News headlines 25-08-2025 | RSS ಗೀತೆ ಹಾಡಿದ್ದಕ್ಕೆ ಡಿ.ಕೆ ಶಿವಕುಮಾರ್ ಕ್ಷಮೆ ಕೇಳಲಿ- ಬಿ.ಕೆ ಹರಿಪ್ರಸಾದ್; ಬಿಜೆಪಿಯಿಂದ 'ಧರ್ಮಸ್ಥಳ ಚಲೋ' ಯಾತ್ರೆ ಆರಂಭ; BMTC ಬಸ್ ಡಿಕ್ಕಿ; ಬಾಲಕ ಸಾವು!

News headlines 25-08-2025 | RSS ಗೀತೆ ಹಾಡಿದ್ದಕ್ಕೆ ಡಿ.ಕೆ ಶಿವಕುಮಾರ್ ಕ್ಷಮೆ ಕೇಳಲಿ- ಬಿ.ಕೆ ಹರಿಪ್ರಸಾದ್; ಬಿಜೆಪಿಯಿಂದ 'ಧರ್ಮಸ್ಥಳ ಚಲೋ' ಯಾತ್ರೆ ಆರಂಭ; BMTC ಬಸ್ ಡಿಕ್ಕಿ; ಬಾಲಕ ಸಾವು!

1. ಬಿಜೆಪಿಯಿಂದ 'ಧರ್ಮದ ಉಳಿವಿಗೆ ಧರ್ಮ ಯುದ್ಧ' ಶೀರ್ಷಿಕೆಯಡಿ 'ಧರ್ಮಸ್ಥಳ ಚಲೋ' ಯಾತ್ರೆ

ದಕ್ಷಿಣ ಬೆಂಗಳೂರು ಬಿಜೆಪಿ ಜಿಲ್ಲಾ ಘಟಕ ಇಂದು 'ಧರ್ಮದ ಉಳಿವಿಗೆ ಧರ್ಮ ಯುದ್ಧ' ಶೀರ್ಷಿಕೆಯಡಿ 'ಧರ್ಮಸ್ಥಳ ಚಲೋ' ಯಾತ್ರೆ ಆರಂಭಿಸಿದೆ. ಜಯನಗರ ಶಾಸಕ ಸಿಕೆ ರಾಮಮೂರ್ತಿ ನೇತೃತ್ವದ ಯಾತ್ರೆಯು ಜಯನಗರ 4ನೇ ಬ್ಲಾಕ್‌ನಲ್ಲಿರುವ ವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ಪ್ರಾರಂಭವಾಗಿದ್ದು, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಮತ್ತು ಬಸವನಗುಡಿ ಶಾಸಕ ರವಿ ಸುಬ್ರಹ್ಮಣ್ಯ ಅವರು ಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ತೇಜಸ್ವಿ ಸೂರ್ಯ, 'ಧರ್ಮಸ್ಥಳದ ಪವಿತ್ರ ದೇವಾಲಯದ ವಿರುದ್ಧ ಹರಡುತ್ತಿರುವ ಸುಳ್ಳು ಪ್ರಚಾರವನ್ನು ಬಿಜೆಪಿ ಸ್ಪಷ್ಟವಾಗಿ ಖಂಡಿಸುತ್ತದೆ. ದೇವಾಲಯ ಮತ್ತು ಅದರ ಆಡಳಿತ ಮಂಡಳಿ ವಿರುದ್ಧ ನಡೆದ ದೊಡ್ಡ ಪಿತೂರಿಯನ್ನು ಬಯಲು ಮಾಡಲು ನಾವು ಸಿಬಿಐ ತನಿಖೆಯನ್ನು ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ. ವಾಹನಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳವನ್ನು ತಲುಪಿದ ನಂತರ, ನಾಯಕರು ಒಂದು ಕಿಲೋಮೀಟರ್ ನಡೆದುಕೊಂಡು ಹೋಗಿ ಮಂಜುನಾಥ ಸ್ವಾಮಿ ದೇವಸ್ಥಾನಕ್ಕೆ ಪ್ರಾರ್ಥನೆ ಸಲ್ಲಿಸಿ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರನ್ನು ಭೇಟಿ ಮಾಡಲಿದ್ದಾರೆ.

