ಕಸದ ಮೇಲಿನ ಸೆಸ್ ಪ್ರಾರಂಭಿಸಿದ್ದು ಬಿಜೆಪಿ: ಡಿ.ಕೆ ಶಿವಕುಮಾರ್

ಕಸ ವಿಲೇವಾರಿಗೆ ನೈಸ್ ಸಂಸ್ಥೆಗೆ ಸೇರಿದ ಜಾಗವನ್ನು ಪಡೆಯಲಾಗಿದೆ. ದೊಡ್ಡಬಳ್ಳಾಪುರ ಬಳಿಯ ಜಾಗಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಬಾಕಿಯಿತ್ತು. ಕ್ಯಾಬಿನೆಟ್ ಅನುಮತಿ ಪಡೆದು ಮುಂದುವರಿದಿದ್ದೇವೆ.
DK Shivakumar
ಡಿ.ಕೆ ಶಿವಕುಮಾರ್ (ಸಂಗ್ರಹ ಚಿತ್ರ)
Updated on

ಬೆಂಗಳೂರು: ನಗರದ ಕಸ ವಿಲೇವಾರಿಗೆ 28 ವಿಧಾನಸಭಾ ಕ್ಷೇತ್ರಗಳಲ್ಲಿ 33 ಪ್ಯಾಕೇಜ್ ಗಳಾಗಿ ವಿಂಗಡಿಸಿ ಟೆಂಡರ್ ಕರೆಯಲಾಗಿದೆ. ನಾಲ್ಕು ಜಾಗಗಳಲ್ಲಿ ತ್ಯಾಜ್ಯದಿಂದ ಗ್ಯಾಸ್, ವಿದ್ಯುತ್ ಉತ್ಪಾದಿಸುವ ಯೋಜನೆ ರೂಪಿಸಲಾಗಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ತಿಳಿಸಿದರು.

ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಕೇಶವ ಪ್ರಸಾದ್ ಅವರು ಬೆಂಗಳೂರಿನ ಕಸ ವಿಲೇವಾರಿ ಹಾಗೂ ಕಸದ ಸೆಸ್ ವಿಚಾರವಾಗಿ ಕೇಳಿದ ಪ್ರಶ್ನೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆಗಿರುವ ಶಿವಕುಮಾರ್ ಅವರು ಗುರುವಾರ ಉತ್ತರಿಸಿದರು.

ಕಸ ವಿಲೇವಾರಿಗೆ ನೈಸ್ ಸಂಸ್ಥೆಗೆ ಸೇರಿದ ಜಾಗವನ್ನು ಪಡೆಯಲಾಗಿದೆ. ದೊಡ್ಡಬಳ್ಳಾಪುರ ಬಳಿಯ ಜಾಗಕ್ಕೆ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಬಾಕಿಯಿತ್ತು. ಕ್ಯಾಬಿನೆಟ್ ಅನುಮತಿ ಪಡೆದು ಮುಂದುವರಿದಿದ್ದೇವೆ. ಕಸ ವಿಲೇವಾರಿಗೆಂದು ಆಧುನಿಕ ತಂತ್ರಜ್ಞಾನದ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಇದನ್ನು ಗುತ್ತಿಗೆ ಆಧಾರದ ಮೇಲೆ ನಿರ್ವಹಣೆ ಮಾಡಬೇಕು ಎನ್ನುವ ಆಲೋಚನೆಯಿದೆ ಎಂದು ತಿಳಿದರು.

