ಕ್ರೀಡಾಕೂಟಗಳ ಪದಕ ವಿಜೇತರಿಗೆ ನಗದು ಪುರಸ್ಕಾರವನ್ನು ಹೆಚ್ಚಿಸಿ, ಚಿನ್ನ ಪದಕ ವಿಜೇತರಿಗೆ 7 ಲಕ್ಷ ರೂ, ಬೆಳ್ಳಿ ಪದಕ ವಿಜೇತರಿಗೆ 5 ಲಕ್ಷ ರೂ. ಹಾಗೂ ಕಂಚಿನ ಪದಕ ವಿಜೇತರಿಗೆ 3 ಲಕ್ಷ ರೂ. ನೀಡಲು ಸರ್ಕಾರ ತೀರ್ಮಾನಿಸಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಆಯೋಜಿಸಿದ್ದ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪದಕ ವಿಜೇತ ಕ್ರೀಡಾಪಟುಗಳಿಗೆ ನಗದು ಪುರಸ್ಕಾರವನ್ನು ಹೆಚ್ಚಿಸುತ್ತೇವೆ, ನಮ್ಮ ರಾಜ್ಯದವರು ಒಲಿಂಪಿಕ್ಸ್‌ನಲ್ಲಿ ಪದಕ ಗೆದ್ದರೆ ₹5 ಕೋಟಿ ನಗದು ಕೊಡಲಾಗುವುದು ಎಂದು ಘೋಷಣೆ ಮಾಡಿದ್ದಾರೆ. ಪದಕ ವಿಜೇತರಿಗೆ ಸರ್ಕಾರಿ ಉದ್ಯೋಗದಲ್ಲಿ ಮೀಸಲಾತಿ ನೀಡಲು ಆದೇಶ ನೀಡಲಾಗಿದೆ. ಬಜೆಟ್ ನಲ್ಲಿ ಘೋಷಿಸಿರುವಂತೆ ಒಲಂಪಿಕ್ಸ್ , ಏಷ್ಯನ್ ಗೇಮ್ಸ್, ಹಾಗೂ ಕಾಮನ್ ವೆಲ್ತ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗೆದ್ದವರಿಗೆ 5 ಕೋಟಿ ರೂ., ಬೆಳ್ಳಿ ಗೆದ್ದವರಿಗೆ 3 ಕೋಟಿ ರೂ. ಹಾಗೂ ಕಂಚು ಗೆದ್ದವರಿಗೆ 2 ಕೋಟಿ ರೂ.ಗಳ ಬಹುಮಾನವನ್ನು ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಮತಗಳ್ಳತನ ಮಾಡಿ ಬಿಜೆಪಿ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಈ ಮಧ್ಯೆ ಸಿಎಂ ಸಿದ್ದರಾಮಯ್ಯ ತಾವು 1991ರ ಲೋಕಸಭಾ ಚುನಾವಣೆಯಲ್ಲಿ ವಂಚನೆಯಿಂದಾಗಿ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋತಿದ್ದಾಗಿ ಹೇಳಿದ್ದು ಇದೀಗ ವಿವಾದಕ್ಕೆ ಕಾರಣವಾಗಿದೆ. ವಕೀಲರ ಸಂಘದ ವತಿಯಿಂದ ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಏರ್ಪಡಿಸಿದ್ದ ಮಾಜಿ ಅಡ್ವೋಕೇಟ್ ಜನರಲ್ ಪ್ರೊ. ರವಿವರ್ಮ ಕುಮಾರ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ಸಿಎಂ, 1991ರಲ್ಲಿ ಮೋಸದ ಸೋಲಿನ ವಿರುದ್ಧ ಹೋರಾಡಲು ಹಿರಿಯ ವಕೀಲ ಪ್ರೊ.ರವಿವರ್ಮ ಕುಮಾರ್ ನೆರವು ನೀಡಿದ್ದರು ಎಂದು ಸ್ಮರಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಬಿಜೆಪಿ, ನಿಮ್ಮ ಮೋಸ ಬಯಲು ಮಾಡಿದ ಸಿದ್ದರಾಮಯ್ಯರನ್ನು ಸಿಎಂ ಸ್ಥಾನದಿಂದ ವಜಾ ಮಾಡುವ ಧೈರ್ಯ ಇದೆಯಾ? ಶಿಸ್ತು ಕ್ರಮ ಏನಿದ್ದರೂ ದಲಿತ ನಾಯಕರ ಮೇಲೆ ಪ್ರಯೋಗ ಮಾಡಲು ಮಾತ್ರ ಸೀಮಿತನಾ? ಎಂದು ಕಾಂಗ್ರೆಸ್ ನ್ನು ಪ್ರಶ್ನಿಸಿದೆ.
