ವಿಧಾನಸಭೆಯಲ್ಲಿ RSS ಸಂಘದ ಗೀತೆ ಹಾಡಿದ್ದಕ್ಕೆ ಬಿಕೆ ಹರಿಪ್ರಸಾದ್ ಸೇರಿದಂತೆ ಪಕ್ಷದ ನಾಯಕರಿಂದ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ಇಂದು ಸುದ್ದಿಗೋಷ್ಠಿ ನಡೆಸಿದ ಡಿ ಕೆ ಶಿವಕುಮಾರ್ ಸ್ಪಷ್ಟನೆ ನೀಡಿ ಕ್ಷಮೆ ಕೇಳಿದ್ದಾರೆ. ನಾನು ಹುಟ್ಟಿದ್ದೇ ಕಾಂಗ್ರೆಸ್ಸಿಗನಾಗಿ. ನಾನು ಸಾಯುವುದೂ ಕಾಂಗ್ರೆಸ್ಸಿಗನಾಗಿಯೇ. ನನ್ನ ಪಕ್ಷ ನಿಷ್ಠೆಯನ್ನು ಪ್ರಶ್ನಿಸುವವರು ಮೂರ್ಖರು’ ಎಂದು ಖಡಕ್ ತಿರುಗೇಟು ನೀಡಿದರು. ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರಿಗೆ ಉತ್ತರ ನೀಡುವಾಗ, ಆರ್ ಎಸ್ ಎಸ್ ಸಿದ್ಧಾಂತದ ಅರಿವಿದೆ ಎಂದು ಕಾಲೆಳೆದೆ ಅಷ್ಟೆ. ಅದು ಬಿಟ್ಟರೆ ಇನ್ನೇನಿಲ್ಲ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ. ನಾನು ಹೊಸದಾಗಿ ಕಾಂಗ್ರೆಸ್ ಸೇರಿಲ್ಲ, ಯಾರ ಪಾಠವೂ ಅಗತ್ಯವಿಲ್ಲ. ನನಗೂ ಗಾಂಧಿ ಕುಟುಂಬಕ್ಕೂ ಭಕ್ತ ಭಗವಂತನ ನಡುವಿರುವ ಸಂಬಂಧ. ರಾಜಕಾರಣಕ್ಕೆ ಬರೋದಕ್ಕಿಂತಲೂ ಮುನ್ನ ಎಲ್ಲಾ ಪಕ್ಷಗಳ ಅಧ್ಯಯನ ಮಾಡಿದ್ದೇನೆ. ನನ್ನ ಮಾತು ಯಾರಿಗಾದರೂ ನೋವಾಗಿದ್ದರೆ ಬೇಕಾದರೆ ಕ್ಷಮೆ ಕೇಳೋಣ. ಬಿಕೆ ಹರಿಪ್ರಸಾದ್ಗೂ ಕ್ಷಮೆ ಕೇಳೋಣ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಈ ಬಾರಿ ವಿಶ್ವವಿಖ್ಯಾತ ಮೈಸೂರು ದಸರಾ ಉದ್ಘಾಟನೆ ಬಾನು ಮುಷ್ತಾಕ್ ಅವರನ್ನು ಆಯ್ಕೆ ಮಾಡಿರುವುದು ಆಡಳಿತ- ವಿಪಕ್ಷಗಳ ನಡುವೆ ವಾಕ್ಸಮರಕ್ಕೆ ಕಾರಣವಾಗಿದೆ. ಕನ್ನಡವನ್ನು ತಾಯಿ ಭುವನೇಶ್ವರಿ ಎಂದದ್ದನ್ನು ಬಾನು ಮುಷ್ತಾಕ್ ಹಿಂದೊಮ್ಮೆ ಆಕ್ಷೇಪ ವ್ಯಕ್ತಪಡಿಸಿದ್ದ ಹಳೆಯ ವಿಡಿಯೋವನ್ನು ಉಲ್ಲೇಖಿಸಿ ಬಿಜೆಪಿ ವಿರೋಧ ವ್ಯಕ್ತಪಡಿಸಿದೆ. ಈ ಮಧ್ಯೆ ಮೈಸೂರು ಬಿಜೆಪಿ ಸಂಸದ ಹಾಗೂ ರಾಜವಂಶಸ್ಥರೂ ಆಗಿರುವ ಯದುವೀರ್ ಒಡೆಯರ್ ಪ್ರತಿಕ್ರಿಯೆ ನೀಡಿದ್ದು, ಬಾನು ಮುಷ್ತಾಕ್ ಅವರು ಖ್ಯಾತ ಬರಹಗಾರ್ತಿ, ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಬಾನು ಮುಷ್ತಾಕ್ ನೀಡಿದ ಕೊಡುಗೆ ಅಪಾರವಾಗಿದ್ದು, ನಾವು ಅದನ್ನು ಗೌರವಿಸುತ್ತವೆ. ಆದರೆ ದಸರಾ ಉದ್ಘಾಟಿಸುವ ಮೊದಲು ಅವರು ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿಯ ಬಗ್ಗೆ ಅವರ ಗೌರವವನ್ನು ಸ್ಪಷ್ಟಪಡಿಸುವುದು ಈ ಸಮಯದಲ್ಲಿ ಅತ್ಯಂತ ಅಗತ್ಯ ಎಂದು ಹೇಳಿದ್ದಾರೆ. ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾನು ಮುಷ್ತಾಕ್, ಚಾಮುಂಡೇಶ್ವರಿ ದೇವಿ ಬಗ್ಗೆ ಗೌರವವಿದೆ, ಧಾರ್ಮಿಕ ಭಾವನೆಗಳ ಗೌರವಿಸುತ್ತೇನೆ, ದಸರಾ ಉದ್ಘಾಟಿಸುವ ಈ ಗೌರವವನ್ನು ಪ್ರೀತಿಯಿಂದ ಸ್ವೀಕರಿಸುತ್ತೇನೆ. ನಾಡ ಹಬ್ಬ ಹಿಂದೂ ಸಂಸ್ಕೃತಿಯ ಒಂದು ಭಾಗವಾಗಿದೆ. ಸಮಾಜದ ಎಲ್ಲಾ ವರ್ಗಗಳು ಇದನ್ನು ವಾರ್ಷಿಕ ಹಬ್ಬವಾಗಿ ಆನಂದಿಸುತ್ತವೆ. ಲಕ್ಷಾಂತರ ಜನರು ಭಾಗವಹಿಸುವ ದಸರಾದ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ ಎಂದು ತಿಳಿಸಿದ್ದಾರೆ.
