
ದೊಡ್ಡಬಳ್ಳಾಪುರ: ಗಣೇಶ ಮೆರವಣಿಗೆಯಲ್ಲಿ ಪಟಾಕಿ ಸ್ಫೋಟಗೊಂಡು ಬಾಲಕನೊಬ್ಬ ಸಾವನ್ನಪ್ಪಿ, ಪೋಲೀಸ್ ಸಿಬ್ಬಂದಿ ಸೇರಿದಂತೆ 6 ಮಂದಿ ಗಾಯಗೊಂಡಿರುವ ಘಟನೆ ದೊಡ್ಡಬಳ್ಳಾಪುರ ನಗರದಲ್ಲಿ ಸಂಭವಿಸಿದೆ.
ದೊಡ್ಡಬಳ್ಳಾಪುರ ನಗರದ ಮುತ್ತೂರು ವಾರ್ಡ್ನಲ್ಲಿ ಫ್ರೆಂಡ್ಸ್ ವಿನಾಯಕ ಬಳಗ ಗಣೇಶನ ವಿಸರ್ಜನೆ ಮಾಡಲು ಮೆರವಣಿಗೆಯಲ್ಲಿ ಹೊರಟಿತ್ತು. ಪೋರ್ ಲಿಫ್ಟ್ ವಾಹನದಲ್ಲಿ ಗಣೇಶನ ಮೆರವಣಿಗೆ ಮಾಡಲಾಗುತ್ತಿತ್ತು. ಈ ವೇಳೆ ಪೋರ್ ಲಿಫ್ಟ್ ವಾಹನದಲ್ಲಿ ಇಡಲಾಗಿದ್ದ ಪಟಾಕಿಗಳು ಸ್ಫೋಟಗೊಂಡು ದುರಂತ ಸಂಭವಿಸಿದೆ.
ಮಾಧ್ಯಮದೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಪೋರ್ ಲಿಫ್ಟ್ ವಾಹನದಲ್ಲಿ ಗಣೇಶನನ್ನ ಮೆರವಣಿಗೆ ಮಾಡುವಾಗ, ಕಾರ್ಯಕ್ರಮದ ಆಯೋಜಕರು ವಾಹನದ ಸೈಲೆಂಸ್ಸರ್ ಪಕ್ಕದಲ್ಲಿಯೇ ಪಟಾಕಿ ಇಟ್ಟಿದ್ದರು. ಸೈಲೆಂಸ್ಸರ್ ತಾಪಕ್ಕೆ ಪಟಾಕಿಗಳು ಸ್ಫೋಟಗೊಂಡಿವೆ. ರಾಕೆಟ್ ಗಳು ಸುತ್ತಮುತ್ತ ಹಾಗೂ ಕೆಲವು ವ್ಯಕ್ತಿಗಳ ಮೇಲೆ ನುಗ್ಗಿವೆ. ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಝಾಕೀರ್ ಹುಸೇನ್ ಅವರ ಎಡಗೈ ಗೆ ಗಾಯವಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದರು.
ರಾಕೆಟ್ ಗಳು 12 ವರ್ಷದ ಬಾಲಕ ತನುಷ್ ರಾವ್ ಪೆಕ್ಕೆಲುಬುಗಳಿಗೆ ನುಗ್ಗಿದ ಪರಿಣಾಮ ಆತ ಸಾವನ್ನಪ್ಪಿದ್ದಾನೆ. ಮತ್ತೊಂದು ಮಗುವಿನ ಸ್ಥಿತಿ ಗಂಭೀರವಾಗಿದೆ. ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದು, ಒಬ್ಬ ಬಾಲಕ ಸಾವನ್ನಪ್ಪಿದ್ದು, ಇನ್ನುಳಿದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಮಾಹಿತಿ ನೀಡಿದರು. ಆಯೋಜಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಆಯೋಜಕರ ವಿರುದ್ಧ ಪ್ರಕರಣ ದಾಖಲು ಮಾಡಲಾಗುವುದು ಎಂದಿದ್ದಾರೆ. 13 ಮತ್ತು 16 ವರ್ಷ ವಯಸ್ಸಿನ ಇಬ್ಬರು ಮಕ್ಕಳು, ಫೋರ್ಕ್‌ಲಿಫ್ಟ್ ಚಾಲಕ ಮುನಿರಾಜು (27) ಮತ್ತು ಪಕ್ಕದಲ್ಲಿದ್ದ ನಾಗರಾಜ್ (35) ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಎಲ್ಲರೂ ಅಪಾಯದಿಂದ ಪಾರಾಗಿದ್ದಾರೆ.
Advertisement