

ಬೆಂಗಳೂರು: ರಾಜಕೀಯ ದ್ವೇಷಕ್ಕಾಗಿ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು.
ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಸೋಮವಾರ ಪ್ರತಿಕ್ರಿಯೆ ನೀಡಿದರು. ರಾಹುಲ್ ಗಾಂಧಿ ಅವರ ಮೇಲೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಎಫ್ ಐಆರ್ ದಾಖಲಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು ಇದು ಅನ್ಯಾಯ. ಯಾರಿಗೆ ಆಗಲಿ ಕಿರುಕುಳ ನೀಡುವುದಕ್ಕೆ ಒಂದು ಮಿತಿ ಇದೆ. ಈ ಪ್ರಕರಣದಲ್ಲಿ ಕಿರುಕುಳ ನೀಡುವ ಅಗತ್ಯವಿಲ್ಲ. ನ್ಯಾಷನಲ್ ಹೆರಾಲ್ಡ್ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿ ಅವರ ಆಸ್ತಿಯಲ್ಲ. ಪಕ್ಷದ ಅಧ್ಯಕ್ಷ ಸ್ಥಾನದಲ್ಲಿದ್ದ ಕಾರಣಕ್ಕೆ ಅವರು ಈ ಸಂಸ್ಥೆಯ ಷೇರುಗಳ ಪಾಲಕರಾಗಿದ್ದರು.
ನಾನು ಹಾಗೂ ಸಿಎಂ ಅವರೂ ಕೂಡ ವಿವಿಧ ನಿಗಮ, ಮಂಡಳಿಗಳ ಅಧ್ಯಕ್ಷರಾಗಿದ್ದೇವೆ. ಅಧ್ಯಕ್ಷರಾದ ಹಿನ್ನೆಲೆಯಲ್ಲಿ ಅವರ ಹೆಸರಿನಲ್ಲಿ ಕನಿಷ್ಠ 1-2 ಷೇರುಗಳು ಇರುತ್ತವೆ. ನಮ್ಮ ಅಧಿಕಾರ ಮುಗಿದ ನಂತರ ಈ ಷೇರುಗಳು ವರ್ಗಾವಣೆಯಾಗುತ್ತದೆ.
ಅದೇ ರೀತಿ ನಮ್ಮ ನಾಯಕರು ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ಕಾರಣ, ಜವಹಾರ್ ಲಾಲ್ ನೆಹರೂ ಅವರ ಕಾಲದಿಂದ ನಡೆದುಕೊಂಡು ಬಂದಿರುವ ಪ್ರತೀತಿಯಂತೆ ನ್ಯಾಷನಲ್ ಹೆರಾಲ್ಡ್ ಸಂಸ್ಥೆಯ ಜವಾಬ್ದಾರಿ ಹೊತ್ತಿರುತ್ತಾರೆ ಎಂದು ವಿವರಿಸಿದರು.
ಯಂಗ್ ಇಂಡಿಯಾ ಅಗಲಿ, ನ್ಯಾಷನಲ್ ಹೆರಾಲ್ಡ್ ಆಗಲಿ ನಮ್ಮ ವೈಯಕ್ತಿಕ ಆಸ್ತಿಯಲ್ಲ ಎಂದು ಅವರು ಈಗಾಗಲೇ ಘೋಷಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಆಸ್ತಿ. ಕಾಂಗ್ರೆಸ್ ಪಕ್ಷದ ಪಾಲಕರು ಅವರಾಗಿದ್ದಾರೆ. ಇಲ್ಲಿ ಅನೇಕ ಸದಸ್ಯರುಗಳು ಇದ್ದಾರೆ. ಮೊರಾರ್ಜಿ ಅವರು, ಅಹ್ಮದ್ ಪಟೇಲ್ ಅವರ ಕಾಲದಲ್ಲಿ ಕಾಂಗ್ರೆಸ್ ಪಕ್ಷದ ಹಿತಕ್ಕಾಗಿ ಕೆಲವು ನಿರ್ಧಾರ ಕೈಗೊಳ್ಳಲಾಗಿತ್ತು.
ಕೇಸರಿ ಅವರ ಕಾಲದಲ್ಲಿ ಪಕ್ಷ ಸಂಕಷ್ಟದ ಸಮಯದಲ್ಲಿದ್ದಾಗ, ಕಾಂಗ್ರೆಸ್ ಪಕ್ಷದ ನಾಯಕರಾದ ನಾವುಗಳು ಸೋನಿಯಾ ಗಾಂಧಿ ಅವರ ಮುಂದೆ ಹೋಗಿ ಪಕ್ಷದ ಜವಾಬ್ದಾರಿ ವಹಿಸಿಕೊಳ್ಳುವಂತೆ ಬೇಡಿಕೊಂಡೆವು. ಅವರು ನೇತೃತ್ವ ವಹಿಸಿದ ನಂತರ ನಮ್ಮ ಪಕ್ಷ ದೇಶದ ಅತ್ಯುತ್ತಮ ಆರ್ಥಿಕ ತಜ್ಞರ ಮುಂದಾಳತ್ವದಲ್ಲಿ 10 ವರ್ಷ ಆಡಳಿತ ನಡೆಸಿದೆ.
ಈಗ ರಾಜಕೀಯವಾಗಿ ಕಿರುಕುಳ ನೀಡಲು ಈ ರೀತಿ ಮಾಡಲಾಗುತ್ತಿದೆ. ಇತಿಹಾಸ ಮರುಕಳಿಸಲಿದೆ. ಅವರು ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಿದರೂ ಅವರು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಕೇಂದ್ರ ಸರ್ಕಾರದ ಈ ದ್ವೇಷ ರಾಜಕಾರಣ ಸರಿಯಲ್ಲ. ಇದರಿಂದ ಅವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂದು ಕೇಂದ್ರಕ್ಕೆ ಹೇಳಲು ಬಯಸುತ್ತೇನೆ. ಇದು ಕೇಂದ್ರ ಸರ್ಕಾರದ ನೈತಿಕತೆಯನ್ನಷ್ಟೇ ಕುಗ್ಗಿಸಲಿದೆ. ರಾಜಕೀಯವನ್ನು ನೇರಾನೇರವಾಗಿ ಜನರ ಮಧ್ಯೆ ಮಾಡೋಣ. ಚುನಾವಣೆಯಲ್ಲಿ ಹೋರಾಡೋಣ. ಆದರೆ ತನಿಖಾ ಸಂಸ್ಥೆಗಳ ದುರ್ಬಳಕೆ ಮಾಡಿಕೊಂಡು ಈ ರೀತಿ ಕಿರುಕುಳ ನೀಡುವುದು ಸರಿಯಲ್ಲ” ಎಂದು ತಿಳಿಸಿದರು.
ನಾನು ಸರ್ವಪಕ್ಷ ಸಭೆ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡುತ್ತಿದ್ದೇನೆ. ಸಂಸತ್ ಅಧಿವೇಶನ ಆರಂಭವಾಗಿದ್ದು, ರಾಜ್ಯದ ಹಿತರಕ್ಷಣೆ ವಿಚಾರವಾಗಿ ಸಂಸದರಿಗೆ ಕೆಲವು ಜವಾಬ್ದಾರಿಗಳ ಬಗ್ಗೆ ಹೇಳಬೇಕಿದೆ ಎಂದು ತಿಳಿಸಿದರು.
Advertisement