
ಬೆಂಗಳೂರು: "ನಾನು ಹುಟ್ಟಿನಿಂದಲೇ ಕಾಂಗ್ರೆಸ್ಸಿಗ; ನನ್ನ ರಕ್ತ, ನನ್ನ ಜೀವನ, ಎಲ್ಲವೂ ಇಲ್ಲೇ ಇದೆ. ಕರ್ನಾಟಕದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ(RSS) ಸಂಸ್ಥೆಗಳನ್ನು ಹೇಗೆ ನಿರ್ಮಿಸುತ್ತಿದೆ, ಶಾಲೆಗಳನ್ನು ಹೇಗೆ ಸ್ವಾಧೀನಪಡಿಸಿಕೊಳ್ಳುತ್ತಿದೆ ಎಂದು ನನಗೆ ತಿಳಿದಿದೆ. ನಾನು ಕಾಂಗ್ರೆಸ್ಸಿಗ ಮತ್ತು ನನ್ನ ಶಕ್ತಿಗಳನ್ನೆಲ್ಲಾ ಒಟ್ಟುಗೂಡಿಸಿ ಮುಂದಿನ ದಿನಗಳಲ್ಲಿ ಕೂಡ ಕಾಂಗ್ರೆಸ್ ನ್ನು ಮುನ್ನಡೆಸುತ್ತೇನೆ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದ್ದಾರೆ.
ವಿಧಾನಸಭೆ ಕಲಾಪದ ವೇಳೆ ನಿನ್ನೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ 11 ಜನರ ಸಾವಿಗೆ ಕಾರಣವಾದ ಕಾಲ್ತುಳಿತದ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಕಾಂಗ್ರೆಸ್ ರಾಜ್ಯ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಆರ್‌ಎಸ್‌ಎಸ್ ಗೀತೆಯನ್ನು ಹಾಡುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದರು.
'ನಮಸ್ತೆ ಸದಾ ವತ್ಸಲೇ ಮಾತೃಭೂಮಿ' ಎಂಬ ಆರ್‌ಎಸ್‌ಎಸ್ ಗೀತೆಯ ಮೊದಲ ಕೆಲವು ಸಾಲುಗಳನ್ನು ಕೇಳಿದ ಸದನವು ಹಠಾತ್ ಸ್ಥಬ್ಧಗೊಂಡಿತು. ಡಿ ಕೆ ಶಿವಕುಮಾರ್ ಕಾಲ್ತುಳಿತದ ಪ್ರೋತ್ಸಾಹಕ ಎಂದು ಆರೋಪಿಸಿ ಸಾಮೂಹಿಕ ಕೋಲಾಹಲವನ್ನು ಸೃಷ್ಟಿಸಿದಾಗ ಡಿ ಕೆ ಶಿವಕುಮಾರ್ ಅವರು ಕವಿತೆ ವಾಚಿಸಿದರು.
ಬೆಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಆರ್‌ಸಿಬಿ ತಂಡವನ್ನು ಡಿ ಕೆ ಶಿವಕುಮಾರ್ ಬರಮಾಡಿಕೊಳ್ಳಲು ಹೋಗಿದ್ದರು. ವಿಮಾನ ನಿಲ್ದಾಣದಿಂದ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಪ್ರಯಾಣದುದ್ದಕ್ಕೂ ಕನ್ನಡ ಧ್ವಜವನ್ನು ಬೀಸಿದ್ದರು ಎಂದು ಬಿಜೆಪಿ ನಾಯಕರು ಆರೋಪಿಸಿದ್ದರು.
ಆರೋಪಗಳಿಗೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್, ನಾನು ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ (ಕೆಎಸ್‌ಸಿಎ) ಸದಸ್ಯ ಮತ್ತು ಕೆಎಸ್‌ಸಿಎ ಕಾರ್ಯದರ್ಶಿ ಸೇರಿದಂತೆ ಅಲ್ಲಿನ ಜನರು ನನ್ನ ಸ್ನೇಹಿತರು. ನಾನು ಬೆಂಗಳೂರು ಉಸ್ತುವಾರಿ ಸಚಿವ ಕೂಡ ಹೌದು. ಜೂನ್ 4 ರಂದು ವಿಮಾನ ನಿಲ್ದಾಣ ಮತ್ತು ಕ್ರೀಡಾಂಗಣಕ್ಕೆ ಹೋಗಿದ್ದೆ. ನಾನು ಕರ್ನಾಟಕದ ಧ್ವಜವನ್ನು ಸಹ ಹಿಡಿದಿದ್ದೆ, ಆರ್ ಸಿಬಿ ತಂಡಕ್ಕೆ ವಿಶ್ ಮಾಡಿ ಕಪ್‌ಗೆ ಮುತ್ತಿಟ್ಟೆ. ನಾನು ನನ್ನ ಕೆಲಸ ಮಾಡಿದ್ದೇನೆ ಎಂದರು.
