
ಚಿಕ್ಕಮಗಳೂರು: ಎನ್.ಆರ್.ಪುರ ತಾಲ್ಲೂಕಿನ ಮೆಣಸೂರು ರಾವೂರು ಶಿಬಿರದಲ್ಲಿ ವಾಸಿಸುವ ಶಿಳ್ಳೆಕ್ಯಾತ ಮೀನುಗಾರಿಕಾ ಸಮುದಾಯದ (ಪರಿಶಿಷ್ಟ ಜಾತಿ) ಸುಮಾರು 150 ಕುಟುಂಬಗಳಿಗೆ ತಮ್ಮ ಸಂಬಂಧಿಕರನ್ನು ಹೂಳಲು ತುಂಡು ಭೂಮಿಯಿಲ್ಲದೆ ಪರದಾಡುತ್ತಿದ್ದಾರೆ.
ಈ ಕುಟುಂಬಗಳು ಸುಮಾರು ಎರಡು ದಶಕಗಳಿಂದ ಭದ್ರಾ ನದಿಯ ಹಿನ್ನೀರಿನ ಬಳಿಯ ಶಿಬಿರದಲ್ಲಿ ವಾಸಿಸುತ್ತಿದ್ದರೂ, ಸ್ಮಶಾನ ಸ್ಥಳದಿಂದ ವಂಚಿತರಾಗಿದ್ದಾರೆ. ಸಮುದಾಯದ ಸದಸ್ಯರು ತಮ್ಮ ಶಿಬಿರದಿಂದ ಕೆಲವು ಕಿಲೋಮೀಟರ್ ದೂರದಲ್ಲಿರುವ ಕಿರು ದ್ವೀಪದಲ್ಲಿ ಸತ್ತವರನ್ನು ಹೂಳಬೇಕಾಗಿದೆ. ಭಾನುವಾರ ನಿಧನರಾದ ವೃದ್ಧ ವ್ಯಕ್ತಿಯ ಶವವನ್ನು ಅಂತಿಮ ವಿಧಿವಿಧಾನಗಳನ್ನು ಮಾಡಲು ಹಳ್ಳದ ಮೇಲೆ ದ್ವೀಪಕ್ಕೆ ಕೊಂಡೊಯ್ಯಲಾಯಿತು.
ಮಳೆಗಾಲದಲ್ಲಿ ಸತ್ತವರನ್ನು ಹೂಳಲು ಅವರು ಹೆಣಗಾಡುತ್ತಿದ್ದಾರೆ ಎಂದು ಸಮುದಾಯದ ಸದಸ್ಯರೊಬ್ಬರು TNIE ಗೆ ತಿಳಿಸಿದರು. "ನಾವು ಗುಂಡಿಯನ್ನು ಅಗೆಯಲು ಪ್ರಾರಂಭಿಸಿದಾಗ ನಮಗೆ ನೀರು ಸಿಗುತ್ತದೆ. ಶವವನ್ನು ಅಲ್ಲಿ ಹೂಳುವ ಮೊದಲು ನೀರು ಸೋರಿಕೆಯಾಗದಂತೆ ತಡೆಯಲು ನಾವು ಗುಂಡಿಯನ್ನು ಎಲೆಗಳಿಂದ ಮುಚ್ಚುತ್ತೇವೆ. ಭಾನುವಾರವೂ ನಾವು ಈ ಸಮಸ್ಯೆಯನ್ನು ಎದುರಿಸಿದ್ದೇವೆ" ಎಂದು ಅವರು ಅಳಲು ತೋಡಿಕೊಂಡರು.
ಕೆಲವೊಮ್ಮೆ, ಶವಗಳನ್ನು ಮೊದಲೇ ಹೂಳಲಾದ ಸ್ಥಳಗಳಲ್ಲಿ ಮತ್ತೆ ಹೊಂಡಗಳನ್ನು ಅಗೆಯುವ ಪರಿಸ್ಥಿತಿಯಿದೆ. ಬೇಸಿಗೆಯಲ್ಲಿ, ಭದ್ರಾ ಹಿನ್ನೀರು ಕಡಿಮೆಯಾಗುತ್ತದೆ ಆಗ ಶವಗಳನ್ನು ತೀರದಲ್ಲಿ ಹೂಳಲಾಗುತ್ತದೆ ಎಂದು ಅವರು ಹೇಳಿದರು.
ನಮಗೆ ಮನೆ, ವಿದ್ಯುತ್, ಸ್ಮಶಾನ ಮತ್ತು ಇತರ ಸೌಲಭ್ಯಗಳನ್ನು ಒದಗಿಸುವಂತೆ ಗ್ರಾಮ ಪಂಚಾಯತ್, ತಾಲ್ಲೂಕು ಆಡಳಿತ, ಸ್ಥಳೀಯ ಶಾಸಕರು ಮತ್ತು ಇತರ ಚುನಾಯಿತ ಪ್ರತಿನಿಧಿಗಳಿಗೆ ನಾವು ಮಾಡಿದ ಮನವಿಗಳು ವ್ಯರ್ಥವಾಗಿವೆ ಎಂದು ಸಮುದಾಯದ ಮತ್ತೊಬ್ಬ ಸದಸ್ಯರು ಹೇಳಿದರು.
ಶಿಳ್ಳೆಕ್ಯಾತ ಮೀನುಗಾರ ಸಮುದಾಯದ ಸದಸ್ಯರು ಮೂಲತಃ ಅಲೆಮಾರಿಗಳಾಗಿದ್ದು, ಅವರು ಒಂದು ನಿರ್ದಿಷ್ಟ ಸ್ಥಳದಲ್ಲಿ ಹೆಚ್ಚು ಕಾಲ ವಾಸಿಸುವುದಿಲ್ಲ ಎಂದು ಸ್ಥಳೀಯ ನಾಯಕರೊಬ್ಬರು ಹೇಳಿದರು. ಈ ಕಾರಣದಿಂದಾಗಿ ಅವರು ಮೂಲಭೂತ ಸೌಲಭ್ಯಗಳಿಂದ ವಂಚಿತರಾಗಿದ್ದಾರೆ ಎಂದು ತಿಳಿಸಿದ್ದಾರೆ.
Advertisement