ಸೆಪ್ಟೆಂಬರ್ 2 ರಿಂದ ಅಧಿಕೃತವಾಗಿ ಪ್ರಾರಂಭವಾಗಲಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಡಳಿತಕ್ಕಾಗಿ ಸರ್ಕಾರ ನೀಲನಕ್ಷೆಯನ್ನು ಸಿದ್ಧಪಡಿಸಿದೆ. ಆರೋಗ್ಯ, ಶಿಕ್ಷಣ, ಕಂದಾಯ ಮತ್ತು ಹಣಕಾಸು ಇಲಾಖೆಗಳು ನೇರವಾಗಿ ಜಿಬಿಎ ಅಡಿಯಲ್ಲಿ ಬರುತ್ತವೆ. ಮೂವರು ಐಎಎಸ್ ಅಧಿಕಾರಿಗಳು ವಿಶೇಷ ಆಯುಕ್ತರಾಗಿರುತ್ತಾರೆ ಮತ್ತು ಕಂದಾಯ, ಶಿಕ್ಷಣ, ವಿಪತ್ತು ನಿರ್ವಹಣೆ, ಆಡಳಿತ, ಮಾಹಿತಿ ತಂತ್ರಜ್ಞಾನ ಮತ್ತು ಚುನಾವಣಾ ಇಲಾಖೆಗಳನ್ನು ನೋಡಿಕೊಳ್ಳುತ್ತಾರೆ. ಬಿಎಂಟಿಎಫ್ ನೇರವಾಗಿ ಮುಖ್ಯ ಆಯುಕ್ತರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದಲ್ಲದೆ, 5 ಹೊಸ ಮುನ್ಸಿಪಲ್ ಕಾರ್ಪೊರೇಷನ್ ಆಯುಕ್ತರು ಮುಖ್ಯ ಆಯುಕ್ತರ ನಿರ್ದೇಶನದಂತೆ ಕೆಲಸ ಮಾಡುತ್ತಾರೆ.
ಧರ್ಮಸ್ಥಳ ಪ್ರಕರಣದ ಸಂಬಂಧ ಎಸ್ ಐಟಿ ವಶದಲ್ಲಿರುವ ಮುಸುಕುಧಾರಿಯಾಗಿದ್ದ ಚಿನ್ನಯ್ಯ 'ಸುಳ್ಳು ಹೇಳಲು ಹಣ ಪಡೆದಿರುವುದಾಗಿ' ತಪ್ಪೊಪ್ಪಿಗೆ ಹೇಳಿಕೆ ನೀಡಿದ್ದಾನೆ ಎಂದು ತಿಳಿದುಬಂದಿದೆ. ಧರ್ಮಸ್ಥಳದ ವಿರುದ್ಧ ನಿರಂತರ ಸುಳ್ಳು ಹೇಳಿ ಕೆಟ್ಟ ಹೆಸರು ತರಲು ಸುಮಾರು 4 ಲಕ್ಷ ರೂ ಹಣ ನೀಡಿದ್ದರು. ಒಂದು ಹಂತದಲ್ಲಿ ನಾನು ದೂರವಾಗಲು ಬಯಸಿದಾಗ ಬೆದರಿಕೆ ಹಾಕಲಾಗಿತ್ತು ಎಂದು ಆತ ಎಸ್‌ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಇನ್ನು ಮಾಧ್ಯಮ ಸಂವಾದದ ಸಂದರ್ಭದಲ್ಲಿ ರೌಡಿಶೀಟರ್ ಒಬ್ಬರನ್ನು ಮಾನವ ಹಕ್ಕುಗಳ ಅಧಿಕಾರಿ ಎಂದು ಪರಿಚಯಿಸಿದ ಆರೋಪದ ಮೇಲೆ ಕಾರ್ಯಕರ್ತ ಗಿರೀಶ್ ಮಟ್ಟಣ್ಣವರ್ ವಿರುದ್ಧ ಪ್ರಕರಣ ದಾಖಲಾಗಿದೆ.
ರಾಜ್ಯ ಕಾಂಗ್ರೆಸ್ ಸರ್ಕಾರ ಒಂದಲ್ಲ ಒಂದು ವಿವಾದಕ್ಕೀಡಾಗಿ ಮುಜುಗರ ಅನುಭವಿಸುತ್ತಿದೆ. ಈಗ ಸರ್ಕಾರದ ಭಾಗವಾಗಿರುವ ಶಿವಾನಂದ ಪಾಟೀಲ್ ಸರ್ಕಾರಿ ವೈದ್ಯಕೀಯ ಕಾಲೇಜು ವಿಚಾರವಾಗಿ ತಮ್ಮದೇ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಚಿವ ಶಿವಾನಂದ ಪಾಟೀಲ್, ಪಿಪಿಪಿ ಮಾದರಿಯ ಮೆಡಿಕಲ್ ಕಾಲೇಜು ಸ್ಥಾಪನೆ ಪ್ರಸ್ತಾವನೆಯನ್ನು ಸರ್ಕಾರ ಈ ಕೂಡಲೇ ಕೈಬಿಡಬೇಕು ಯಾವ ಉದ್ದೇಶಕ್ಕಾಗಿ ಪಿಪಿಪಿ ಮಾದರಿ ಪ್ರಸ್ತಾವನೆ ತರಲಾಗಿದೆ ಗೊತ್ತಿಲ್ಲ. ಸರ್ಕಾರದ ಈ ನಿರ್ಧಾರ ನನಗೆ ನೋವು ತರಿಸಿದೆ. ಚುನಾವಣಾ ಪ್ರಣಾಳಿಕೆಯಲ್ಲಿ ವೈದ್ಯಕೀಯ ಕಾಲೇಜು ಭರವಸೆ ನೀಡಿದ್ದೆವು. ಆದರೆ ಈಗ ಏಕೆ ಪಿಪಿಪಿ ಮೆಡಿಕಲ್ ಕಾಲೇಜು ಎಂದು ಪ್ರಶ್ನಿಸಿದ್ದಾರೆ.
Advertisement