ಧರ್ಮಸ್ಥಳ ಸಾಮೂಹಿಕ ಅಂತ್ಯಕ್ರಿಯೆ ಪ್ರಕರಣದ ಸಾಕ್ಷಿದಾರನಾಗಿದ್ದ ವ್ಯಕ್ತಿಗೆ ಆಶ್ರಯ ನೀಡಿದ್ದ ಹಿನ್ನೆಲೆಯಲ್ಲಿ ಎಸ್ ಐಟಿ ಅಧಿಕಾರಿಗಳ ತಂಡ ಇಂದು ಬೆಳಗ್ಗೆ ತಿಮರೋಡಿ ಮತ್ತು ಅವರ ಸಹೋದರನ ಮನೆಗೆ ತೆರಳಿ ಇಂದು ಪರಿಶೀಲನೆ ನಡೆಸಿದ್ದಾರೆ. ತಿಮರೋಡಿಯವರ ಬಳಿ ಇರುವ ಮೊಬೈಲ್ ನಲ್ಲಿ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಮಾಹಿತಿ ಇದೆ ಎಂದು ಚಿನ್ನಯ್ಯ ಹೇಳಿದ್ದು ಈ ಸಂಬಂಧ ಎಸ್ ಐಟಿ ತಂಡ ಶೋಧ ನಡೆಸುತ್ತಿದೆ. ಈ ವೇಳೆ ಚಿನ್ನಯ್ಯನ ಮೊಬೈಲ್ ಪತ್ತೆ ಆಗಿದೆ. ಇನ್ನು ಅನನ್ಯಾ ಭಟ್ ನಾಪತ್ತೆ ಪ್ರಕರಣದ ಸಂಬಂಧ ಸುಜಾತ ಭಟ್ ಇಂದು ಬೆಳ್ಳಂಬೆಳಗ್ಗೆ ಬೆಳ್ತಂಗಡಿಯಲ್ಲಿ ವಿಶೇಷ ತನಿಖಾ ತಂಡದ ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಅಚ್ಚರಿ ಮೂಡಿಸಿದರು. ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಪೊಲೀಸರು ಶುಕ್ರವಾರ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು.
2 ತಿಂಗಳ ನಿಷೇಧದ ನಂತರ ಸ್ವಲ್ಪ ಸಮಯದವರೆಗೆ ಕಾರ್ಯಾಚರಣೆಯನ್ನು ಪುನರಾರಂಭಿಸಿದ್ದ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮತ್ತೆ ಸ್ಥಗಿತಗೊಳಿಸಲಾಗಿದೆ. ಆಗಸ್ಟ್ 22 ರಂದು ಕರ್ನಾಟಕ ಹೈಕೋರ್ಟ್ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳನ್ನು ನಿರ್ವಹಿಸಲು ಅಗ್ರಿಗೇಟರ್‌ಗಳಿಗೆ ಅನುಮತಿ ನೀಡುವ ಯಾವುದೇ ಆದೇಶವನ್ನು ಹೊರಡಿಸಿಲ್ಲ ಎಂದು ಸ್ಪಷ್ಟಪಡಿಸಿದ ನಂತರ ಈ ಕ್ರಮ ಕೈಗೊಳ್ಳಲಾಗಿದೆ.
ಬೆಂಗಳೂರು ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಿಗೆ ಶೇ 50ರ ರಿಯಾಯಿತಿ ನೀಡಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದ್ದು, ಸೈಬರ್ ಅಪರಾಧಿಗಳು ಸಾರ್ವಜನಿಕರನ್ನು ವಂಚಿಸುತ್ತಿದ್ದಾರೆ. ಇತ್ತೀಚೆಗೆ, 50 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು ಆನ್‌ಲೈನ್‌ನಲ್ಲಿ ದಂಡ ಪಾವತಿಸಲು ಲಿಂಕ್ ಎಂದು ನಂಬಿ ವಾಟ್ಸಾಪ್ ಮೂಲಕ ಕಳುಹಿಸಲಾದ ಎಪಿಕೆ ಫೈಲ್ ನ್ನು ಕ್ಲಿಕ್ ಮಾಡಿ 2.65 ಲಕ್ಷ ರೂ.ಗಳನ್ನು ಕಳೆದುಕೊಂಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಯಾವುದೇ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಬೇಡಿ ಎಂದು ಪೊಲೀಸರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
Advertisement