
ಶಿವಮೊಗ್ಗ: ಭದ್ರಾವತಿಯಲ್ಲಿರುವ ಮೈಸೂರು ಪೇಪರ್ ಮಿಲ್ಸ್(MPM) ಅನ್ನು ಖಾಸಗಿ ಸಹ ಭಾಗಿತ್ವದಲ್ಲಿ ಪುನರಾರಂಭಿಸಲು ರಾಜ್ಯ ಸರ್ಕಾರ ಮುಂದಾಗಿದ್ದು, ಇದರ ಭಾಗವಾಗಿ MPM, ಬೆಂಗಳೂರು ಮೂಲದ ಸಲಹಾ ಸಂಸ್ಥೆಯಾದ ಮೂಲಸೌಕರ್ಯ ಅಭಿವೃದ್ಧಿ ನಿಗಮ(ಕರ್ನಾಟಕ) ಲಿಮಿಟೆಡ್(iDeCK) ಅನ್ನು ತನ್ನ ವಹಿವಾಟು ಸಲಹೆಗಾರರಾಗಿ ಕಾರ್ಯನಿರ್ವಹಿಸುತ್ತಿದೆ.
ಇತ್ತೀಚೆಗೆ ವಿಧಾನಸಭೆಯಲ್ಲಿ ಭದ್ರಾವತಿ ಶಾಸಕ ಬಿ ಕೆ ಸಂಗಮೇಶ್ವರ ಅವರ ಪ್ರಶ್ನೆಗೆ ಉತ್ತರಿಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಅವರು, ಕಾರ್ಖಾನೆಯನ್ನು ಸ್ವಂತವಾಗಿ ಪುನರುಜ್ಜೀವನಗೊಳಿಸುವುದು ಕಾರ್ಯಸಾಧ್ಯವಲ್ಲ ಎಂದು ಸರ್ಕಾರ ತೀರ್ಮಾನಿಸಿದೆ. ಬದಲಾಗಿ, ಖಾಸಗಿ ಬಿಡ್ಡರ್‌ಗಳಿಗೆ ಗುತ್ತಿಗೆ ನೀಡುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ, ವಿನಾಯಿತಿ ಮತ್ತು ಪರಿಹಾರ ಕ್ರಮಗಳನ್ನು ಪರಿಗಣಿಸಲಾಗುತ್ತಿದೆ ಎಂದು ತಿಳಿಸಿದ್ದರು.
"ನೀಲಗಿರಿ ಬೆಳೆಯಲು ವಿನಾಯಿತಿ ನೀಡಿದರೆ ಮತ್ತು ಹೊಣೆಗಾರಿಕೆಗಳಿಂದ ಮುಕ್ತರಾಗಿದ್ದರೆ, ನಿರೀಕ್ಷಿತ ಬಿಡ್ಡರ್‌ಗಳು ಕಾರ್ಖಾನೆಯನ್ನು ನಿರ್ವಹಿಸಲು ಆಸಕ್ತಿ ತೋರಿಸಿದ್ದಾರೆ. ನಿಯಮಗಳ ಪ್ರಕಾರ ಸರ್ಕಾರ ಈ ದಿಕ್ಕಿನಲ್ಲಿ ಕ್ರಮ ತೆಗೆದುಕೊಳ್ಳುತ್ತಿದೆ ಮತ್ತು ಪ್ರಕ್ರಿಯೆಯು ಅಂತಿಮಗೊಂಡ ನಂತರ ಕಾರ್ಖಾನೆಯನ್ನು ಪುನರಾರಂಭಿಸಬಹುದು" ಎಂದು ಪಾಟೀಲ್ ಹೇಳಿದರು.
ಈ ಹಂತಗಳ ಭಾಗವಾಗಿ, MPM ತನ್ನ ವಹಿವಾಟು ಸಲಹೆಗಾರರಾಗಿ iDeCK ಸೇವೆಗಳನ್ನು ಪಡೆದುಕೊಂಡಿದೆ. ಬಿಡ್ ತಯಾರಿಕೆ, ಮೌಲ್ಯಮಾಪನ ಮತ್ತು ಒಪ್ಪಂದಗಳ ಅಂತಿಮಗೊಳಿಸುವಿಕೆ ಸೇರಿದಂತೆ ಕಾರ್ಖಾನೆ ಕಾರ್ಯಾಚರಣೆಗಳನ್ನು ಖಾಸಗಿ ಸಂಸ್ಥೆಗೆ ಗುತ್ತಿಗೆ ನೀಡುವ ಪ್ರಕ್ರಿಯೆಯನ್ನು ಸಂಸ್ಥೆಯು ನಡೆಸುತ್ತಿದೆ ಎಂದರು.
ಎಂಪಿಎಂ ವ್ಯಾಪ್ತಿಯಲ್ಲಿ ಸುಮಾರು 23 ಸಾವಿರ ಹೆಕ್ಟೇರ್ ಅರಣ್ಯ ಮತ್ತು ಅರಣ್ಯೇತರ ಭೂಮಿ ಇದ್ದು ಇಲ್ಲಿ ಸದ್ಯಕ್ಕೆ ಅಕೇಶಿಯಾ, ನೀಲಗಿರಿ ಮತ್ತು ಬಿದಿರನ್ನು ಬೆಳೆಯಲಾಗುತ್ತಿದೆ. ಒಂದು ವೇಳೆ ಕಾರ್ಖಾನೆಯನ್ನು ಗುತ್ತಿಗೆ ನೀಡಿದರೂ, ಕಾರ್ಖಾನೆ ಜಾಗದಲ್ಲಿ, ನಿಷೇಧಿಸಿರುವ ನೀಲಿಗಿರಿ ಬೆಳೆಯಲು ಅವಕಾಶ ನೀಡಬಹುದೇ ಎಂಬುದನ್ನೂ ಕೂಲಂಕುಶವಾಗಿ ಪರಿಶೀಲಿಸಬೇಕು ಎಂದು ಸಚಿವರು ವಿವರಿಸಿದರು.
Advertisement