

ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಕಚೇರಿಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದು, ಈ ವೇಳೆ ಸಾಲು ಸಾಲು ಅಕ್ರಮ ಹಾಗೂ ಲೋಪಗಳು ಕಂಡು ಬಂದಿವೆ.
ವಿವಿಧ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಪೂರೈಕೆಯಲ್ಲಿ ಪ್ರತಿ ಸರ್ಕಾರಿ ಶಾಲೆಗೆ 20,000 ರಿಂದ 30,000 ರೂ.ಗಳವರೆಗೆ ಗೋಲ್‌ಮಾಲ್ ನಡೆದಿರುವ ಬಗ್ಗೆ ಪ್ರಾಥಮಿಕ ಪುರಾವೆಗಳು ಸಿಕ್ಕಿವೆ. ಬೆಂಗಳೂರು ಉತ್ತರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ(ಡಿಡಿಪಿಐ)ರ ವ್ಯಾಪ್ತಿಯಲ್ಲಿ 1,483 ಸರ್ಕಾರಿ ಶಾಲೆಗಳಿವೆ.
ಪ್ರಮುಖವಾಗಿ ಬೆಂಗಳೂರು ನಗರ ಸೇರಿದಂತೆ 11ಕ್ಕೂ ಹೆಚ್ಚು ಜಿಲ್ಲೆಗಳ ಶಾಲೆಗಳಲ್ಲಿ ತಾಂತ್ರಿಕ ಅನುಮೋದನಾ ಸಮಿತಿ(ಟಿಎಪಿ) ಅನುಮೋದನೆ ಮೇರೆಗೆ ಲ್ಯಾಪ್‌ಟಾಪ್, ಡೆಸ್ಕ್‌ಟಾಪ್ ಸೇರಿದಂತೆ ಹಲವು ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸಲಾಗಿದೆ. ಈ ಖರೀದಿ ಪ್ರಕ್ರಿಯೆಯಲ್ಲಿಕೆಟಿಪಿಪಿ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಘಿಸಲಾಗಿದೆ. ಪ್ರತಿ ಯುಪಿಎಸ್ ಖರೀದಿಯಲ್ಲಿಕನಿಷ್ಠ 30ರಿಂದ 40 ಸಾವಿರ ರೂ.ಗಳವರೆಗಿನ ಹೆಚ್ಚುವರಿ ಬಿಲ್ ಮಾಡಲಾಗಿದೆ.
14 ಡಿಡಿಪಿಐಗಳು ಮತ್ತು ಕನಿಷ್ಠ 10,000 ಸರ್ಕಾರಿ ಶಾಲೆಗಳನ್ನು ಒಳಗೊಂಡ 11 ಜಿಲ್ಲೆಗಳ ಮೇಲೆ ಜಂಟಿ ನಿರ್ದೇಶಕರು ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದಾರೆ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯ ಸರ್ಕಾರವು ರಚಿಸಿರುವ ತಾಂತ್ರಿಕ ಅನುಮೋದನೆ ಸಮಿತಿ(ಟಿಎಪಿ) ಕಡ್ಡಾಯವಾಗಿ ಕನಿಷ್ಠ ಮೂರು ವರ್ಷಗಳ ಖಾತರಿಯನ್ನು ನಿಗದಿಪಡಿಸಿದ್ದರೂ ಸಹ, ಶಾಲೆಗಳಿಗೆ ಸರಬರಾಜು ಮಾಡಲಾದ ಯಾವುದೇ ಎಲೆಕ್ಟ್ರಾನಿಕ್ ವಸ್ತುಗಳು ಖಾತರಿ ಅವಧಿಯನ್ನು ಒಳಗೊಂಡಿಲ್ಲ.
