
ಬೆಂಗಳೂರು: ರಾಜ್ಯ ಸರ್ಕಾರ ರಾಜ್ಯದ ಜನತೆಗೆ ಮತ್ತೊಂದು ಬೆರೆ ಏರಿಕೆ ಶಾಕ್ ನೀಡಿದ್ದು, ಭಾನುವಾರದಿಂದಲೇ ಜಾರಿಗೆ ಬರುವಂತೆ ಕೆಲವು ಆಸ್ತಿಗಳ ನೋಂದಣಿ ಶುಲ್ಕ ಹೆಚ್ಚಳ ಮಾಡಿ ಶುಕ್ರವಾರ ಆದೇಶ ಹೊರಡಿಸಿದೆ.
1908ರ ನೋಂದಣಿ ಕಾಯ್ದೆಯ ಅಡಿಯಲ್ಲಿ ನೋಂದಣಿ ಶುಲ್ಕವನ್ನು ಪರಿಷ್ಕರಿಸಲಾಗಿದ್ದು, ನೋಂದಣಿ ಮತ್ತು ಮುದ್ರಾಂಕ ಶುಲ್ಕ ಹೆಚ್ಚಳದ ಹೊಸ ದರಗಳು ನಾಳೆಯಿಂದ (ಆಗಸ್ಟ್ 31) ಜಾರಿಗೆ ಬರಲಿವೆ.
ಕಂದಾಯ ಇಲಾಖೆ ಶುಕ್ರವಾರ ಹೊರಡಿಸಿದ ಅಧಿಸೂಚನೆಯ ಪ್ರಕಾರ, 31-08-2025 ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕವನ್ನು ಶೇ. 1 ರಿಂದ ಶೇ.2 ರಷ್ಟು ಹೆಚ್ಚಿಸಲಾಗಿದೆ.
ರಾಜ್ಯ ಸರ್ಕಾರವು ಆಗಸ್ಟ್ 31 ರಿಂದ ಜಾರಿಗೊಳಿಸುತ್ತಿರುವ ಸ್ಥಿರಾಸ್ತಿ ಮೇಲಿನ ವ್ಯವಹಾರಗಳ ದಸ್ತಾವೇಜುಗಳಿಗೆ ವಿಧಿಸುತ್ತಿರುವ ನೋಂದಣಿ ಮತ್ತು ಮುದ್ರಾಂಕ ಶುಲ್ಕವು ನೆರೆಹೊರೆಯ ರಾಜ್ಯಗಳಲ್ಲಿರುವುದಕ್ಕಿಂತ ಕಡಿಮೆ ಇದೆ. ಇತರೆ ರಾಜ್ಯಗಳ ಶುಲ್ಕಗಳೊಂದಿಗೆ ಸಮೀಕರಣ ಮಾಡಿ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಪರಿಷ್ಕರಿಸಲಾಗುತ್ತಿದೆ ಎಂದು ನೋಂದಣಿ ಮತ್ತು ಮುದ್ರಾಂಕ ಶುಲ್ಕ ಆಯುಕ್ತ ಮುಲೈ ಮುಗಿಲನ್ ಅವರು ತಿಳಿಸಿದ್ದಾರೆ.
ಈ ಕುರಿತು ಪ್ರಕಟಣೆ ಹೊರಡಿಸಿರುವ ಅವರು, ಮುದ್ರಾಂಕ, ನೋಂದಣಿ ಹಾಗೂ ಇತರೆ ಸೆಸ್ ಸೇರಿ ಕರ್ನಾಟಕ ರಾಜ್ಯವು ಶೇ.6.6 ರಷ್ಟು ಶುಲ್ಕ ವಿಧಿಸುತ್ತಿತ್ತು. ಇದೇ ಅವಧಿಯಲ್ಲಿ ಈ ಶುಲ್ಕವು ತಮಿಳುನಾಡಿನಲ್ಲಿ ಶೇ.9, ಕೇರಳದಲ್ಲಿ ಶೇ.10, ಆಂಧ್ರಪ್ರದೇಶದಲ್ಲಿ ಶೇ. 7.5, ತೆಲಂಗಾಣ ರಾಜ್ಯ ಶೇ.7.5 ರಷ್ಟು ಶುಲ್ಕ ವಿಧಿಸುತ್ತಿವೆ. ದಸ್ತಾವೇಜುಗಳ ಮೇಲಿನ ಮುದ್ರಾಂಕ ಶುಲ್ಕ ಮತ್ತು ನೋಂದಣಿ ಶುಲ್ಕಗಳನ್ನು ಇತರೆ ರಾಜ್ಯಗಳೊಂದಿಗೆ ಸಮೀಕರಿಸಿಗೊಳ್ಳಲು(Rationalisation) ಆಡಳಿತಾತ್ಮಕ ಪ್ರಕ್ರಿಯೆಗಳನ್ನು ಬಲಪಡಿಸಲು ಮತ್ತು ನಾಗರಿಕರಿಗೆ ಉತ್ತಮ ಹಾಗೂ ಪರಿಣಾಮಕಾರಿ ಸೇವೆಯನ್ನು ನೀಡಲು ರಾಜ್ಯ ಸರ್ಕಾರವು 31-08-2025 ರಿಂದ ಜಾರಿಗೆ ಬರುವಂತೆ ನೋಂದಣಿ ಶುಲ್ಕವನ್ನು ಶೇ. 1 ರಿಂದ ಶೇ.2 ರಷ್ಟು ಪರಿಷ್ಕರಿಸಿದೆ ಎಂದು ಅವರು ಹೇಳಿದ್ದಾರೆ.
Advertisement