
ಬೆಂಗಳೂರು: ಬೆಂಗಳೂರು ನಗರ ಜಿಲ್ಲೆಯ ಸುತ್ತಮುತ್ತಲಿನ ರಾಮನಗರದಲ್ಲಿ ಜಾನುವಾರುಗಳಿಗೆ ಓಟಿಟಿಸ್ (ಕಿವಿ ಸೋಂಕು) ಬೆಳೆಯುತ್ತಿರುವುದರಿಂದ ಹೈನುಗಾರರು ಹೊಸ ಸವಾಲನ್ನು ಎದುರಿಸುತ್ತಿದ್ದು ಆತಂಕಕ್ಕೆ ಕಾರಣವಾಗಿದೆ.
ಸೋಂಕಿತ ಹಸುಗಳು ಸರಿಯಾಗಿ ಆಹಾರ ತಿನ್ನದ ಕಾರಣ ಹಾಲಿನ ಉತ್ಪಾದನೆಯ ಮೇಲೆ ನೇರವಾಗಿ ಪರಿಣಾಮ ಬೀರಿದೆ. ಈ ಸಂಬಂಧ ರಾಜ್ಯ ಪಶುಸಂಗೋಪನಾ ಇಲಾಖೆ, ಬೆಂಗಳೂರು ಮಿಲ್ಕ್ ಯೂನಿಯನ್ ಲಿಮಿಟೆಡ್ (BAMUL) ಮತ್ತು ಕರ್ನಾಟಕ ಪಶುವೈದ್ಯಕೀಯ ಪ್ರಾಣಿ ಮತ್ತು ಮೀನುಗಾರಿಕೆ ವಿಜ್ಞಾನ ವಿಶ್ವವಿದ್ಯಾಲಯದ ಬೆಂಗಳೂರಿನ ಪಶುವೈದ್ಯಕೀಯ ಕಾಲೇಜು ಜಂಟಿಯಾಗಿ ರೋಗಲಕ್ಷಣಗಳನ್ನು ಅಧ್ಯಯನ ಮಾಡುತ್ತಿವೆ.
ಸೋಂಕು ಹಸುಗಳ ಕಿವಿಯಲ್ಲಿ ಕೀವು ರಚನೆಗೆ ಕಾರಣವಾಗುತ್ತದೆ. ಹೆಚ್ಚಿನ ಜಾನುವಾರುಗಳು ಎಡ ಕಿವಿಯಲ್ಲಿ ಸೋಂಕಿಗೆ ಒಳಗಾಗುತ್ತವೆ. ಈ ಬಾಧೆಯು ನರಗಳ ಮೇಲೆ ಪರಿಣಾಮ ಬೀರುತ್ತದೆ, ಇದರಿಂದ ನಡಿಗೆ, ಸಮನ್ವಯದ ಕೊರತೆ, ಕಿವಿ ಮತ್ತು ಮೂಗಿನ ಹೊಳ್ಳೆಗಳಿಂದ ಸ್ರವಿಸುವಿಕೆ ಉಂಟಾಗುತ್ತದೆ. ಕಿವಿ ನೋವಿನಿಂದಾಗಿ ಒಂದೇ ಬದಿಯಲ್ಲಿ ಜಾನುವಾರುಗಳು ಮಲಗುವುದರಿಂದ ಇತರ ರೋಗಗಳಿಗೆ ಕಾರಣವಾಗುತ್ತದೆ ಎಂದು ಪಶುವೈದ್ಯಕೀಯ ಕಾಲೇಜಿನ ಪ್ರೊ. ವೀರೇಗೌಡ ಬಿ.ಎಂ. ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.
