
ಬೆಂಗಳೂರು: ಪೊಲೀಸ್ ಆಯುಕ್ತರು ನನ್ನ ಬಳಿ ಬಂದು ಆರ್ ಸಿಬಿ ತಂಡದವರಿಗೆ 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿ ಎಂದು ಮನವಿ ಮಾಡಿಕೊಂಡ ಕಾರಣಕ್ಕೆ ನಾನು ಆ ಕಾರ್ಯಕ್ರಮಕ್ಕೆ ಹೋಗಿ 10 ನಿಮಿಷಗಳಲ್ಲಿ ಕಾರ್ಯಕ್ರಮ ಮುಗಿಸುವಂತೆ ಸೂಚನೆ ನೀಡಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ ನೀಡಿದ್ದಾರೆ.
ವಿಧಾನಸಭೆಯಲ್ಲಿ ಆರ್ ಸಿಬಿ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳು ಉತ್ತರ ನೀಡುವ ವೇಳೆ ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್ ಅವರು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾರ್ಯಕ್ರಮಕ್ಕೆ ಸರ್ಕಾರ ಅನುಮತಿ ನೀಡಿಲ್ಲವಾದರೆ ಉಪಮುಖ್ಯಮಂತ್ರಿಗಳು ಹೋಗಿದ್ದು ಯಾಕೆ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಡಿಸಿಎಂ ಡಿ.ಕೆ. ಶಿವಕುಮಾರ್ ಉತ್ತರಿಸಿದ್ದಾರೆ.
ನನ್ನನ್ನು ಪದೇ ಪದೆ ನೆನೆಯದಿದ್ದರೆ ನಿಮಗೆ ಸಮಾಧಾನ ಆಗುವುದಿಲ್ಲ. ನಿಮ್ಮ ಪಕ್ಷದವರಿಗೆ ಖುಷಿಪಡಿಸಲೂ ಆಗುವುದಿಲ್ಲ. ನಿಮಗೆ ಖುಷಿ ಆಗುವಂತೆ ಉತ್ತರ ಕೊಡಲೂ ಆಗುವುದಿಲ್ಲ ಎಂದು ಛೇಡಿಸಿದರು.
ಅಂದು ವಿಧಾನಸೌಧದ ಎದುರು ನಡೆದ ಸರ್ಕಾರಿ ಕಾರ್ಯಕ್ರಮಕ್ಕೆ ಬಂದಿದ್ದ ಕೆಎಸ್ ಸಿಎ ಅಧ್ಯಕ್ಷರು ಹಾಗೂ ಕಾರ್ಯದರ್ಶಿಗಳು ಕ್ರೀಡಾಂಗಣಕ್ಕೆ ಹೋಗಲು ಸಾಧ್ಯವಾಗದೇ ಹತಾಶರಾಗಿದ್ದರು.
ಇನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಕೇವಲ 10 ನಿಮಿಷಗಳಲ್ಲಿ ಮುಗಿಸುವಂತೆ ನೀವೇ ಬಂದು ವ್ಯವಸ್ಥೆ ಮಾಡಬೇಕು ಎಂದು ಪೊಲೀಸ್ ಆಯುಕ್ತರು ನನ್ನ ಬಳಿ ಮನವಿ ಮಾಡಿದರು.
ನಾನು ಕಾರ್ಯಕ್ರಮಕ್ಕೆ ಹೋಗಿದ್ದೂ ನಿಜ, ಅಲ್ಲಿ ಇದ್ದಿದ್ದೂ ನಿಜ, ಆರ್ ಸಿಬಿ ಆಟಗಾರರಿಗೆ ಅಭಿನಂದನೆ ಸಲ್ಲಿಸಿದ್ದು ನಿಜ. 10 ನಿಮಿಷಗಳಲ್ಲಿ ಈ ಕಾರ್ಯಕ್ರಮ ಮುಗಿಸುವಂತೆ ಅವರಿಗೆ ಸೂಚನೆ ಕೊಟ್ಟಿದ್ದೂ ನಿಜ.
ಇದೇ ಮಾತನ್ನು ನಾನು ಕುನ್ಹಾ ಅವರ ತನಿಖಾ ತಂಡದ ಮುಂದೆ ಹೇಳಿಕೆ ನೀಡಿದ್ದೂ ನಿಜ. ನಾನು ಅಲ್ಲಿಗೆ ಹೋಗಿಲ್ಲ ಎಂದು ಹೇಳುತ್ತಿಲ್ಲ. ಅಲ್ಲಿಗೆ ಹೋಗಲು ನಿಮ್ಮ ಅನುಮತಿಯ ಅಗತ್ಯವೂ ನನಗಿಲ್ಲ. ಪೊಲೀಸರ ಮನವಿ ಮೇಲೆ ನನ್ನ ಜವಾಬ್ದಾರಿಯಿಂದ ನಾನು ಹೋಗಿ ಅವರಿಗೆ ಸೂಚನೆ ನೀಡಿದ್ದೇನೆ. ಕಪ್ ಗೆ ಮುತ್ತು ನೀಡಿದ್ದೇನೆ, ಆಟಗಾರರಿಗೆ ಅಭಿನಂದಿಸಿದ್ದೇನೆ ಎಂದರು.
Advertisement