

ಬೆಂಗಳೂರು: ಡಿಸೆಂಬರ್ 8 ರಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಎಂಟು ನಿಮಿಷಗಳ ಉಚಿತ ಸಮಯ ಮೀರಿ ಹೆಚ್ಚು ಹೊತ್ತು ನಿಲ್ಲಿಸುವ ವಾಹನಗಳಿಗೆ ಪ್ರವೇಶ ಶುಲ್ಕ ವಿಧಿಸಲಾಗುತ್ತಿದೆ.
ವಿಮಾನ ನಿಲ್ದಾಣದ ನಿರ್ವಾಹಕರಾದ ಬಿಐಎಎಲ್, ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುರಕ್ಷತೆಯನ್ನು ಸುಧಾರಿಸಲು ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಮಂಗಳವಾರ ಘೋಷಿಸಿದೆ.
"ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಲಿಮಿಟೆಡ್ ಶಿಸ್ತನ್ನು ಜಾರಿಗೊಳಿಸುತ್ತಿದ್ದು, ಅನಧಿಕೃತ ಪಾರ್ಕಿಂಗ್ ಅನ್ನು ತಡೆಯಲು ಮತ್ತು ಅನಗತ್ಯವಾಗಿ ಹೆಚ್ಚು ಸಮಯ ನಿಲ್ಲಿಸುವುದನ್ನು ಕಡಿಮೆ ಮಾಡಲು ಲೇನ್ ಪ್ರತ್ಯೇಕತಾ ವ್ಯವಸ್ಥೆಯನ್ನು ಪರಿಚಯಿಸುತ್ತಿದೆ. ಇದು ಕರ್ಬ್‌ಸೈಡ್ ದಟ್ಟಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಟರ್ಮಿನಲ್‌ಗಳ ಮುಂದೆ ಪಿಕಪ್ ವಲಯದ ದುರುಪಯೋಗವನ್ನು ತಡೆಯುತ್ತದೆ" ಎಂದು ಪ್ರಕಟಣೆ ತಿಳಿಸಿದೆ.
ಹೊಸ ಲೇನ್ ಪ್ರತ್ಯೇಕತಾ ವ್ಯವಸ್ಥೆಯಡಿಯಲ್ಲಿ, T1 ಮತ್ತು T2 ನಲ್ಲಿ ಗೊತ್ತುಪಡಿಸಿದ ಪಿಕಪ್ ಮತ್ತು ಡ್ರಾಪ್ ವಲಯಗಳಿಗೆ ಪ್ರವೇಶವು ಎಲ್ಲಾ ಖಾಸಗಿ ಕಾರುಗಳಿಗೆ (ಬಿಳಿ-ಬೋರ್ಡ್ ವಾಹನಗಳು) ಉಚಿತವಾಗಿರುತ್ತದೆ. ಆದಾಗ್ಯೂ, ನಿಗದಿತ ಸಮಯ ಮಿತಿಯನ್ನು ಮೀರಿ ಹೆಚ್ಚು ನಿಲ್ಲಿಸಿದರೆ ಅಥವಾ ಅವಧಿ ಮೀರಿ ನಿಲ್ಲಿಸಿದ್ದಕ್ಕಾಗಿ ಶುಲ್ಕ ಅನ್ವಯವಾಗುತ್ತವೆ ಎಂದು ಬಿಐಎಲ್ ಹೇಳಿದೆ.
"ವಿಮಾನ ನಿಲ್ದಾಣವು ಎಲ್ಲಾ ಬಳಕೆದಾರರಿಗೆ ವಲಯದ ಉಚಿತ ಬಳಕೆಯನ್ನು ಎಂಟು ನಿಮಿಷಗಳ ಕಾಲ(ಅಂತರರಾಷ್ಟ್ರೀಯ ಮಾನದಂಡಗಳಿಗಿಂತ ಹೆಚ್ಚಿನದು) ನೀಡುತ್ತದೆ, ಅದನ್ನು ಮೀರಿ 8-13 ನಿಮಿಷಗಳವರೆಗೆ ಓವರ್‌ಸ್ಟೇಗೆ 150 ರೂ. ಮತ್ತು 13-18 ನಿಮಿಷಗಳವರೆಗೆ 300 ರೂ. ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಗಳಿಗಿಂತ ಹೆಚ್ಚು ಓವರ್‌ಸ್ಟೇಗೆ ಮಾಡಿದರೆ ಹತ್ತಿರದ ಪೊಲೀಸ್ ಠಾಣೆಗೆ ಎಳೆದೊಯ್ಯಯಲಾಗುತ್ತದೆ ಮತ್ತು ಅನ್ವಯವಾಗುವ ದಂಡ ಹಾಗೂ ಟೋವಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ" ಎಂದು ಬಿಐಎಲ್ ಎಚ್ಚರಿಸಿದೆ.
ಹಳದಿ ಬೋರ್ಡ್ ಟ್ಯಾಕ್ಸಿಗಳು ಮತ್ತು ಎಲೆಕ್ಟ್ರಿಕ್ ಕ್ಯಾಬ್‌ಗಳು ಸೇರಿದಂತೆ ಎಲ್ಲಾ ವಾಣಿಜ್ಯ ವಾಹನಗಳು ಗೊತ್ತುಪಡಿಸಿದ ಪಾರ್ಕಿಂಗ್ ವಲಯಗಳಲ್ಲಿ ಮಾತ್ರ ಪ್ರಯಾಣಿಕರಿಗಾಗಿ ಕಾಯಬೇಕಾಗುತ್ತದೆ ಎಂದು ಬಿಐಎಎಲ್ ಹೇಳಿದೆ.
"ಸುಲಭವಾದ ಪಿಕ್-ಅಪ್ ಅನುಭವವನ್ನು ಒದಗಿಸಲು, ಹಳದಿ ಬೋರ್ಡ್ ವಾಹನಗಳಿಗೆ ಮೊದಲ 10 ನಿಮಿಷಗಳ ಪಾರ್ಕಿಂಗ್ ಉಚಿತವಾಗಿರುತ್ತದೆ. ಟರ್ಮಿನಲ್ 1 ಕ್ಕೆ ಆಗಮಿಸುವ ವಾಣಿಜ್ಯ ವಾಹನಗಳು P4 ಮತ್ತು P3 ಪಾರ್ಕಿಂಗ್ ವಲಯಗಳಿಗೆ ಹೋಗಬೇಕು. ಆದರೆ ಟರ್ಮಿನಲ್ 2 ಗೆ ಸೇವೆ ಆಗಮಿಸುವ ವಾಹನಗಳನ್ನು P2 ಪಾರ್ಕಿಂಗ್ ವಲಯಕ್ಕೆ ತೆರಳಬೇಕು" ಎಂದು ಬಿಐಎಲ್ ತಿಳಿಸಿದೆ.
ಈ ಉಪಕ್ರಮದ ಕುರಿತು ಮಾತನಾಡಿದ ಬಿಐಎಎಲ್‌ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಹರಿ ಮಾರಾರ್, ವಿಶೇಷವಾಗಿ ಪ್ರಯಾಣದ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚುತ್ತಿರುವುದರಿಂದ, ಪಿಕ್-ಅಪ್ ವಲಯಗಳಲ್ಲಿ ಶಿಸ್ತನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ. ಪ್ರಯಾಣಿಕರನ್ನು ರಕ್ಷಿಸಲು, ಕ್ರಮಬದ್ಧ ಚಲನೆಯನ್ನು ಖಚಿತಪಡಿಸಿಕೊಳ್ಳಲು ಈ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
Advertisement