2. Dharmasthala Case NIA ವಹಿಸುವ ಅಗತ್ಯವಿಲ್ಲ- Dr G Parameshwara

ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಹೇಗೆ ಮಾಡಬೇಕು ಎಂಬುದನ್ನು ಪೊಲೀಸರು ನಿರ್ಧರಿಸುತ್ತಾರೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಪ್ರಕರಣವನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (NIA) ವಹಿಸುವ ಅಗತ್ಯವಿಲ್ಲ ಎಂದು ಗೃಹ ಸಚಿವ ಜಿ ಪರಮೇಶ್ವರ ತಿಳಿಸಿದ್ದಾರೆ. ತನಿಖೆಗೆ ಗಡುವು ನಿಗದಿಪಡಿಸಲು ಸಾಧ್ಯವಿಲ್ಲ. 'ಇಷ್ಟೇ ಸಮಯದಲ್ಲಿ' ತನಿಖೆಯನ್ನು ಮುಗಿಸಲು ನಾವು ಅವರಿಗೆ ಆದೇಶಿಸಲು ಆಗದು. ಸಾಧ್ಯವಾದಷ್ಟು ಬೇಗ ತನಿಖೆಯನ್ನು ಮುಗಿಸಲು ಮಾತ್ರ ನಾನು ಎಸ್ಐಟಿಗೆ ಸೂಚಿಸಿದ್ದೇನೆ ಎಂದು ತಿಳಿಸಿದರು. ಧರ್ಮಸ್ಥಳ ಚಲೋ ಕೈಗೊಂಡಿರುವ ಬಿಜೆಪಿ ಕುರಿತು ಪ್ರತಿಕ್ರಿಯಿಸಿದ ಅವರು, ಅವರೆಲ್ಲರೂ ಮಂಜುನಾಥನ ದರ್ಶನ ಪಡೆಯಲು ಹೋಗುತ್ತಿರಬೇಕು. ಅವರು ಹೋಗಲಿ. ಈ ಪ್ರಕರಣದಲ್ಲಿ ಯಾರೂ ರಾಜಕೀಯ ಮಾಡಬಾರದು ಎಂಬುದೇ ನನ್ನ ವಿನಂತಿ ಎಂದು ಹೇಳಿದರು.

3. ಆರ್ ಎಸ್ಎಸ್ ಗೀತೆ ಹಾಡಿದ್ದಕ್ಕೆ ಡಿಕೆ ಶಿವಕುಮಾರ್ ಕ್ಷಮೆ ಕೇಳಲಿ- ಬಿಕೆ ಹರಿಪ್ರಸಾದ್ ಆಗ್ರಹ

ವಿಧಾನಸಭೆಯಲ್ಲಿ ಡಿಕೆ ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗಿ RSS ಸಂಘದ ಗೀತೆ ಹಾಡಿದ್ದು ತಪ್ಪು ಅವರು ಕ್ಷಮೆ ಕೇಳಬೇಕು ಎಂದು ಕಾಂಗ್ರೆಸ್ ನಾಯಕ ಬಿಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ. ಇದೇ ವಿಷಯವಾಗಿ ಮಾತನಾಡಿರುವ ಮಾಜಿ ಸಚಿವ ಕೆಎನ್ ರಾಜಣ್ಣ, ಅವರು ಆರ್‌ಎಸ್‌ಎಸ್‌ ಗೀತೆ ಹಾಡಬಹುದು, ಖಾಸಗಿ ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕ ಅಮಿತ್‌ ಶಾ ಜತೆಗೆ ವೇದಿಕೆ ಹಂಚಿಕೊಳ್ಳಬಹುದು, ಏನು ಬೇಕಾದರೂ ಮಾಡಬಹುದು. ನಾವು ಏನೂ ಮಾತಾಡುವಂತಿಲ್ಲ ಎಂದು ಮಾಜಿ ಸಚಿವ ಕೆ.ಎನ್‌.ರಾಜಣ್ಣ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ವಿರುದ್ಧ ಕಿಡಿಕಾರಿದ್ದಾರೆ. ಪ್ರಯಾಗ್‌ರಾಜ್‌ನ ಗಂಗೆಯಲ್ಲಿ ಸ್ನಾನ ಮಾಡಿದ ಮಾತ್ರಕ್ಕೆ ಬಡತನ ನಿವಾರಣೆಯಾಗುವುದಿಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದರು. ಇದರ ನಂತರವೂ ಡಿ.ಕೆ.ಶಿವಕುಮಾರ್‌ ಹೋಗಿ ಪುಣ್ಯ ಸ್ನಾನ ಮಾಡಿದರು. ಆರೆಸ್ಸೆಸ್‌ ಕಾಂಗ್ರೆಸ್ ಸಿದ್ದಾಂತಕ್ಕೆ ತದ್ವಿರುದ್ದ ಎಂದು ಗೊತ್ತಿದ್ದರೂ ಸದನದಲ್ಲಿ ಆರೆಸ್ಸೆಸ್‌ ಗೀತೆ ಹಾಡುತ್ತಾರೆ. ಈ ಎಲ್ಲಾ ವೈರುಧ್ಯಗಳಿಗೆ ಸೂಕ್ತ ಸಮಯದಲ್ಲಿ ಉತ್ತರ ನೀಡಲಿದ್ದೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

