ಪ್ರತಿಷ್ಟಿತ ಬೂಕರ್ ಪ್ರಶಸ್ತಿ ವಿಜೇತರಾದ ಬಾನು ಮುಷ್ತಾಕ್ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾವನ್ನು ಉದ್ಘಾಟಿಸಲಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಘೋಷಿಸಿದ್ದಾರೆ. ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಾನು ಮುಷ್ತಾಕ್ ಅವರ 'ಹೃದಯ ದೀಪ' ಕೃತಿಗೆ ಬೂಕರ್ ಪ್ರಶಸ್ತಿ ಸಿಕ್ಕಿದೆ. ಕರ್ನಾಟಕದ ಮಹಿಳೆಗೆ ಬೂಕರ್ ಸಿಕ್ಕಿದ್ದು ಬಹಳ ಸಂತೋಷವಾಗಿದೆ. ಹೋರಾಟದ ಹಿನ್ನೆಲೆಯಿಂದ ಬಂದವರು ಬಾನು ಮುಷ್ತಾಕ್. ರೈತ ಮತ್ತು ಕನ್ನಡ ಚಳವಳಿಯಲ್ಲೂ ಕೆಲಸ ಮಾಡಿದ್ದಾರೆ. ಹೀಗಾಗಿ ಅವರನ್ನು ದಸರಾ ಮಹೋತ್ಸವದ ಉದ್ಘಾಟನೆಗೆ ಆಹ್ವಾನಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಬಾರಿ ಮೈಸೂರು ದಸರಾ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ 11 ದಿನಗಳ ಕಾಲ ನಡೆಯಲಿದೆ. ಇನ್ನು ದಸರಾದಲ್ಲಿ ಏರ್ ಶೋಗೆ ಅನುಮತಿ ಸಿಕ್ಕಿದೆ. ಇದಕ್ಕಾಗಿ ನಾನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದೆ. ಅವರನ್ನೂ ದಸರಾಗೆ ಆಹ್ವಾನಿಸಿದ್ದೇನೆ ಎಂದು ಸಿಎಂ ಹೇಳಿದರು.
ಬೈಕ್ ಟ್ಯಾಕ್ಸಿ ವಿಚಾರವಾಗಿ ಮಹತ್ವದ ಆದೇಶ ನೀಡಿರುವ ಕರ್ನಾಟಕ ಹೈಕೋರ್ಟ್ ಅಗ್ರಿಗೇಟರ್ ಗಳ ವಿರುದ್ಧ ಕ್ರಮ ಕೈಗೊಳ್ಳಬಹುದು.. ಆದರೆ ಬೈಕ್ ಟ್ಯಾಕ್ಸಿ ಚಾಲಕರಿಗೆ ಕಿರುಕುಳ ನೀಡಬಾರದು ಎಂದು ಸ್ಪಷ್ಟಪಡಿಸಿದೆ. ನಿನ್ನೆಯಿಂದ ಕರ್ನಾಟಕದಲ್ಲಿ ಮತ್ತೆ ಬೈಕ್ ಟ್ಯಾಕ್ಸಿ ಸೇವೆ ಪುನಾರಂಭಗೊಂಡಿದ್ದು, ಈ ಕುರಿತು ಸಾಕಷ್ಟ ಗೊಂದಲಗಳು ಸೃಷ್ಟಿಯಾಗಿವೆ. ಇದರ ನಡುವೆಯೇ ಶುಕ್ರವಾರ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ಣಯ ಕೈಗೊಂಡಿದ್ದು, 'ಬೈಕ್ ಟ್ಯಾಕ್ಸಿ ಸೇವೆಗಳನ್ನು ನೀಡಲು ಪ್ರಾರಂಭಿಸಿರುವ ಅಗ್ರಿಗೇಟರ್‌ಗಳ ವಿರುದ್ಧ ನೀವು (ಅಧಿಕಾರಿಗಳು) ಕಾನೂನು ಪ್ರಕಾರ ಯಾವುದೇ ಕ್ರಮ ಕೈಗೊಳ್ಳಬಹುದು. ಆ್ಯಪ್ ಆಧಾರಿತ ಸಂಸ್ಥೆಗಳಿಗೆ ನ್ಯಾಯಾಲಯವು ಅಂತಹ ಯಾವುದೇ ಸ್ವಾತಂತ್ರ್ಯವನ್ನು ನೀಡಲಿಲ್ಲ ಎಂದು ಹೇಳಿದೆ.
ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆಸಿ ವೀರೇಂದ್ರ ಪಪ್ಪಿ ಹಾಗೂ ಅವರ ಸಹೋದರರ, ಚಳ್ಳಕೆರೆ ಪಟ್ಟಣದಲ್ಲಿರುವ 4 ನಿವಾಸಗಳು ಸೇರಿ 30 ಸ್ಥಳಗಳಲ್ಲಿ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಶುಕ್ರವಾರ ಬೆಳಗ್ಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ವೀರೇಂದ್ರ ಅವರು ಕಿಂಗ್ 567, ರಾಜ 567, ಪಪ್ಪೀಸ್ 003, ರತ್ನ ಗೇಮಿಂಗ್ ಮುಂತಾದ ಆನ್‌ಲೈನ್ ಬೆಟ್ಟಿಂಗ್ ಸೈಟ್‌ಗಳನ್ನು ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ಅವರ ಸಹೋದರ ಕೆ ಸಿ ತಿಪ್ಪೇಸ್ವಾಮಿ ದುಬೈನಿಂದ ಡೈಮಂಡ್ ಸಾಫ್ಟೆಕ್, ಟಿಆರ್‌ಎಸ್ ಟೆಕ್ನಾಲಜೀಸ್ ಮತ್ತು ಪ್ರೈಮ್ 9 ಟೆಕ್ನಾಲಜೀಸ್ ಎಂಬ ಮೂರು ವ್ಯವಹಾರ ಸಂಸ್ಥೆಗಳನ್ನು ನಿರ್ವಹಿಸುತ್ತಿದ್ದಾರೆ" ಎಂದು ಆರೋಪಿಸಲಾಗಿದೆ. ಮತ್ತೊಂದೆಡೆ ಬೆಂಗಳೂರಿನ ರಾಜರಾಜೇಶ್ವರಿನಗರದ ಕಾಂಗ್ರೆಸ್ ನಾಯಕಿ ಕುಸುಮ ಮನೆ ಮೇಲೆ ಇಡಿ ದಾಳಿ ನಡೆಸಿದೆ. ಕಾಂಗ್ರೆಸ್ ಶಾಸಕ ವೀರೇಂದ್ರ ಪಪ್ಪಿ ಅವರೊಂದಿಗೆ ಕುಸುಮ ಅವರ ಸಹೋದರ ಆರ್ಥಿಕ ವ್ಯವಹಾರ ಹೊಂದಿದ್ದ ಹಿನ್ನೆಲೆ ದಾಳಿ ನಡೆಸಲಾಗಿದೆ.
ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಗುರುವಾರ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಸುಜಾತಾ ಭಟ್, ಕಾರ್ಯಕರ್ತರಾದ ಗಿರೀಶ್ ಮಟ್ಟಣ್ಣವರ್, ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಯೂಟ್ಯೂಬರ್ ಎಂಡಿ ಸಮೀರ್ ವಿರುದ್ಧ ದೂರು ದಾಖಲಿಸಿದ್ದಾರೆ. ಧರ್ಮಸ್ಥಳದಲ್ಲಿ ಎಂಬಿಬಿಎಸ್ ವಿದ್ಯಾರ್ಥಿನಿ ಅನನ್ಯ ಭಟ್ ಕೊಲೆಯಾಗಿದ್ದಾರೆ ಎಂದು ಹೇಳಿಕೆ ನೀಡಿ ಸುಳ್ಳು ದೂರು ದಾಖಲಿಸಿದ್ದಾರೆ ಎಂದು ಕೃಷ್ಣ ತಮ್ಮ ದೂರಿನಲ್ಲಿ ಆರೋಪಿಸಿದ್ದಾರೆ. ಸುಜಾತಾ ಭಟ್ ಅವರಿಗೆ ಅನನ್ಯ ಭಟ್ ಎಂಬ ಮಗಳು ಇಲ್ಲ ಎಂದು ಕೃಷ್ಣ ಆರೋಪಿಸಿದ್ದಾರೆ. ಇನ್ನು ಮಹೇಶ್ ಶೆಟ್ಟಿ ತಿಮರೋಡಿ ಬಂಧನದ ವೇಳೆ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ ಹಿನ್ನೆಲೆಯಲ್ಲಿ ಗಿರೀಶ್ ಮಟ್ಟಣ್ಣವರ್ ಸೇರಿದಂತೆ ಮೂವರ ವಿರುದ್ಧ ದಕ್ಷಿಣ ಕನ್ನಡದ ಜಿಲ್ಲೆಯ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿಯೂ 20 ಕಾಲ್ತುಳಿತಗಳು ಸಂಭವಿಸಿವೆ ಮತ್ತು 11 ಜನರ ಸಾವಿಗೆ ಕಾರಣವಾದ ಎಂ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತ ಘಟನೆಗೆ 'ಸಾಮೂಹಿಕ ಉನ್ಮಾದ'ವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ಇಂದು ತಿಳಿಸಿದರು. ಪ್ರಯಾಗ್‌ರಾಜ್‌ನಲ್ಲಿ ಕುಂಭಮೇಳದ ಕಾಲ್ತುಳಿತದಲ್ಲಿ 39 ಜನರು ಸಾವಿಗೀಡಾದ ನಂತರ 'ಯೋಗಿ ಆದಿತ್ಯನಾಥ್ ಯುಪಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆಯೇ' ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು. 'ಐಪಿಎಲ್ ಪಂದ್ಯದಲ್ಲಿ ಆರ್‌ಸಿಬಿಯ ಗೆಲುವನ್ನು ಜನರು ಬೆಂಗಳೂರಿನ ಹೆಮ್ಮೆ ಎಂದು ಗ್ರಹಿಸಿದ್ದಾರೆ. ಅದರಿಂದ ಸೃಷ್ಟಿಯಾದ ಸಾಮೂಹಿಕ ಉನ್ಮಾದವೇ ಈ ಕಾಲ್ತುಳಿತದ ಹಿಂದಿನ ಕಾರಣವಾಗಿದೆ. ಪ್ರಜಾಪ್ರಭುತ್ವದಲ್ಲಿ ನಾವು ಕೆಲವೊಮ್ಮೆ ಜನರ ನಿರೀಕ್ಷೆಗಳಿಗೆ ತಲೆಬಾಗಬೇಕಾಗುತ್ತದೆ. ಅದು ಪ್ರಜಾಪ್ರಭುತ್ವದ ಸಂಕೇತ. ಹೀಗಾಗಿಯೇ, ಆರ್‌ಸಿಬಿಯ ವಿಜಯೋತ್ಸವದಲ್ಲಿ ಭಾಗವಹಿಸಬೇಕಾಯಿತು' ಎಂದು ಹೇಳಿದರು.
Advertisement