ಕಾಲ್ತುಳಿತ ಬಗ್ಗೆ ಡಿಕೆಶಿ ಹೇಳಿದ್ದೇನು
ಅಪಘಾತ ಸಂಭವಿಸಿದೆ. ಇತರ ರಾಜ್ಯಗಳಲ್ಲಿಯೂ ಇಂತಹ ಘಟನೆಗಳು ನಡೆದಿವೆ. ಅಗತ್ಯವಿದ್ದರೆ, ಇತರ ರಾಜ್ಯಗಳಲ್ಲಿ ನಡೆದ ಘಟನೆಗಳ ಪಟ್ಟಿಯನ್ನು ನಾನು ಓದುತ್ತೇನೆ. ನನಗೂ ನಿಮ್ಮ ಬಗ್ಗೆ ಹೇಳಲು ಹಲವು ವಿಷಯಗಳಿವೆ ಎಂದರು.
ಪಕ್ಷದ ನಾಯಕ ಆರ್. ಅಶೋಕ್, ಶಿವಕುಮಾರ್ ಅವರು ಒಮ್ಮೆ 'ಆರ್‌ಎಸ್‌ಎಸ್ ಚಡ್ಡಿ' ಧರಿಸಿದ್ದಾಗಿ ಹೇಳಿದ್ದರು ಎಂದು ನೆನಪಿಸಿದರು. ಆಗ ಸದನದ ಮನರಂಜನೆಗಾಗಿ, ಶಿವಕುಮಾರ್ 'ನಮಸ್ತೆ ಸದಾ ವತ್ಸಲೇ ಮಾತೃಭೂಮಿ' ಹಾಡಿದರು.
ವಿರೋಧ ಪಕ್ಷದವರು ಮೇಜು ಬಡಿಯುವ ಮೂಲಕ ಗೀತೆಯನ್ನು ಸ್ವಾಗತಿಸಿದರು ಆದರೆ ಕಾಂಗ್ರೆಸ್ ಪಾಳಯದಲ್ಲಿ ಸಂಪೂರ್ಣ ಮೌನವಿತ್ತು.
ಬಿಜೆಪಿ ಶಾಸಕ ವಿ. ಸುನಿಲ್ ಕುಮಾರ್, "ಈ ಸಾಲುಗಳನ್ನು ದಾಖಲೆಗಳಿಂದ ತೆಗೆದುಹಾಕಬಾರದು ಎಂದು ಭಾವಿಸುತ್ತೇನೆ" ಎಂದು ವ್ಯಂಗ್ಯವಾಡಿದರು.
ಇಂತಹ ಘಟನೆಗಳು ನಡೆದಾಗಲೆಲ್ಲಾ ಸರ್ಕಾರಗಳು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತವೆಯೇ. ಕಾಲ್ತುಳಿತದ ನಂತರ ನಮ್ಮ ಸರ್ಕಾರವು ಪೊಲೀಸ್ ಅಧಿಕಾರಿಗಳು ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ ತ್ವರಿತವಾಗಿ ಕ್ರಮ ಕೈಗೊಂಡಿದ್ದಕ್ಕೆ ನೀವು ಹೆಮ್ಮೆಪಡಬೇಕು ಎಂದರು.
ಇಂದು ಡಿಕೆಶಿ ಹೇಳಿದ್ದೇನು?
ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳಿಗೆ ಇಂದು ಪ್ರತಿಕ್ರಿಯಿಸಿರುವ ಡಿ ಕೆ ಶಿವಕುಮಾರ್, ನಾನು ರಾಜಕೀಯ ಪಕ್ಷಗಳ ಬಗ್ಗೆ ಸಂಶೋಧನೆ ಮಾಡಿದ್ದೇನೆ. ಆರ್ ಎಸ್ ಎಸ್ ಸಂಸ್ಥೆಗಳನ್ನು ಹೇಗೆ ಕರ್ನಾಟಕದಲ್ಲಿ ನಿರ್ಮಾಣ ಮಾಡುತ್ತಿದೆ ಎಂದು ನನಗೆ ಗೊತ್ತಿದೆ. ಅವರು ಶಾಲೆಗಳನ್ನು ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಖರೀದಿಸಿ ತಮ್ಮ ತತ್ವ, ನೀತಿಗಳನ್ನು ಮಕ್ಕಳಿಗೆ ಬೋಧಿಸಲು ಪ್ರಯತ್ನಿಸುತ್ತಿದ್ದಾರೆ. ಒಬ್ಬ ರಾಜಕೀಯ ನಾಯಕನಾಗಿ ನನಗೆ ಇವೆಲ್ಲ ಗೊತ್ತಿರಬೇಕು, ತಿಳಿದುಕೊಳ್ಳುತ್ತೇನೆ.
ರಾಜಕೀಯವಾಗಿ ನಾವು ಬಿಜೆಪಿ, ಆರ್ ಎಸ್ ಎಸ್ ಜೊತೆ ಭಿನ್ನಾಭಿಪ್ರಾಯ ಹೊಂದಿರಬಹುದು. ಆರ್ ಎಸ್ ಎಸ್ ಪ್ರಾರ್ಥನೆ ಹೇಳಿದ ತಕ್ಷಣ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರುತ್ತೇನೆ ಎಂದರ್ಥವಲ್ಲ. ನಾನು ಕಾಂಗ್ರೆಸ್ ನ್ನು ಮುನ್ನಡೆಸಿಕೊಂಡು ಹೋಗುವ ಕೆಲಸ ಮಾಡುತ್ತೇನೆ ಎಂದರು.
Advertisement