4. BMTC ಬಸ್ ಡಿಕ್ಕಿ; ಬಾಲಕ ಸಾವು!

ದ್ವಿಚಕ್ರ ವಾಹನಕ್ಕೆ ಬಿಎಂಟಿಸಿ ಬಸ್ ತಾಗಿ ನಿಯಂತ್ರಣ ತಪ್ಪಿ ರಸ್ತೆಗೆ ಬಿದ್ದ ಬಾಲಕ, ಬಸ್‌ನ ಚಕ್ರದಡಿಗೆ ಸಿಲುಕಿ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿರುವ ಭೀಕರ ಘಟನೆ ಹಲಸೂರು ಗೇಟ್ ಪೊಲೀಸ್ ಠಾಣಾ ವ್ಯಾಪ್ತಿಯ ಎಸ್‌ಜೆಪಿ ರಸ್ತೆ ಬಳಿ ಸಂಭವಿಸಿದೆ. ಶಬರೀಶ್ (11) ಮೃತ ದುರ್ದೈವಿಯಾಗಿದ್ದು ಬಾಲಕ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮನೊಂದಿಗೆ ದ್ವಿಚಕ್ರ ವಾಹನದಲ್ಲಿ ಪ್ರಯಾಣಿಸುತ್ತಿದ್ದಾಗ ಬಿಎಂಟಿಸಿ ಬಸ್ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಪರಿಣಾಮ ಕೆಳಗೆ ಬಿದ್ದ ಬಾಲಕನ ಮೇಲೆ ಬಸ್‌ನ ಹಿಂಬದಿಯ ಚಕ್ರ ಹರಿದಿದ್ದು, ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 2 ವಾರಗಳಲ್ಲಿ BMTC ಬಸ್ ನಿಂದ ಸಂಭವಿಸಿದ 5ನೇ ಅಪಘಾತ ಇದಾಗಿದೆ.

5. ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ DineshMangaluru ವಿಧಿವಶ

ಸ್ಯಾಂಡಲ್ ವುಡ್ ನ ಹಿರಿಯ ಪೋಷಕ ನಟ ಮಂಗಳೂರು ದಿನೇಶ್ ವಿಧಿವಶರಾಗಿದ್ದಾರೆ. ಉಡುಪಿ ಜಿಲ್ಲೆ ಕುಂದಾಪುರದ ಮನೆಯಲ್ಲಿ ಅವರು ಕೊನಯುಸಿರೆಳೆದಿದ್ದಾರೆ. ಕೆಜಿಎಫ್ ಬಾಂಬೆ ಡಾನ್ ಪಾತ್ರದಲ್ಲಿ ನಟಿಸಿದ್ದ ದಿನೇಶ್, ರಿಕ್ಕಿ, ಹರಿಕಥೆ ಅಲ್ಲ ಗಿರಿಕಥೆ, ಉಳಿದವರು ಕಂಡಂತೆ ಸೇರಿದಂತೆ ಹಲವು ಸಿನಿಮಾಗಳಲ್ಲಿ ಪೋಷಕ ನಟರಾಗಿ ಅಭಿನಯಿಸಿದ್ದರು. ಕಲಾ ನಿರ್ದೇಶಕರಾಗಿ ವೃತ್ತಿ ಬದುಕು ಆರಂಭಿಸಿ ನಟರಾಗಿ ಖ್ಯಾತಿ ಪಡೆದಿದ್ದರು. Brain Stroke ‌ಸ್ಟ್ರೋಕ್‌ನಿಂದಾಗಿ ಕುಂದಾಪುರ ಆಸ್ಪತ್ರೆಗೆ ದಾಖಲಾಗಿ ಕಳೆದ 5 ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com