ಬೆಂಗಳೂರಿನ ಕಸದ ಮಾಫಿಯಾವನ್ನು ಅಷ್ಟು ಸುಲಭದಲ್ಲಿ ಭೇದಿಸಲು ಆಗುವುದಿಲ್ಲ. ನಿಮ್ಮ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗಲೂ 98 ವಾರ್ಡ್ ಗಳಿಗೆ ಟೆಂಡರ್ ಕರೆದಾಗ ಅದನ್ನೂ ಮಾಡಲು ಬಿಡಲಿಲ್ಲ. ಕಸ ವಿಲೇವಾರಿ ವಿಚಾರಕ್ಕೆ ನಾನೂ ಸಹ ದೊಡ್ಡ ಹೋರಾಟ ಮಾಡಿದೆ. ಈ ಹಿಂದಿನ ಟೆಂಡರ್ ವ್ಯವಸ್ಥೆ ರದ್ದುಗೊಳಿಸಿ ಹೊಸ ಟೆಂಡರ್ ಕರೆಯಬೇಕು ಎಂದು ನ್ಯಾಯಲಯ ನಮ್ಮಿಂದ ಅಫಿಡವಿಟ್ ಬರೆಸಿಕೊಂಡಿದೆ. ಟೆಂಡರ್ ನಲ್ಲಿ ಅಕ್ರಮ ನಡೆದಿದೆ ಎಂದು ವರದಿ ಬಂದ ಮೇಲೆ ತನಿಖೆ ನಡೆಸಿ ರದ್ದುಗೊಳಿಸಲಾಗಿದೆ. ಕಸ ವಿಲೇವಾರಿ ಘಟಕಗಳನ್ನು ಸಹ ತೆರೆಯಲಾಗಿದೆ ಎಂದರು.

DK Shivakumar
ಕಳಸಾ ಬಂಡೂರಿ: ನಮ್ಮ ಪಾಲಿನ ನೀರು ಬಳಸಲು ಸಂಪೂರ್ಣ ಹಕ್ಕಿದೆ; ಅಗತ್ಯ ಬಿದ್ದರೆ ಅರ್ಜಿ ಹಿಂಪಡೆಯಲು ಸಿದ್ಧ- ಡಿ.ಕೆ ಶಿವಕುಮಾರ್

ಕಸದ ಸಮಸ್ಯೆ ನಿವಾರಿಸಲು ದೆಹಲಿ, ಹೈದರಾಬಾದ್, ಚೆನ್ನೈ ನಗರಗಳಿಗೆ ಹೋಗಿ ಕಸ ವಿಲೇವಾರಿ ಮಾದರಿಯನ್ನು ನೋಡಿಕೊಂಡು ಬಂದಿದ್ದೇನೆ. ನಾನು ಈ ಹಿಂದೆ ಇಂಧನ ಸಚಿವನಾಗಿದ್ದಾಗ ಒಂಬತ್ತು ಕಡೆ ಕಸ ಆಧಾರಿತ ಇಂಧನ ತಯಾರಿಕೆ ಘಟಕಗಳನ್ನು ಸ್ಥಾಪಿಸಲಾಗಿತ್ತು. ಆದರೆ ಒಂದೇ ಒಂದು ಸಹ ಯಶಸ್ವಿಯಾಗಿಲ್ಲ. ಪ್ರಸ್ತುತ ಬಿಡದಿಯಲ್ಲಿ ಒಂದು ಘಟಕ ಮಾತ್ರ ಕಾರ್ಯಾಚರಣೆ ನಡೆಸುತ್ತಿದೆ. ಸಣ್ಣ ವಿದ್ಯುತ್ ಘಟಕಗಳನ್ನು ಮಾಡಲು ಸಾಧ್ಯವಿಲ್ಲ. ಕನಿಷ್ಠ 20 ಮೆ.ವ್ಯಾ. ಉತ್ಪಾದನೆ ಮಾಡಲು ಸಾಧ್ಯವಿದ್ದರೆ ಮಾತ್ರ ಸ್ಥಾಪಿಸಬಹುದು ಎಂದರು.

ಕಸದ ಮೇಲಿನ ಸೆಸ್ ವಿಚಾರಾಗಿ ಉತ್ತರಿಸಿದ ಡಿಸಿಎಂ “2016 ರಲ್ಲಿ ಕೇಂದ್ರ ಸರ್ಕಾರದ ಘನತ್ಯಾಜ್ಯ ನಿರ್ವಹಣಾ ನಿಯಮದ ಪ್ರಕಾರ ನೂತನ ಆದೇಶ ನೀಡಿತು. 2020 ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಕೇಂದ್ರ ಸರ್ಕಾರ ಕಳುಹಿಸಿದ ಕಸ ಸಂಗ್ರಹ ದರಪಟ್ಟಿಯನ್ನು ಅಳವಡಿಸಿಕೊಂಡಿತು ಎಂದು ಗೆಜೆಟ್ ಪ್ರತಿಯ ವಿವರವನ್ನು ಸದನಕ್ಕೆ ಓದಿ ತಿಳಿಸಿದರು.

