
ಬೆಳ್ತಂಗಡಿ: ರಾಜ್ಯದ ಹಿಂದೂಗಳ ಪವಿತ್ರ ಧಾರ್ಮಿಕ ಕೇಂದ್ರವಾಗಿರುವ ದೇಶ-ವಿದೇಶಗಳಲ್ಲಿ ಪ್ರಸಿದ್ಧಿ ಹೊಂದಿರುವ ಧರ್ಮಸ್ಥಳ ಸುತ್ತಮುತ್ತ ಹಲವು ಶವಗಳನ್ನು ಹೂತಿದ್ದಾಗಿ ಅನಾಮಿಕ ವ್ಯಕ್ತಿಯೊಬ್ಬ ಹೇಳಿ ಪ್ರಕರಣವನ್ನು ರಾಜ್ಯಸರ್ಕಾರ ಎಸ್ ಐಟಿ ತನಿಖೆಗೆ ವಹಿಸಿ ಅನಾಮಿಕ ವ್ಯಕ್ತಿಯನ್ನು ಕರೆದುಕೊಂಡು ಹೋಗಿ ಆತನ ಸಮ್ಮುಖದಲ್ಲಿಯೇ ಹುಡುಕಾಟ ನಡೆಸಿತ್ತು.
ಅನಾಮಿಕ ದೂರುದಾರ ಸಿ ಎನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಇಂದು ಬೆಳಗ್ಗೆ ಎಸ್ ಐಟಿ ಅಧಿಕಾರಿಗಳು ಬಂಧಿಸಿದ್ದು ಆ ಮೂಲಕ ಸಾಕ್ಷಿ ಸಂರಕ್ಷಣಾ ಕಾಯ್ದೆಯಿಂದ ವಿಮುಖಗೊಳಿಸಲಾಗಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಕೋರ್ಟ್ಗೆ ಮಾಸ್ಕ್ಮ್ಯಾನ್ ನನ್ನ ಎಸ್‌ಐಟಿ ಅಧಿಕಾರಿಗಳು ಹಾಜರುಪಡಿಸಿದ್ದಾರೆ.
ಇಷ್ಟು ದಿನ ಮಾಸ್ಕ್ ಹಾಕಿಕೊಂಡು ಓಡಾಡುತ್ತಿದ್ದ ವ್ಯಕ್ತಿಯ ಮುಖವಾಡವನ್ನು ತೆಗೆಯಲಾಗಿದ್ದು ಗುರುತು ಬಹಿರಂಗಪಡಿಸಲಾಗಿದೆ.
ಬೆಳ್ತಂಗಡಿಗೆ ಕರೆತಂದ ಅಧಿಕಾರಿಗಳು
ನ್ಯಾಯಾಲಯಕ್ಕೆ ಹಾಜರುಪಡಿಸುವ ಮುನ್ನ ಮಾಸ್ಕ್ಮ್ಯಾನ್ಗೆ ಎಸ್‌ಐಟಿ ಅಧಿಕಾರಿಗಳು ವೈದ್ಯಕೀಯ ತಪಾಸಣೆ ಮಾಡಿದ್ದಾರೆ. ಬೆಳ್ತಂಗಡಿ ತಾಲೂಕು ಆಸ್ಪತ್ರೆಯಲ್ಲಿ ಮೆಡಿಕಲ್ ಟೆಸ್ಟ್ ನಡೆದಿದೆ. ಬಳಿಕ ಬೆಳ್ತಂಗಡಿ ಕೋರ್ಟ್ ಮುಂದೆ ಹಾಜರು ಪಡಿಸಲಾಗಿದೆ. ಹೆಚ್ಚಿನ ವಿಚಾರಣೆಗಾಗಿ ಕಸ್ಟಡಿಗೆ ನೀಡುವಂತೆ SIT ಮನವಿ ಮಾಡಲಿದ್ದು, ಆ ಮೂಲಕ ಮತ್ತಷ್ಟು ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಮಾಸ್ಕ್ಮ್ಯಾನ್ ಆರೋಪದ ಬಗ್ಗೆ ಎಸ್‌ಐಟಿ ಅಧಿಕಾರಿಗಳು ಮಾಸ್ಕ್ಮ್ಯಾನ್ ಸಿಎನ್ ಚಿನ್ನಯ್ಯನನ್ನು ತನಿಖೆ ಮಾಡಿದ್ದರು. ಐಪಿಎಸ್ ಅಧಿಕಾರಿ ಪ್ರಣವ್ ಮೊಹಂತಿ ಕೂಡ ನಿನ್ನೆ ಮಧ್ಯಾಹ್ನ 2 ಗಂಟೆಯಿಂದ ಮಾಸ್ಕ್ಮ್ಯಾನ್ ವಿಚಾರಣೆ ಮಾಡಿದ್ದರು. ಸುದೀರ್ಘ ವಿಚಾರಣೆ ಬಳಿಕ ಇದೀಗ ಬಂಧಿಸಲಾಗಿದೆ.
ಬಂಧನಕ್ಕೆ ಕಾರಣ
ಅನಾಮಿಕ ದೂರುದಾರನು ನೀಡಿದ ಮಾಹಿತಿ ಮತ್ತು ತನಿಖೆ ನಂತರ ದೊರೆತ ವಾಸ್ತವಾಂಶಗಳ ನಡುವೆ ಭಾರಿ ವೈರುಧ್ಯಗಳು ಪತ್ತೆಯಾಗಿವೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಎಸ್‌ಐಟಿಯು ಈ ವ್ಯಕ್ತಿ ಸುಳ್ಳು ಮಾಹಿತಿ ನೀಡಿದ್ದಾನೆ, ತಪ್ಪು ದೂರು ಕೊಟ್ಟಿದ್ದಾನೆ ಮತ್ತು ತನಿಖೆಗೆ ಅಡ್ಡಿಪಡಿಸಿದ್ದಾನೆ ಎಂಬುದಕ್ಕೆ ಬಲವಾದ ಸಾಕ್ಷ್ಯಗಳನ್ನು ಸಂಗ್ರಹಿಸಿದೆ.
Advertisement