ಅಧಿಕೃತ ಹೇಳಿಕೆಯ ಪ್ರಕಾರ, ಬೆಂಗಳೂರು ಉತ್ತರ ಶಾಲಾ ಶಿಕ್ಷಣ ಉಪನಿರ್ದೇಶಕರು ಏಪ್ರಿಲ್ 2025 ರಲ್ಲಿ ಇ-ಟೆಂಡರ್ ಹೊರಡಿಸಿ, ಸ್ಯಾಮ್‌ಸಂಗ್ ಸ್ಮಾರ್ಟ್ ಬೋರ್ಡ್‌ಗಳು, ಲೆನೊವೊ ಲ್ಯಾಪ್‌ಟಾಪ್‌ಗಳು, ಜೀಬ್ರಾನಿಕ್ಸ್ ಎಲ್‌ಇಡಿ ಪ್ರೊಜೆಕ್ಟರ್‌ಗಳು, ಬ್ಯಾಟರಿಗಳನ್ನು ಹೊಂದಿರುವ ಮೈಕ್ರೋಟೆಕ್ 2 ಕೆವಿಎ ಯುಪಿಎಸ್ ಘಟಕಗಳು ಮತ್ತು ಲೆನೊವೊ ಆಲ್-ಇನ್-ಒನ್ ಪಿಸಿಗಳನ್ನು ಪೂರೈಸಲು ಬೆಲೆ ನಿಗದಿ ಪಡಿಸಿದ್ದಾರೆ. ಇದನ್ನು ಬೆಂಗಳೂರು ನಗರ ಜಿಲ್ಲೆಯ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅನುಮೋದಿಸಿದ್ದಾರೆ.
"ನಾವು ಸರಬರಾಜು ಮಾಡಿದ ವಸ್ತುಗಳ ಬೆಲೆಗಳನ್ನು ಪರಿಶೀಲಿಸಿದ್ದೇವೆ ಮತ್ತು ಪ್ರಸ್ತುತ ಮಾರುಕಟ್ಟೆ ಮೌಲ್ಯಗಳನ್ನು ಪಡೆದುಕೊಂಡಿದ್ದೇವೆ. ಪ್ರತಿ ಕಂಪ್ಯೂಟರ್‌ಗೆ ರೂ. 10,000, ಯುಪಿಎಸ್‌ಗೆ ರೂ. 30,000 ರಿಂದ ರೂ. 40,000 ಮತ್ತು ಎಲ್‌ಇಡಿ ಸ್ಮಾರ್ಟ್ ಟಿವಿಗೆ ರೂ. 15,000 ಹೆಚ್ಚುವರಿ ಪಾವತಿ ಮಾಡಿರುವುದು ನಮಗೆ ಕಂಡುಬಂದಿದೆ" ಎಂದು ಲೋಕಾಯುಕ್ತ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸರಬರಾಜು ಮಾಡಿದ ವಸ್ತುಗಳು ಕಳಪೆ ಗುಣಮಟ್ಟದ್ದಾಗಿದ್ದು, ಕನಿಷ್ಠ ಡೇಟಾ ಸಂಗ್ರಹ ಸಾಮರ್ಥ್ಯ ಹೊಂದಿವೆ. "ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಳ್ಳುವ ಏಕೈಕ ಉದ್ದೇಶದಿಂದ" ಈ ಖರೀದಿ ನಡೆಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಡಿಡಿಪಿಐಗಳು ಶಾಲೆಗಳಿಗೆ ಭೇಟಿ ನೀಡಿ ಎಲೆಕ್ಟ್ರಾನಿಕ್ ವಸ್ತುಗಳ ಪರಿವೀಕ್ಷಣೆ ನಡೆಸಬೇಕು. ಆ ಕೆಲಸ ಮಾಡದೆ ಲೋಪವೆಸಗಲಾಗಿದೆ. ದಾಳಿಯ ಸಂಪೂರ್ಣ ವರದಿ ಬಂದ ಬಳಿಕ ಒಟ್ಟು ಎಷ್ಟು ಶಾಲೆಗಳಲ್ಲಿಈ ಅಕ್ರಮ ನಡೆದಿದೆ ಎಂಬುದರ ಸ್ಪಷ್ಟ ಚಿತ್ರಣ ಸಿಗಲಿದೆ.
Advertisement