
ರಾಜ್ಯದಲ್ಲಿ ಮುಖ್ಯಮಂತ್ರಿ ಕುರ್ಚಿ ಕಿತ್ತಾಟಕ್ಕೆ ಸದ್ಯ ವಿರಾಮ ದೊರೆತ್ತಿರುವಂತೆಯೇ 2ನೇ ಬಾರಿಗೆ ನಡೆದ 'ಬ್ರೇಕ್ ಪಾಸ್ಟ್' ಮೀಟಿಂಗ್ ತೀವ್ರ ಕುತೂಹಲಕ್ಕೆ ಕಾರಣವಾಯಿತು. ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಗಳವಾರ ಸದಾಶಿವನಗರದಲ್ಲಿರುವ ಡಿಸಿಎಂ ಡಿಕೆ ಶಿವಕುಮಾರ್ ಅವರ ನಿವಾಸಕ್ಕೆ ಉಪಾಹಾರಕ್ಕಾಗಿ ಭೇಟಿ ನೀಡಿದರು. ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಉಪಹಾರ ಸಭೆಯಲ್ಲಿ ಪಕ್ಷ ಹಾಗೂ ಸರ್ಕಾರದ ವಿಚಾರ ಕುರಿತು ಚರ್ಚೆ ಮಾಡಿದ್ದೇವೆ. ಡಿಸೆಂಬರ್ 8 ರಿಂದ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಪ್ರಾರಂಭವಾಗಲಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದು, ವಿಪಕ್ಷಗಳು ಯಾವುದೇ ವಿಚಾರ ಪ್ರಸ್ತಾಪಿಸಿದ್ರೂ ಎದುರಿಸುತ್ತೇವೆ ಎಂದರು. ರಾಜ್ಯದ ನಾಯಕತ್ವದಲ್ಲಿನ ಯಾವುದೇ ಬದಲಾವಣೆಯನ್ನು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಪುನರುಚ್ಚರಿಸಿದ ಸಿದ್ದರಾಮಯ್ಯ, ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಅಭಿಪ್ರಾಯಗಳನ್ನು ಆಧರಿಸಿ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದು ಸುಳಿವು ನೀಡಿದ್ದಾರೆ. ಡಿಕೆ ಶಿವಕುಮಾರ್ ಯಾವಾಗ ಸಿಎಂ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಹೈಕಮಾಂಡ್ ಹೇಳಿದಾಗ ಎಂದರು. ಇದೇ ವೇಳೆ, ಡಿಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ಇಂದಿನ ಸಭೆಯಲ್ಲಿ ಪಕ್ಷ, ಸರ್ಕಾರ ಹಾಗೂ ಅಧಿವೇಶನದ ಬಗ್ಗೆ ಚರ್ಚೆ ನಡೆದಿದೆ. ಮುಂದಿನ ವಾರ ದೆಹಲಿಗೆ ಒಟ್ಟಾಗಿ ಹೋಗುತ್ತೇವೆ ಎಂದರು.
ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧ ದಾಖಲಾಗಿರುವ ಪೋಕ್ಸೊ ಪ್ರಕರಣದ ವಿಚಾರಣೆಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ತನ್ನ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್‌ನ ಆದೇಶದ ವಿರುದ್ಧ ಯಡಿಯೂರಪ್ಪ ಸಲ್ಲಿಸಿದ್ದ ವಿಶೇಷ ರಜೆ ಅರ್ಜಿಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಅವರನ್ನೊಳಗೊಂಡ ಪೀಠವು ವಿಚಾರಣೆ ನಡೆಸಿತು. ಯಡಿಯೂರಪ್ಪ ತಮ್ಮ ಪ್ರಕರಣವನ್ನು ಅರ್ಹತೆಯ ಆಧಾರದ ಮೇಲೆ ಮತ್ತೊಮ್ಮೆ ಹೈಕೋರ್ಟ್ ಮುಂದೆ ಮಂಡಿಸಲು ಸ್ವಾತಂತ್ರ್ಯವಿದೆಯೇ? ಎಂಬುದರ ಕುರಿತು ಯಡಿಯೂರಪ್ಪರ ಮನವಿಗೆ ಪ್ರತಿಕ್ರಿಯೆ ನೀಡುವಂತೆ ಕರ್ನಾಟಕ ರಾಜ್ಯ ಸರ್ಕಾರಕ್ಕೂ ಸುಪ್ರೀಂ ಕೋರ್ಟ್ ನೋಟಿಸ್ ನೀಡಿದೆ.
