
ಬೆಂಗಳೂರು: ಇತ್ತೀಚೆಗೆ ಸಂಸತ್ತಿನಲ್ಲಿ ಅಂಗೀಕರಿಸಲಾದ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ ವಿರುದ್ಧ ಗೇಮಿಂಗ್ ಆಪರೇಟರ್ ಒಬ್ಬರು ಗುರುವಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಕೇಂದ್ರ ಸರ್ಕಾರದ ಕಾಯ್ದೆಯ ವಿರುದ್ಧ ಕಂಪನಿಯೊಂದು ನ್ಯಾಯಾಂಗದ ಬಾಗಿಲು ತಟ್ಟಿರುವುದು ಇದೇ ಮೊದಲು.
'ಎ23 ರಮ್ಮಿ'ಯ ಆಪರೇಟರ್ ಆಗಿರುವ ಡಿಜಿಟಲ್ ವರ್ಕ್ಸ್ ಮುಖ್ಯಸ್ಥರು ಇಂದು ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಕಾಯ್ದೆ 2025 ರ ಸಿಂಧುತ್ವವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದು, ಆಗಸ್ಟ್ 30 ರಂದು ವಿಚಾರಣೆ ಕೈಗೆತ್ತಿಕೊಳ್ಳಲಿದೆ.
ಈ ವಿಷಯವನ್ನು ನ್ಯಾಯಮೂರ್ತಿ ಬಿ ಎಂ ಶ್ಯಾಮ್ ಪ್ರಸಾದ್ ಅವರ ಮುಂದೆ ಉಲ್ಲೇಖಿಸಲಾಗಿದ್ದು, ಅವರು ಇದನ್ನು ಶನಿವಾರ ವಿಚಾರಣೆಗೆ ಪಟ್ಟಿ ಮಾಡುವಂತೆ ನಿರ್ದೇಶಿಸಿದ್ದಾರೆ.
ಸಂಸತ್ತಿನ ಎರಡೂ ಸದನಗಳು ಅಂಗೀಕರಿಸಿದ ಈ ಮಸೂದೆಗೆ ಆಗಸ್ಟ್ 22 ರಂದು ರಾಷ್ಟ್ರಪತಿಗಳು ಸಹಿ ಹಾಕಿದ್ದಾರೆ.
ಮುಂಗಾರು ಅಧಿವೇಶನದಲ್ಲಿ ಅಂಗೀಕರಿಸಿದ ಆನ್‌ಲೈನ್ ಗೇಮಿಂಗ್ ಪ್ರಚಾರ ಮತ್ತು ನಿಯಂತ್ರಣ ಮಸೂದೆ 2025, ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳು ಮತ್ತು ರಿಯಲ್ ಮನಿ ಗೇಮ್‌ಗಳ ಮೂಲಕ ಹಣವನ್ನು ಪಣಕ್ಕಿಟ್ಟು ಆಡುವ ಆಟ- ಅದು ಕೌಶಲ್ಯದ ಆಟವೇ ಆಗಿರಲಿ ಅಥವಾ ಅದೃಷ್ಟದ ಆಟವೇ ಆಗಿರಲಿ- ಅಂತಹ ಆಟಗಳನ್ನು ನಿಷೇಧಿಸುತ್ತದೆ. ಇಂತಹ ಆಟಗಳ ಪರ ಸೆಲೆಬ್ರಿಟಿಗಳ ಜಾಹೀರಾತುಗಳನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಟಿವಿ, ಡಿಜಿಟಲ್, ಮುದ್ರಣ ಮಾಧ್ಯಮಗಳಲ್ಲಿ ಇನ್ನುಮುಂದೆ ಆನ್‌ಲೈನ್ ಮನಿ ಗೇಮ್‌ಗಳ ಪ್ರಚಾರ ಮಾಡದಂತೆ ಎಚ್ಚರಿಸಲಾಗಿದೆ. ಜೊತೆಗೆ ಬ್ಯಾಂಕ್‌ಗಳು ಇತರ ಹಣಕಾಸು ಸಂಸ್ಥೆಗಳ ಮೂಲಕ ಅಕ್ರಮ ಹಣ ವರ್ಗಾವಣೆಗೂ ನಿಯಂತ್ರಣ ಹೇರಲಾಗಿದೆ. ಕಾನೂನನ್ನು ಉಲ್ಲಂಘಿಸಿದವರಿಗೆ 3 ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಕೋಟಿ ರೂಪಾಯಿವರೆಗೆ ದಂಡ ವಿಧಿಸಬಹುದು ಎಂದು ಕಾನೂನು ಹೇಳುತ್ತದೆ.
Advertisement