯರು, ಯುವತಿಯರ ಶವಗಳನ್ನು ಹೂತು ಹಾಕಿದ್ದೇನೆ ಎಂಬ ಅನಾಮಿಕನ ಕುರಿತು ಆತನ ಜೊತೆಗೆ ಕೆಲಸ ಮಾಡಿದ್ದ ಸ್ನೇಹಿತ ನೀಡಿರುವ ಹೇಳಿಕೆ ಸಂಚಲನ ಮೂಡಿಸಿದೆ. ಮಾಸ್ಕ್ ಮ್ಯಾನ್ ಹೇಳಿದಂತೆ ಧರ್ಮಸ್ಥಳದ ಬಳಿ ನೂರಾರು, ಸಾವಿರಾರು ಶವಗಳನ್ನು ಹೂತು ಹಾಕಿಲ್ಲ. ಆತ ಹಣಕ್ಕಾಗಿ ಈ ರೀತಿಯ ಸುಳ್ಳು ಆರೋಪ ಮಾಡಿರುವ ಸಾಧ್ಯತೆಯಿದೆ ಎಂದು ಸ್ವಚ್ಛತಾ ಕೆಲಸ ಮಾಡುತ್ತಿದ್ದ ರಾಜು ಹೇಳಿದ್ದಾರೆ. ಧರ್ಮಸ್ಥಳದಲ್ಲಿ ನಾಲ್ಕು ವರ್ಷಗಳ ಕಾಲ ಕೆಲಸ ಮಾಡಿದ್ದೇನೆ. ನೂರಾರು ಶವಗಳನ್ನು ಹೂತಿದ್ದೇನೆ ಎನ್ನುವುದು ಸುಳ್ಳು. ಅಷ್ಟೊಂದು ಶವ ಹೂತಿದ್ದರೆ ಮೂಳೆಗಳಾದ್ರೂ ಸಿಗಬೇಕಿತ್ತು ಎಂದು ಹೇಳಿದ್ದಾರೆ.
Advertisement