
ಬೆಂಗಳೂರು: ಕಾಂಗ್ರೆಸ್ ಪಕ್ಷದ ಐದು ಚುನಾವಣಾ ಪೂರ್ವ ಭರವಸೆಗಳಿಂದಾಗಿ ತಲಾ ಆದಾಯದಲ್ಲಿ ಕರ್ನಾಟಕ ದೇಶದಲ್ಲಿಯೇ ಅಗ್ರಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಹೇಳಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ, ಐದು ಗ್ಯಾರಂಟಿಗಳಿಗಾಗಿ ಸರ್ಕಾರ 96,000 ಕೋಟಿ ರೂ.ಗಳನ್ನು ಖರ್ಚು ಮಾಡಿದೆ ಎಂದು ಸಿಎಂ ತಿಳಿಸಿದರು.
ನಮ್ಮ ಐದು ಗ್ಯಾರಂಟಿಗಳಿಗಾಗಿ ನಾವು ಪ್ರತಿ ವರ್ಷ 52,000 ಕೋಟಿ ರೂ.ಯಿಂದ 55,000 ಕೋಟಿ ರೂ.ಗಳವರೆಗೆ ಖರ್ಚು ಮಾಡಿದ್ದೇವೆ.
ಜುಲೈ ಅಂತ್ಯದವರೆಗೆ, ಒಟ್ಟು 96,000 ಕೋಟಿ ರೂ.ಗಳನ್ನು ಗ್ಯಾರಂಟಿಗಳಿಗಾಗಿ ಖರ್ಚು ಮಾಡಿದ್ದೇವೆ(ಮೇ 20, 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರ) ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.
ಹಣ ಇಲ್ಲದಿದ್ದರೆ ಸರ್ಕಾರವು ಇಷ್ಟೊಂದು ಹಣವನ್ನು ಖರ್ಚು ಮಾಡಲು ಹೇಗೆ ಸಾಧ್ಯ? ಎಂದು ವಿಧಾನಸಭೆಯಲ್ಲಿ ನಡೆದ ಚರ್ಚೆಯ ವೇಳೆ ಪ್ರತಿಪಕ್ಷಗಳನ್ನು ಪ್ರಶ್ನಿಸಿದರು.
'ಶಕ್ತಿ' ಯೋಜನೆಯಡಿಯಲ್ಲಿ ಕರ್ನಾಟಕದ ಮಹಿಳೆಯರು 500 ಕೋಟಿಗೂ ಹೆಚ್ಚು ಪ್ರಯಾಣ ಮಾಡಿದ್ದಾರೆ ಎಂದು ಅವರು ಹೇಳಿದರು.
'ರಾಜ್ಯದಲ್ಲಿ ಗ್ಯಾರಂಟಿಗಳಿಂದಾಗಿ ಏನಾಯಿತು ಎಂಬುದು ನಿಮಗೆ ಗೊತ್ತಿದಿದೆಯೇ? ನಾವು ದೇಶದಲ್ಲಿ ತಲಾ ಆದಾಯದಲ್ಲಿ ನಂಬರ್ ಒನ್ ಆಗಿದ್ದೇವೆ. 2013-14ರಲ್ಲಿ, ತಲಾ ಆದಾಯ 1,01,000 ರೂ.ಗಳಷ್ಟಿತ್ತು. ಆದರೆ ಇಂದು ಅದು 2,04,000 ರೂ.ಗಳಷ್ಟಿದೆ.
ಅಭಿವೃದ್ಧಿ ಇಲ್ಲದೆ ಇದು ಸಾಧ್ಯವೇ? ರಾಜ್ಯದಲ್ಲಿ ಅಭಿವೃದ್ಧಿ ಸ್ಥಗಿತಗೊಂಡಿದೆ ಎಂದು ಆರೋಪಿಸುತ್ತಿರುವ ಪ್ರತಿಪಕ್ಷ ಬಿಜೆಪಿಯನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು.
ಶಕ್ತಿ ಯೋಜನೆ ಜಾರಿಗೆ ತಂದ ನಂತರ ಬೆಂಗಳೂರಿನಲ್ಲಿ ಮಹಿಳೆಯರ ಉದ್ಯೋಗ ದರ ಶೇ. 23 ರಷ್ಟು ಮತ್ತು ಹುಬ್ಬಳ್ಳಿ-ಧಾರವಾಡದಲ್ಲಿ ಶೇ. 21 ರಷ್ಟು ಹೆಚ್ಚಾಗಿದೆ. ಇದನ್ನು ಹೇಳುತ್ತಿರುವುದು ನಾನಲ್ಲ, ಮಾಧ್ಯಮಗಳು ಹೇಳುತ್ತಿವೆ ಎಂದು ಸಿದ್ದರಾಮಯ್ಯ ತಿಳಿಸಿದರು.
