
ದೆಹಲಿ, ಮುಂಬೈ ಮತ್ತು ಬೆಂಗಳೂರು ಸೇರಿದಂತೆ ದೇಶದ ಹಲವು ನಗರಗಳಲ್ಲಿ ಗುರುವಾರವೂ ಇಂಡಿಗೋ ವಿಮಾನಗಳ ಹಾರಾಟದಲ್ಲಿ ಭಾರಿ ವ್ಯತ್ಯಯ ಉಂಟಾಗಿದ್ದು, 300ಕ್ಕೂ ಹೆಚ್ಚು ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ರಾಷ್ಟ್ರವ್ಯಾಪಿ ಸಿಬ್ಬಂದಿ ಕೊರತೆ ಮತ್ತು ಸಾಫ್ಟ್‌ವೇರ್ ದೋಷಗಳಿಂದಾಗಿ 200ಕ್ಕೂ ಹೆಚ್ಚು ವಿಮಾನಗಳು ರದ್ದಾದ ಒಂದು ದಿನದ ನಂತರ ಇನ್ನೂ ಅನೇಕ ವಿಮಾನಗಳು ವಿಳಂಬವಾಗಿದ್ದು, ಇಂಡಿಗೋ ರದ್ದುಗೊಳಿಸಿದ 100 ಕ್ಕೂ ಹೆಚ್ಚು ವಿಮಾನಗಳಲ್ಲಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (ಕೆಐಎ) 62 ವಿಮಾನಗಳು ಸೇರಿವೆ. ಪರಿಸ್ಥಿತಿಗೆ ಕಾರಣವಾಗಿರುವ ಸಂಗತಿಗಳನ್ನು ಮತ್ತು ನಡೆಯುತ್ತಿರುವ ವಿಳಂಬ ಹಾಗೂ ರದ್ದತಿಗಳನ್ನು ತಗ್ಗಿಸುವ ಯೋಜನೆ ಕುರಿತು ಡಿಜಿಸಿಎ ಪ್ರಧಾನ ಕಚೇರಿಗೆ ವರದಿ ಮಾಡುವಂತೆ ವಿಮಾನಯಾನ ಸಂಸ್ಥೆಗೆ ಸೂಚಿಸಲಾಗಿದೆ.
ಮಂಡ್ಯ ಜಿಲ್ಲೆಯ ಐತಿಹಾಸಿಕ ನಗರಿ ಶ್ರೀರಂಗಪಟ್ಟಣದಲ್ಲಿ ಹನುಮ ಮಾಲಾಧಾರಿಗಳ ಸಂಕೀರ್ತನಾ ಯಾತ್ರೆಯು ಬುಧವಾರ ನಡೆದಿದ್ದು, ಈ ವೇಳೆ ಮಾಲಾಧಾರಿಗಳು ಜಾಮೀಯಾ ಮಸೀದಿಗೆ ನುಗ್ಗಲು ಯತ್ನಿಸಿದಾಗ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಸಂಕೀರ್ತನಾ ಯಾತ್ರೆಯ ನಡೆಯುವ ವೇಳೆ ನೂಕುನುಗ್ಗಲು ನಡೆದಿದ್ದು, ಯಾತ್ರೆಯಲ್ಲಿ ಭಾಗವಹಿಸಿದ್ದ ಕೆಲವರು ಜಾಮಿಯಾ ಮಸೀದಿ ಪ್ರವೇಶದ್ವಾರದ ಬಳಿ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರು ಅವರನ್ನ ತಡಿಯಲು ಯತ್ನಿಸಿದ್ದು, ಇದರಿಂದ ಪೊಲೀಸರು ಹಾಗೂ ಮಾಲಾಧಾರಿಗಳ ನಡುವೆ ಮಾತಿನ ಚಕಮಕಿ ನಡೆದಿದೆ. ಜಾಮಿಯಾ ಮಸೀದಿ ಬಳಿ ವೃತ್ತದಲ್ಲಿ 4 ನಿಂಬೆಹಣ್ಣು ಇಟ್ಟು, ಬೂದುಕುಂಬಳ ಕಾಯಿ ಮೇಲೆ ಕರ್ಪೂರ ಹಚ್ಚಿದ ಮಾಲಾಧಾರಿಗಳು ಇಳಿ ತೆಗೆದು ಕುಂಬಳಕಾಯಿ ಹೊಡೆದು ಮಸೀದಿ ಕಡೆ ಕೈ ಮಾಡಿ ಆ ಜಾಗ ನಮ್ಮದು ಎಂದು ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು. ಜಾಮಿಯಾ ಮಸೀದಿ ಬಳಿ ಪೊಲೀಸರನ್ನು ನಿಯೋಜಿಸಿದ್ದರೂ ಹನುಮ ಭಕ್ತರು ಮಸೀದಿ ಬಳಿ ನುಗ್ಗಲು ಯತ್ನಿಸಿದರು. ಈ ವೇಳೆ ಪರಿಸ್ಥಿತಿಯನ್ನು ಪೊಲೀಸರು ಹತೋಟಿಗೆ ತಂದರು.
ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಇರುವ ಪರಪ್ಪನ ಅಗ್ರಹಾರ ಜೈಲಿನ ಬ್ಯಾರಕ್ ನಲ್ಲಿ ಟಿ.ವಿ ನೀಡಲು ಬೆಂಗಳೂರಿನ 64ನೇ ಸೆಷನ್ಸ್ ಕೋರ್ಟ್ ಆದೇಶ ನೀಡಿದೆ. ಜೈಲಿನಲ್ಲಿ ಇರಲು ಆಗುತ್ತಿಲ್ಲ ದಯವಿಟ್ಟು ಟಿ.ವಿ ಕೊಡಿಸಿ ಎಂದು ಆರೋಪಿಗಳಲ್ಲಿ ಒಬ್ಬನಾದ ನಾಗರಾಜ್ ಇಂದು ವಿಡಿಯೋ ಕಾನ್ಪರೆನ್ಸ್ ವಿಚಾರಣೆ ವೇಳೆ ಕೋರ್ಟ್ ಜಡ್ಜ್ ಗೆ ಮನವಿ ಮಾಡಿದ್ದರು. ಇದಕ್ಕೆ ಸ್ಪಂದಿಸಿದ ಕೋರ್ಟ್ ಜಡ್ಜ್, ಆರೋಪಿ ದರ್ಶನ್ ಇರುವ ಬ್ಯಾರಕ್‌ಗೆ ಟಿ.ವಿ ನೀಡುವಂತೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲು ಅಧಿಕಾರಿಗಳಿಗೆ ಸೂಚನೆ ನೀಡಿದೆ. ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಾಕ್ಷಿಗಳ ವಿಚಾರಣೆ ಡಿಸೆಂಬರ್ 17ರಿಂದ ಆರಂಭವಾಗಲಿದ್ದು, ರೇಣುಕಾಸ್ವಾಮಿ ಪೋಷಕರಿಗೆ ಸಮನ್ಸ್ ಜಾರಿಗೊಳಿಸಲಾಗಿದೆ.
ದ್ವೇಷ ಭಾಷಣವನ್ನ ತಡೆಯುವ ನಿಟ್ಟಿನಲ್ಲಿ ಸರ್ಕಾರ ಮಹತ್ವ ನಿರ್ಧಾರ ಕೈಗೊಂಡಿದ್ದು, ರಾಜ್ಯದಲ್ಲಿ ದ್ವೇಷಭಾಷಣಗಳಿಗೆ ಕಡಿವಾಣ ಹಾಕಲು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ- 2025ಕ್ಕೆ ಗುರುವಾರ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಸಚಿವ ಸಂಪುಟ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾನೂನು ಸಚಿವ ಹೆಚ್ ಕೆ ಪಾಟೀಲ್, ಬಯಲುಸೀಮೆ ತಿದ್ದುಪಡಿ ವಿಧೇಯಕ, ಮಲೆನಾಡು ಅಭಿವೃದ್ಧಿ ಪ್ರಾಧಿಕಾರ ವಿಧೇಯಕ, ಧಾರ್ಮಿಕ ದತ್ತಿ ವಿಧೇಯಕ, ಜಾನುವಾರು ಹತ್ಯೆ ಪ್ರತಿಬಂಧಕ ಹತ್ಯೆ ಸಂರಕ್ಷಣೆ ವಿಧೇಯಕ, ಸಾಮಾಜಿಕ ಬಹಿಷ್ಕಾರ ನಿಷೇಧ ವಿಧೇಯಕ ಸೇರಿದಂತೆ 8 ಮಸೂದೆಗಳಿಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ತಿಳಿಸಿದ್ದಾರೆ.
ಮುರುಘಾ ಮಠದ ಶಿವಮೂರ್ತಿ ಮುರುಘಾ ಶ್ರೀ ಗಳನ್ನು ಅವರ ವಿರುದ್ಧದ 2 ನೇ ಪೋಕ್ಸೋ ಪ್ರಕರಣದಿಂದಲೂ ನ್ಯಾಯಾಲಯ ಖುಲಾಸೆಗೊಳಿಸಿದೆ. ಎರಡು ದಿನದ ಹಿಂದೆ ಮೊದಲ ಕೇಸ್ ನಲ್ಲಿ ಖುಲಾಸೆಗೊಳಿಸಲಾಗಿತ್ತು. 2022ರ ಜುಲೈ 24 ರಂದು ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಸಂತ್ರಸ್ತೆ ಆರೋಪಿಸಿದ್ದರು. ಆದರೆ, ಆ ದಿನಾಂಕದಂದು ಶರಣರು ವಿದೇಶ ಪ್ರವಾಸದಲ್ಲಿದ್ದರು. ಜೊತೆಗೆ ಪಾಸ್‌ಪೋರ್ಟ್ ಮತ್ತು ವೀಸಾ ದಾಖಲೆ ಬಹಿರಂಗಪಡಿಸಲಾಗಿದ್ದು, ಇದನ್ನು ಗಮನಿಸಿದ ನ್ಯಾಯಾಲಯ, ಈ ಪ್ರಕರಣದಲ್ಲಿ ಶರಣರನ್ನು ಖುಲಾಸೆಗೊಳಿಸಿ ಆದೇಶಿಸಿದೆ.
Advertisement