ಬಿಜೆಪಿ ಮಾಡಿದ್ದ ಸ್ಮಾರ್ಟ್ ಮೀಟರ್ ಟೆಂಡರ್ ಹಗರಣ ಆರೋಪ ವಿಚಾರವಾಗಿ ಸಚಿವ ಕೆ.ಜೆ ಜಾರ್ಜ್ಗೆ ರಿಲೀಫ್ ಸಿಕ್ಕಿದೆ. ಸಚಿವ ಜಾರ್ಜ್ ವಿರುದ್ಧ ದಾಖಲಾಗಿದ್ದ ಖಾಸಗಿ ದೂರನ್ನು ಹೈಕೋರ್ಟ್ ರದ್ದುಪಡಿಸಿದೆ. ಬಿಜೆಪಿ ನಾಯಕರು ದಾಖಲಿಸಿದ್ದ ಪ್ರಕರಣ ರದ್ದುಪಡಿಸಿ ನ್ಯಾ. ಅರುಣ್ ಅವರಿದ್ದ ಹೈಕೋರ್ಟ್ ಪೀಠ ಆದೇಶಿಸಿದೆ. ಆ ಮೂಲಕ ಅಧಿಕಾರಿಗಳಾದ ಗೌರವ್ ಗುಪ್ತಾ, ಮಹಾಂತೇಶ ಬೀಳಗಿ, ಹೆಚ್.ಜೆ.ರಮೇಶ್ ವಿರುದ್ಧದ ಕೇಸ್ ಕೂಡ ರದ್ದಾಗಿದೆ. 900 ರೂಪಾಯಿಗೆ ಸಿಗುವ ಸ್ಮಾರ್ಟ್ ಮೀಟರ್ ಅನ್ನು 5 ಸಾವಿರದಿಂದ 10 ಸಾವಿರ ರೂಪಾಯಿಗಳಿಗೆ ಗ್ರಾಹಕರಿಗೆ ನೀಡಲಾಗುತ್ತಿದೆ. ಇದೊಂದು ದೊಡ್ಡ ಹಗರಣ ಎಂದು ಬಿಜೆಪಿ ಬಿಂಬಿಸಿತ್ತು. ಸ್ಮಾರ್ಟ್ ಮೀಟರ್ ಟೆಂಡರ್ ಸುಮಾರ್ 10 ಸಾವಿರ ಕೋಟಿ ರೂಪಾಯಿ ಮೊತ್ತದ್ದಾಗಿದ್ದು ಅದಕ್ಕಾಗಿ ಜಾಗತಿಕ ಟೆಂಡರ್ ಕರೆಯಬೇಕಿತ್ತು. ಆದರೆ ಕೇವಲ 354 ಕೋಟಿ ರೂ. ವ್ಯವಹಾರ ನಡೆಸುವ ರಾಜಶ್ರೀ ಎಲೆಕ್ಟ್ರಿಕಲ್ಸ್ಗೆ ಟೆಂಡರ್ ನೀಡಲಾಗಿದೆ ಎಂದು ಬಿಜೆಪಿ ಆರೋಪಿಸಿತ್ತು.
ಚಿಕ್ಕಪೇಟೆ ಮಾಜಿ ಶಾಸಕ ಆರ್ ವಿ ದೇವರಾಜ್ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ತೆರಳುತ್ತಿದ್ದಾಗ ಸೋಮವಾರ ಸಂಜೆ ಅವರಿಗೆ ಹೃದಯಾಘಾತವಾಗಿದೆ. 67 ವರ್ಷ ವಯಸ್ಸಿನ ಆರ್ ವಿ ದೇವರಾಜ್ ಅವರನ್ನು ಕೂಡಲೆ ಮೈಸೂರಿನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ಅವರನ್ನು ಜಯದೇವ ಆಸ್ಪತ್ರೆಗೆ ರವಾನಿಸಿ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೇ ಆರ್‌ವಿ ದೇವರಾಜ್ ಕೊನೆಯುಸಿರೆಳೆದಿದ್ದಾರೆ.
ಡಿಸೆಂಬರ್ 8 ರಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪಿಕಪ್ ಮತ್ತು ಡ್ರಾಪ್ ಪ್ರದೇಶದಲ್ಲಿ ಎಂಟು ನಿಮಿಷಗಳ ಉಚಿತ ಸಮಯ ಮೀರಿ ಹೆಚ್ಚು ಹೊತ್ತು ನಿಲ್ಲಿಸುವ ವಾಹನಗಳಿಗೆ ಪ್ರವೇಶ ಶುಲ್ಕ ವಿಧಿಸಲಾಗುತ್ತಿದೆ. ವಿಮಾನ ನಿಲ್ದಾಣದ ನಿರ್ವಾಹಕರಾದ BIAL, ಪ್ರಯಾಣಿಕರ ಸಂಚಾರವನ್ನು ಸುಗಮಗೊಳಿಸಲು, ದಟ್ಟಣೆಯನ್ನು ಕಡಿಮೆ ಮಾಡಲು ಮತ್ತು ಸುರಕ್ಷತೆಯನ್ನು ಸುಧಾರಿಸಲು ಈ ಕ್ರಮ ತೆಗೆದುಕೊಳ್ಳುತ್ತಿರುವುದಾಗಿ ಘೋಷಿಸಿದೆ. ನಿಯಮ ಮೀರಿ 8-13 ನಿಮಿಷಗಳವರೆಗೆ ಓವರ್‌ಸ್ಟೇಗೆ 150 ರೂ. ಮತ್ತು 13-18 ನಿಮಿಷಗಳವರೆಗೆ 300 ರೂ. ಶುಲ್ಕ ವಿಧಿಸಲಾಗುತ್ತದೆ. 18 ನಿಮಿಷಗಳಿಗಿಂತ ಹೆಚ್ಚು ಓವರ್‌ಸ್ಟೇಗೆ ಮಾಡಿದರೆ ಹತ್ತಿರದ ಪೊಲೀಸ್ ಠಾಣೆಗೆ ಎಳೆದೊಯ್ಯಯಲಾಗುತ್ತದೆ. ನಂತರ ದಂಡ ಹಾಗೂ ಟೋಯಿಂಗ್ ಶುಲ್ಕವನ್ನು ವಿಧಿಸಲಾಗುತ್ತದೆ ಎಂದು BIAL ಎಚ್ಚರಿಸಿದೆ.
Advertisement