

ಬೆಳಗಾವಿ: ಇತ್ತೀಚೆಗೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ(ಆರ್‌ಸಿಯು)ದ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಲು ನಿರಾಕರಿಸಿದ್ದಕ್ಕೆ 34 ವರ್ಷದ ಪಿಎಚ್ ಡಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿಯನ್ನು ಚಿಕ್ಕೋಡಿ ನಿವಾಸಿ ಸುಜಾತಾ ಪೋಳ ಎಂದು ಗುರುತಿಸಲಾಗಿದ್ದು, ನಿದ್ದೆ ಮಾತ್ರೆಗಳನ್ನು ಸೇವಿಸಿ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಯ ಬಳಿಕ ಅವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಗೆ ತೆರಳಿದ್ದಾರೆ.
ಸುಜಾತಾ ಪೋಳ ಅವರು ರಾಯಬಾಗ ಪ್ರದೇಶದ ಸಮಗ್ರ ಚಾರಿತ್ರಿಕ ವಿಷಯದಲ್ಲಿ ತಮ್ಮ ಸಂಶೋಧನೆ ಪೂರ್ಣಗೊಳಿಸಿ ಆರು ತಿಂಗಳ ಹಿಂದೆಯೇ ಪ್ರಬಂಧ ಸಲ್ಲಿಸಿದ್ದರು. ಈ ಬಾರಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಅವರಿಗೆ ಪಿಎಚ್‌ಡಿ ಪ್ರದಾನ ಮಾಡುವ ನಿರೀಕ್ಷೆ ಇತ್ತು, ಆದರೆ, ಅವರಿಗೆ ಪದವಿ ನೀಡಲಿಲ್ಲ. ಅವರಿಗೆ ಅನಗತ್ಯವಾಗಿ ಟಾರ್ಗೆಟ್ ಮಾಡಿ ಪಿಎಚ್ ಡಿ.ನೀಡಲು ನಿರಾಕರಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಕುಟುಂಬದ ಆಪ್ತ ಮೂಲಗಳ ಪ್ರಕಾರ, ಅವಮಾನ, ಮಾನಸಿಕ ಕಿರುಕುಳ ಮತ್ತು ನಿರ್ಲಕ್ಷ್ಯದಿಂದ ನೊಂದ ವಿದ್ಯಾರ್ಥಿನಿ ಮನೆಗೆ ಹಿಂದಿರುಗಿದ ನಂತರ ಅವರು ಹಲವು ನಿದ್ರೆ ಮಾತ್ರೆಗಳನ್ನು ಸೇವಿಸಿದ್ದಾರೆ. ಇದರಿಂದ ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಅವರನ್ನು ಬೆಳಗಾವಿಯ ಬಿಐಎಂಎಸ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.
‘ನಾನು ಎಲ್ಲಾ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸಿದ್ದೇನೆ. ಆದರೂ ಅವರು ನನ್ನನ್ನು ಅವಮಾನಿಸಿದರು’ಎಂದು ಸುಜಾತಾ ಅವರು ಹೇಳಿದ್ದಾರೆ.
ನಾನು ಎಲ್ಲಾ ಶೈಕ್ಷಣಿಕ ಅವಶ್ಯಕತೆಗಳನ್ನು ಪೂರೈಸಿದ್ದರೂ ಮತ್ತು ರಾಜ್ಯಪಾಲರು ಅನುಮೋದಿಸಿದ ಅರ್ಹತಾ ಪಟ್ಟಿಯಲ್ಲಿ ನನ್ನ ಹೆಸರನ್ನು ಸೇರಿಸಿದ್ದರೂ, ವಿಶ್ವವಿದ್ಯಾಲಯದ ಅಧಿಕಾರಿಗಳು ತನ್ನ ಘಟಿಕೋತ್ಸವ ಪ್ರಮಾಣಪತ್ರವನ್ನು “ಉದ್ದೇಶಪೂರ್ವಕವಾಗಿ ತಡೆದಿದ್ದಾರೆ” ಎಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ.
ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಗಳು ತನಗೆ ಪದೇ ಪದೇ ಕಿರುಕುಳ ನೀಡುತ್ತಿದ್ದರು ಮತ್ತು ಈ ಹಿಂದೆ ತನ್ನ ಸಂಶೋಧನಾ ಮಾರ್ಗದರ್ಶಿ ಪ್ರೊ. ಕೆ.ಎಲ್.ಎನ್. ಮೂರ್ತಿ ವಿರುದ್ಧ ದೂರು ದಾಖಲಿಸಿದ ನಂತರ ಈ ಪ್ರಕ್ರಿಯೆಗೆ ಉದ್ದೇಶಪೂರ್ವಕವಾಗಿ ಅಡ್ಡಿಪಡಿಸಿದ್ದಾರೆ ಎಂದು ಅವರು ದೂರಿದ್ದಾರೆ.
ಆರೋಪ ತಳ್ಳಿಹಾಕಿದ ವಿವಿ
ವಿವಾದ ಉಲ್ಬಣಗೊಂಡ ಕೆಲವು ಗಂಟೆಗಳ ನಂತರ, ತನ್ನ ಡಾಕ್ಟರೇಟ್ ಪದವಿ ತಡೆಹಿಡಿದಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ ಆರ್‌ಸಿಯು, ಅವರ ಪದವಿಯನ್ನು ತಡೆಹಿಡಿಯಲಾಗಿಲ್ಲ, ವಿಚಾರಣೆಯಿಂದಾಗಿ ಕೇವಲ ಘಟಿಕೋತ್ಸವ ಪ್ರಮಾಣಪತ್ರ ಮಾತ್ರ ಬಾಕಿ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Advertisement