ಈ ಗೆಜೆಟ್ ಪ್ರತಿಯಲ್ಲಿ ಐದು ಕೆಜಿಗೆ ರೂ.500, ಹತ್ತು ಕೆಜಿಗೆ ರೂ.1,400, ಇಪ್ಪತ್ತೈದು ಕೆಜಿಗೆ ರೂ.3,400, ಐವತ್ತು ಕೆಜಿಗೆ ರೂ.7000, ನೂರು ಕೆಜಿಗೆ ರೂ 14,000 ಶುಲ್ಕ ವಿಧಿಸಬೇಕು ಎಂದು ಹೇಳಲಾಗಿದೆ. ಇದನ್ನು ನೋಡಿ ನನಗೂ ಆಶ್ಚರ್ಯವಾಯಿತು. ಅಲ್ಲದೇ ಖಾಲಿ ಇರುವ ನಿವೇಶನಗಳಿಗೆ ಪ್ರತಿ ಚದರ ಅಡಿಗೆ ರೂ.20 ಶುಲ್ಕ ವಿಧಿಸಬೇಕು ಎಂದಿದೆ. ಈ ದರಗಳು ಹೆಚ್ಚಾಯಿತು ಎಂದು ಅದರಲ್ಲಿ ಕೇವಲ ಶೇ. 25ರಷ್ಟು ಮಾತ್ರ ಸಂಗ್ರಹ ಮಾಡುತ್ತಿದ್ದೇವೆ.

ಒಂದು ನಿವೇಶನಕ್ಕೆ ಪ್ರತಿ ಚದರ ಅಡಿಗೆ 2.40 ರೂ. ಸಂಗ್ರಹ ಮಾಡುವಂತೆ ತೀರ್ಮಾನ ಮಾಡಲಾಗಿದೆ ಎಂದರು. ದೊಡ್ಡ ಮಾಲ್ ಗಳು ತಮ್ಮ ಉತ್ಪಾದಿತ ಕಸವನ್ನು ತಾವೇ ವಿಲೇವಾರಿ ಮಾಡಿಕೊಳ್ಳುತ್ತೇವೆ ಎಂದು ಘೋಷಣೆ ಮಾಡಿಕೊಂಡಿವೆ. ಅದಕ್ಕೆ ನಾವು ಸಹ ಬೆಂಬಲ ನೀಡುತ್ತೇವೆ.

ಖಾಲಿ ನಿವೇಶನಗಳು ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದು ಹೊಸ ಕಾನೂನು ಮಾಡಲು ಮುಂದಾಗಿದ್ದೇವೆ. ಇತ್ತೀಚೆಗೆ ಪ್ರಧಾನಿಯವರು ನಗರಕ್ಕೆ ಬಂದಾಗ ಅರಮನೆ ರಸ್ತೆಯಲ್ಲಿ ಹಸಿರು ಪರದೆ ಕಟ್ಟಲಾಯಿತು. ಅಲ್ಲಿ ಜಾಗ ಖಾಲಿಯಿದೆ ಎಂದು ಜನರು ಕಸ ಎಸೆಯುತ್ತಿದ್ದಾರೆ ಎಂದು ಹೇಳಿದರು.

ಯಾವ ರೀತಿಯ ಕಸ ಉತ್ಪಾದನೆಯಾಗುತ್ತದೆ ಎಂದು ನಾಗರೀಕರು ಸ್ವತಃ ಘೋಷಿಸಲು ಅವಕಾಶ ನೀಡಲಾಗಿದೆ. ಇದರ ಅನ್ವಯ 35 ಸಾವಿರ ಜನರು ಸ್ವಯಂ ಘೋಷಣೆ ಮಾಡಿದ್ದಾರೆ. ಇವರುಗಳೇ ಕಸವನ್ನು ವಿಲೇವಾರಿ ಮಾಡಿಕೊಳ್ಳುತ್ತಾರೆ. ಕಟ್ಟಡ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಸುರಿಯುವವರನ್ನು ಗುರುತಿಸಿ ಪ್ರಕರಣ ದಾಖಲಿಸಬೇಕು ಎಂದು ಪೊಲೀಸರಿಗೆ ಸೂಚಿಸಿದ್ದೇನೆ. ಇದರ ಬಗ್ಗೆಯೂ ಟೆಂಡರ್ ಕರೆಯಲಾಗಿದೆ. ಅಲ್ಲಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com