ಹಸುಗಳು ತಿನ್ನಲು ಅಥವಾ ಜೀರ್ಣಿಸಿಕೊಳ್ಳಲು ಕಷ್ಟಪಡುತ್ತವೆ, ಕೆಲವು ಹಸಿವಿನಿಂದ ಸಾವನ್ನಪ್ಪಿವೆ. ಕಳೆದ ವರ್ಷ ಬಾಧಿತವಾದ ಜಾನುವಾರುಗಳು ಮತ್ತೆ ಸೋಂಕಿಗೆ ಒಳಗಾಗಿರುವುದು ಗಮನಕ್ಕೆ ಬಂದಿದೆ. ಸೋಂಕಿತ ಜಾನುವಾರುಗಳಲ್ಲಿ ಹಾಲಿನ ಇಳುವರಿ ಅರ್ಧದಷ್ಟು ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ಓಟಿಟಿಸ್ ಏಕಾಏಕಿ ವರದಿಯಾಗುತ್ತಿರುವುದು ಇದು ಮೂರನೇ ವರ್ಷ. ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ, ವಿಶೇಷವಾಗಿ ಆನೇಕಲ್, ಕನಕಪುರ, ಸರ್ಜಾಪುರ, ಶ್ರೀನಿವಾಸಪುರ, ಮುಳಬಾಗಿಲು, ರಾಮನಗರ, ಕೋಲಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಾತ್ರ ಇದು ಕಂಡುಬರುತ್ತಿದೆ.
ಮಳೆಗಾಲದೊಂದಿಗೆ ಜುಲೈ ನಿಂದ ಅಕ್ಟೋಬರ್ ವರೆಗೆ ಸೋಂಕು ಕಂಡುಬರುತ್ತದೆ. ಆದಾಗ್ಯೂ, ಈ ವರ್ಷ ಇದು ಸಾಂಕ್ರಾಮಿಕವಾಗಿ ಪರಿಣಮಿಸಿದೆ. ಮಾನವ ಸೋಂಕಿನ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ ಎಂದು ಅವರು ಹೇಳಿದರು.
ಈ ರೋಗವು ಮಣ್ಣಿನಿಂದ ಅಥವಾ ನೀರಿನಿಂದ ಬಂದಿದೆಯೇ ಅಥವಾ ಉಣ್ಣಿ ಅಥವಾ ನೊಣಗಳಿಂದ ಬಂದಿದೆಯೇ ಎಂಬುದನ್ನು ಜಂಟಿ ತಂಡ ಅಧ್ಯಯನ ಮಾಡುತ್ತಿದೆ. “AH & VS ನ ಡಾ. ಟಿ. ಚಂದ್ರಶೇಖರ್ ಮತ್ತು IAH&VB ಯ ವಿಜ್ಞಾನಿಗಳಾದ ಡಾ. ಶಿವಶಂಕರ್, ಮಮತಾ ಮತ್ತು ಚಂದ್ರಶೇಖರ್ ಅವರನ್ನು ಒಳಗೊಂಡ ನಮ್ಮ ತಂಡವು ದ್ವಿತೀಯ ಬ್ಯಾಕ್ಟೀರಿಯಾದ ಕಾರಣಗಳೊಂದಿಗೆ ಮೈಕೋಪ್ಲಾಸ್ಮಾವನ್ನು ತಾತ್ಕಾಲಿಕವಾಗಿ ಕಂಡುಹಿಡಿದಿದೆ. ಆಂಟಿ-ಮೈಕೋಪ್ಲಾಸ್ಮಾ ಚಿಕಿತ್ಸೆಗೆ ಸಲಹೆ ನೀಡಿದೆ. ಇದು ಆರಂಭಿಕ ರೋಗಲಕ್ಷಣಗಳನ್ನು ಹೊಂದಿರುವ ಜಾನುವಾರುಗಳಿಗೆ ಕೆಲಸ ಮಾಡುತ್ತಿದೆ ಎಂದು ಅವರು ಹೇಳಿದರು.
ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ನಿರ್ದೇಶಕ ಪಿ. ಶ್ರೀನಿವಾಸುಲು, ತಜ್ಞರ ಸಮಿತಿಯ ಸಲಹೆಯಂತೆ ಚಿಕಿತ್ಸೆಯನ್ನು ಪ್ರಾರಂಭಿಸಿದ್ದೇವೆ ಮತ್ತು ರೋಗವು ನಿಯಂತ್ರಣದಲ್ಲಿದೆ ಎಂದು ಹೇಳಿದರು.
Advertisement