
ಬೆಂಗಳೂರು: ಸೌಹಾರ್ದ ಸಹಕಾರಿ ಮಂಡಳಿಗಳ ಸದಸ್ಯರು ಪ್ರತಿ ವರ್ಷ ತಮ್ಮ ಕುಟುಂಬದ ಆಸ್ತಿ ವಿವರ ಸಲ್ಲಿಸುವುದನ್ನು ಕಡ್ಡಾಯ ಮಾಡಲು ಸರ್ಕಾರ ತಂದಿದ್ದ ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ’ಯು ವಿಧಾನ ಪರಿಷತ್ತಿನಲ್ಲಿ ಸೋಲು ಕಂಡಿತು.
ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ 2025 ಈ ಹಿಂದೆ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟಿತ್ತು. 23 ಸದಸ್ಯರು ಮಸೂದೆಯನ್ನು ಬೆಂಬಲಿಸಿದರೆ, ಬಿಜೆಪಿ-ಜೆಡಿಎಸ್ ಒಕ್ಕೂಟದ 26 ಎಂಎಲ್‌ಸಿಗಳು ಇದನ್ನು ವಿರೋಧಿಸಿದ್ದರಿಂದ ಅದು ಮೂರು ಮತಗಳಿಂದ ಸೋಲಿಗೆ ಒಳಗಾಯಿತು.
ವಿಧಾನ ಪರಿಷತ್ತಿನ ಬುಧವಾರದ ಕಲಾಪದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ್ ಅವರು ಸದರಿ ಮಸೂದೆ ಮಂಡಿಸಿದರು.
ಸರ್ಕಾರಿ ಸೌಹಾರ್ದ ಸಂಘಗಳ ನಾಮನಿರ್ದೇಶಿತ ಅಧಿಕಾರಿಗಳು, ಕಾರ್ಯನಿರ್ವಾಹಕರು ಹಾಗೂ ನಿರ್ದೇಶಕರು ಪ್ರತಿ ವರ್ಷ ಆಸ್ತಿ ಘೋಷಣೆ ಮಾಡಬೇಕು. ಕಡ್ಡಾಯ ಲೆಕ್ಕಪರಿಶೋಧಕರಿಂದ ಲೆಕ್ಕಪತ್ರ ನಿರ್ವಹಣೆ ಬಗ್ಗೆ ಆಡಿಟ್ ಮಾಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಮಸೂದೆಯನ್ನು ಪರಿಚಯಿಸಿದ ನಂತರ ಕಾನೂನು ಸಚಿವ ಎಚ್‌ಕೆ ಪಾಟೀಲ್, ಅಪೆಕ್ಸ್ ಬ್ಯಾಂಕ್ ಅಥವಾ ಡಿಸಿಸಿ ಬ್ಯಾಂಕ್‌ಗಳಲ್ಲಿ ಶೇ. 20 ರಷ್ಟು ಠೇವಣಿ ಇಡುವುದರಿಂದ ಸೌಹಾರ್ದ ಸಹಕಾರಿ ಸಂಘಗಳ ಆರ್ಥಿಕ ಸ್ಥಿತಿಯನ್ನು ಕಾಪಾಡಿಕೊಳ್ಳಲು ಸಹಾಯವಾಗುತ್ತದೆ. ಕೆಲವು ಬದಲಾವಣೆಗಳ ಮೂಲಕ ಸಹಕಾರಿ ಸಂಘಗಳನ್ನು ಬಲಪಡಿಸಲು ಕರ್ನಾಟಕ ಸೌಹಾರ್ದ ಸಹಕಾರಿ ತಿದ್ದುಪಡಿ ಮಸೂದೆ 2025 ಅನ್ನು ತರಲಾಗಿದೆ ಎಂದು ಹೇಳಿದರು.
ಮಸೂದೆಯ ಪ್ರಕಾರ, ಸೌಹಾರ್ದ ಬ್ಯಾಂಕಿನ ಸದಸ್ಯರು ಇತರ ನಿಗದಿತ ಬ್ಯಾಂಕ್‌ಗಳಲ್ಲಿ ಠೇವಣಿ ಇಟ್ಟರೆ, ನೋಂದಣಿದಾರರಿಂದ ಪೂರ್ವಾನುಮತಿ ಪಡೆಯಬೇಕು. ಸರ್ಕಾರ ಸಹಕಾರಿ ವಲಯದ ಕತ್ತು ಹಿಸುಕಲು ಪ್ರಯತ್ನಿಸುತ್ತಿದೆ ಎಂದು ಬಿಜೆಪಿ-ಜೆಡಿಎಸ್ ಸದಸ್ಯರು ಆರೋಪಿಸಿದರು ಮತ್ತು ಈ ನಿಬಂಧನೆಗಳನ್ನು ಕೈಬಿಡಬೇಕೆಂದು ಒತ್ತಾಯಿಸಿದರು.
Advertisement