

ಬೀದರ್: ಬಸವ ತತ್ವದ ಕೆಲ ಸ್ವಾಮೀಜಿಗಳು 'ತಾಲಿಬಾನಿಗಳು' ಎಂದು ಹೇಳುವ ಮೂಲಕ ಕನ್ಹೇರಿ ಕಾಡಸಿದ್ದೇಶ್ವರ ಸ್ವಾಮೀಜಿ ಮತ್ತೊಮ್ಮೆ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬೆಳಗಾವಿಯ ರಾಯಬಾಗ ಪಟ್ಟಣದಲ್ಲಿ ನಡೆದ ಹನುಮ ಮಾಲಾ ದೀಕ್ಷಾ ಕಾರ್ಯಕ್ರಮದಲ್ಲಿ ಹನುಮ ಮಾಲಾಧಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಹನುಮ ಮಾಲೆ ಹಾಕಿಕೊಳ್ಳುವವರು ಯಾವಾಗಲೂ ಯಾರಿಗೂ ಕೆಟ್ಟದ್ದು ಮಾಡುವವರಲ್ಲ. ಯಾರನ್ನೂ ತಪ್ಪು ದಾರಿಗೆ ಕೂಡ ಎಳೆಯುವುದಿಲ್ಲ ಎಂದು ಹೇಳಿದರು.
ಕಮ್ಯುನಿಸ್ಟರು ಹಾಗೂ ನಮ್ಮಂಥ ಕಾವಿ ಬಟ್ಟೆ ಧರಿಸಿರುವ ಕೆಲ ಬಸವ ತತ್ವದ ತಾಲಿಬಾನಿಗಳು ಮಾಲೆ ಬಗ್ಗೆ ಟೀಕೆ ಮಾಡುತ್ತಾರೆ. ನಮ್ಮ ಹುಡುಗಿಯರನ್ನು ಎತ್ತಾಕೊಂಡು ಹೋಗುತ್ತಿದ್ದಾರೆ. ಅಂಥವರನ್ನು ಆರತಿ ಬೆಳಗಿ ನಿಮ್ಮನ್ನು ಮನೆಗೆ ಕರೆದುಕೊಂಡು ಬರಬೇಕಾ? ಅವರನ್ನು ಹಿಡಿದುಕೊಂಡು ಬಂದು ಅವರಿಗೆ ತಿಳಿಯುವ ಭಾಷೆಯಲ್ಲಿ ಹೇಳಬೇಕು ಎಂದೂ ಸ್ವಾಮೀಜಿ ಪ್ರಶ್ನಿಸಿದರು. ರಾತ್ರಿ ವೇಳೆ ಟೀ ಶರ್ಟ್, ಬರ್ಮೋಡ ಹಾಕಿ ಹೋಟೆಲ್, ಬಾರ್‌ಗೆ ಹೋಗುವವರಿಗೆ ಮಠವೇಕೆ? ಇಂಥವರಿಗೆ ಸನ್ಯಾಸತ್ವ ಯಾಕೆ ಬೇಕು. ಹೀಗಿರುವವರು ಮಠ ಬಿಟ್ಟು ಹೋಗಿ ಎಂದಿದ್ದಾರೆ. ಕಾಡಸಿದ್ದೇಶ್ವರ ಸ್ವಾಮೀಜಿ ಈ ಹಿಂದೆಯೂ ಲಿಂಗಾಯತರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದರು.
ಕಾಡಸಿದ್ದೇಶ್ವರ ಸ್ವಾಮೀಜಿ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ಡಾ. ಚನ್ನಬಸವಾನಂದ ಸ್ವಾಮೀಜಿ, ಆ ಪದ ಬಳಸಲು ಅವರು ಅಯೋಗ್ಯರು. ಅವರನ್ನು ಸ್ವಾಮೀಜಿ ಅಂತ ಕರೆಯಲು ನನಗೆ ನಾಚಿಕೆ ಆಗುತ್ತದೆ. ಅವರು ಕಾಡಸಿದ್ದೇಶ್ವರ ಸ್ವಾಮೀಜಿ ಅಲ್ಲ, ಅದು ಕಾಡು ಪ್ರಾಣಿ. ಅವರ ನಾಲಿಗೆಗೆ ಸಂಸ್ಕಾರ ಇಲ್ಲ. ಬಾಯಿ ಬಿಚ್ಚಿದರೆ ಬೈಗುಳಗಳೇ ಉದುರುತ್ತವೆ. ಇಂತಹವರು ಕಾವಿ ಬಟ್ಟೆ ಹಾಕಲು ಅಯೋಗ್ಯರು, ನಾಲಾಯಕರಾಗಿದ್ದಾರೆ' ಎಂದು ಖಂಡಿಸಿದರು.
Advertisement