

ಕೆ ಆರ್ ಪೇಟೆ(ಮಂಡ್ಯ): ಸಿಎಂ-ಡಿಸಿಎಂ ಮಧ್ಯೆ ಬ್ರೇಕ್ ಫಾಸ್ಟ್ ಮೀಟಿಂಗ್ ನಡೆದು ತಮ್ಮಿಬ್ಬರ ಮಧ್ಯೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಉಭಯ ನಾಯಕರು ಕೂಡ ಹೇಳಿದ್ದರೂ ಸಿಎಂ ಕುರ್ಚಿ ಗುದ್ದಾಟ ಕಾಂಗ್ರೆಸ್ ನಲ್ಲಿ ಬಗೆಹರಿದಂತೆ ಕಾಣುತ್ತಿಲ್ಲ.
ರಾಜ್ಯದಲ್ಲಿ ಅಧಿಕಾರ ಹಸ್ತಾಂತರ ಗದ್ದಲ ಜೋರಾಗಿ ನಡೆಯುತ್ತಿರುವ ಮಧ್ಯೆಯೇ ಕೋಡಿಮಠ ಸಂಸ್ಥಾನದ ಡಾ.ಶಿವಾನಂದ ಶಿವಯೋಗಿ ರಾಜೇಂದ್ರ ಅವರು ಸ್ಫೋಟಕ ಭವಿಷ್ಯ ನುಡಿದಿದ್ದಾರೆ. ಸಿಎಂ ಬದಲಾವಣೆ ಖಚಿತ ಎಂಬ ಮಹತ್ವದ ಮುನ್ಸೂಚನೆಯನ್ನು ನೀಡಿದ್ದಾರೆ.
'ಶಿವನ ಪಾದಕ್ಕೆ ಬೀಳಲಿದೆ ಮಲ್ಲಿಗೆ'
ಕೆಆರ್ ಪೇಟೆಯಲ್ಲಿ ನಿನ್ನೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಕೋಡಿಶ್ರೀಗಳು, 2026 ಜನವರಿಯ ಮಹಾಸಂಕ್ರಾಂತಿ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ತರ ಬದಲಾವಣೆಯಾಗಲಿದೆ ಎಂದಿದ್ದಾರೆ. "ಶಿವನ ಮುಡಿಯ ಮೇಲಿರುವ ಮಲ್ಲಿಗೆಯು ಶಿವನ ಪಾದಕ್ಕೆ ಬೀಳಲೇಬೇಕು" ಎನ್ನುವ ಮೂಲಕ ಡಿಕೆ ಶಿವಕುಮಾರ್ ಅವರ ನಿರೀಕ್ಷೆಯ ಸಿಎಂ ಪಟ್ಟ ಅವರ ಪಾಲಿಗೆ ಒದಗಿ ಬರುತ್ತದೆ ಎಂಬ ಅರ್ಥದಲ್ಲಿ ಭವಿಷ್ಯ ಹೇಳಿದ್ದಾರೆ. ನಾಯಕತ್ವದ ಗೊಂದಲ, ಗುದ್ದಾಟ ಎಲ್ಲವೂ ಮಕರ ಸಂಕ್ರಾಂತಿ ಬಳಿಕ ಬಗೆಹರಿಯಲಿದೆ ಎಂದಿದ್ದಾರೆ.
ರಾಷ್ಟ್ರ ರಾಜಕಾರಣದಲ್ಲಿ ಯುಗಾದಿ ನಂತರ ಸಮಸ್ಯೆ
ಮಕರ ಸಂಕ್ರಾಂತಿ ನಂತರ ರಾಜ್ಯ ರಾಜಕಾರಣದ ನಾಯಕತ್ವದ ಗುದ್ದಾಟವು ಬಗೆಹರಿಯಲಿದೆ. ನಾನು ಶಾಸ್ತ್ರ ಹೇಳುವವನಲ್ಲ ಶಾಸ್ತ್ರಕಾರನಲ್ಲ ಮುಂದೆ ನಡೆಯುವ ವಿಚಾರಗಳನ್ನು ತಿಳಿಸುವ ಶಕ್ತಿ ಹೊಂದಿದ್ದೇನೆ. ಅದೇ ರೀತಿ ರಾಷ್ಟ್ರ ರಾಜಕಾರಣದಲ್ಲಿಯೂ ಕೂಡ ಯುಗಾದಿ ನಂತರ ಸಮಸ್ಯೆಗಳು ಎದುರಾಗಲಿವೆ. ಇತ್ತೀಚಿಗೆ ನಡೆದ ಬಾಂಬ್ ಬ್ಲಾಸ್ಟ್ ನಂತಹ ಅಹಿತಕರ ಘಟನೆಗಳು ರಾಷ್ಟ್ರ ಮಟ್ಟದಲ್ಲಿ ನಡೆಯಲಿವೆ ಎಂದು ಎಚ್ಚರಿಕೆ ನೀಡಿದರು.
ರಾಜಕಾರಣದ ತತ್ವ ಆದರ್ಶಗಳು ಮಾಯವಾಗಿದ್ದು, ದಿಕ್ಕುತಪ್ಪಿದೆ. ಹಣವಿದ್ದವರು, ರಿಯಲ್ ಎಸ್ಟೇಟ್ ಕುಳಗಳು ರಾಜಕಾರಣದಲ್ಲಿ ವಿಜೃಂಭಿಸುತ್ತಿದ್ದಾರೆ. ಪ್ರಜಾಪ್ರಭುತ್ವಕ್ಕೆ ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದರು.
ಮಠಾಧೀಶರು ಏಕೆ ರಾಜಕೀಯ ಸಲಹೆ ಕೊಡಬಾರದು?
ರಾಜಕಾರಣಿಗಳು ರಾಜಕೀಯವನ್ನು ವೃತ್ತಿ ಮಾಡಿಕೊಂಡಿದ್ದಾರೆ. ಹೀಗಿರುವಾಗ ಮಠಾಧೀಶರು ಸಮಾಜದ ಒಳಿತಿಗಾಗಿ ರಾಜಕೀಯ ಸಲಹೆ ಯಾಕೆ ಕೊಡಬಾರದು ಎಂದು ಅಭಿಪ್ರಾಯಪಟ್ಟರು. ಇನ್ನು ಇದೇ ವೇಳೆ ಮಠಗಳು ಜಾತೀಯತೆಯಿಂದ ದೂರ ಇರಬೇಕು. ಜಾತಿಪದ್ಧತಿ ನಾಗರಿಕ ಸಮುದಾಯಕ್ಕೆ ಅಂಟಿರುವ ಶಾಪ. ಮಠಾಧೀಶರು ಜಾತಿ ಎಂಬ ಸಂಕೋಲೆಯಿಂದ ಹೊರಬಂದು ಜಾತ್ಯಾತೀ ಬಸbಮಾಜದ ನಿರ್ಮಾಣ ಮಾಡಬೇಕು. ಆಗ ಮಾತ್ರ ಬದಲಾವಣೆ ಕಾಣಲು ಸಾಧ್ಯ ಎಂದು ಹೇಳಿದ್ದಾರೆ.
Advertisement