"ಕರ್ನಾಟಕವು ತಲಾ ಆದಾಯದಲ್ಲಿ ಪ್ರಥಮ ಸ್ಥಾನದಲ್ಲಿರಲು ಕಾರಣವೇನು? ಏಕೆಂದರೆ, ಈ ಗ್ಯಾರಂಟಿಗಳು ಜನರ ಖರೀದಿ ಶಕ್ತಿಯನ್ನು ಹೆಚ್ಚಿಸಿವೆ. ಜನರು ಪ್ರತಿ ತಿಂಗಳು 4,000 ರಿಂದ 5,000 ರೂ. ಪಡೆಯುತ್ತಿದ್ದಾರೆ. ವಾರ್ಷಿಕವಾಗಿ, 50,000 ರಿಂದ 60,000 ರೂ. ಪಡೆಯುತ್ತಿದ್ದಾರೆ. ಇದು ಅಭಿವೃದ್ಧಿಯಲ್ಲವೇ?" ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನುದಾನ ಕಡಿತಗೊಳಿಸಿರುವುದನ್ನು ಎತ್ತಿ ತೋರಿಸಿದ ಸಿಎಂ, 14ನೇ ಹಣಕಾಸು ಆಯೋಗದ ಅಡಿಯಲ್ಲಿ ರಾಜ್ಯಕ್ಕೆ ಶೇ. 4.7 ರಷ್ಟು ಅನುದಾನ ಸಿಕ್ಕಿದೆ. ಆದರೆ 15ನೇ ಹಣಕಾಸು ಆಯೋಗದಲ್ಲಿ ಅದು ಶೇ. 3.6 ಕ್ಕೆ ಇಳಿದಿದೆ, ಶೇ. 1 ರಷ್ಟು ಕಡಿತದಿಂದ 68,000 ಕೋಟಿ ನಷ್ಟವಾಗಿದೆ ಎಂದು ಹೇಳಿದರು.
ರಾಜ್ಯವು 68,000 ಕೋಟಿ ರೂ. ಪಡೆದಿದ್ದರೆ, ಮತ್ತಷ್ಟು ಹೆಚ್ಚಿನ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದಿತ್ತು. ಇದಲ್ಲದೆ, ಭದ್ರಾ ಮೇಲ್ದಂಡೆ ನೀರಿನ ಯೋಜನೆಯಡಿಯಲ್ಲಿ, ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2023-24 ರ ಕೇಂದ್ರ ಬಜೆಟ್‌ನಲ್ಲಿ ಘೋಷಿಸಿದಂತೆ ರಾಜ್ಯಕ್ಕೆ 5,300 ಕೋಟಿ ರೂ.ಗಳನ್ನು ಪಡೆಯಬೇಕಿತ್ತು. ಆದರೆ ಅದು ನಮಗೆ ಸಿಗಲಿಲ್ಲ ಎಂದು ಸಿಎಂ ತಿಳಿಸಿದರು.
ಕೇಂದ್ರದ ಹಣ ನಮಗೆ ಸಿಕ್ಕಿದ್ದರೆ, ನೀವು ಕೇಳಿದಷ್ಟು ಹಣವನ್ನು ನಿಮ್ಮ ಕ್ಷೇತ್ರಗಳಿಗೆ ಹಂಚಿಕೆ ಮಾಡಲು ಸಾಧ್ಯವಾಗುತ್ತಿತ್ತು ಎಂದು ಮುಖ್ಯಮಂತ್ರಿಗಳು ಸದನಕ್ಕೆ ತಿಳಿಸಿದರು.
ಅವರ ಪ್ರಕಾರ, ಕೇಂದ್ರ ಅನುದಾನದ ಕೊರತೆ ಮತ್ತು ತೆರಿಗೆ ಹಂಚಿಕೆಯಲ್ಲಿ ಕಡಿತದ ಹೊರತಾಗಿಯೂ, ರಾಜ್ಯವು ಈ ಹಣಕಾಸು ವರ್ಷದಲ್ಲಿ ಸುಮಾರು 4,09,000 ಕೋಟಿ ರೂ.ಗಳ ಬಜೆಟ್ ಮಂಡಿಸಿತು.
Advertisement