
ನ್ಯಾಷನಲ್ ಹೆರಾಲ್ಡ್ ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಆರ್ಥಿಕ ಅಪರಾಧಗಳ ವಿಭಾಗ (EOW)ವಿವರವಾದ ಹಣಕಾಸು ಮತ್ತು ವಹಿವಾಟಿನ ಮಾಹಿತಿ ಕೋರಿ ಡಿ.ಕೆ. ಶಿವಕುಮಾರ್ ಅವರಿಗೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ. ನವೆಂಬರ್ 29 ರಂದು ನೀಡಲಾದ ನೋಟಿಸ್ ಪ್ರಕಾರ, ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಅಕ್ಟೋಬರ್ 3 ರಂದು ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಕುಮಾರ್ ಪ್ರಮುಖ ಮಾಹಿತಿ ಹೊಂದಿದ್ದಾರೆ ಎನ್ನಲಾಗಿದೆ. ಡಿಸೆಂಬರ್ 19 ರೊಳಗೆ ತನಿಖಾಧಿಕಾರಿಗಳ ಮುಂದೆ ಹಾಜರಾಗಲು ಅಥವಾ ಕೋರಲಾದ ದಾಖಲೆಗಳನ್ನು ಸಲ್ಲಿಸಲು ಅವರಿಗೆ ಸೂಚಿಸಲಾಗಿದೆ. ದೆಹಲಿ ಪೊಲೀಸರು ನೊಟೀಸ್ ನೀಡಿರುವುದಕ್ಕೆ ಡಿಸಿಎಂ ಡಿಕೆ ಶಿವಕುಮಾರ್ ಆಘಾತ ವ್ಯಕ್ತಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಶನಿವಾರ ಮಾತನಾಡಿದ ಡಿಕೆಶಿ, ನನ್ನ ಸೋದರ ಮತ್ತು ನನಗೆ ಈ ಹಿಂದೆ ಸಮನ್ಸ್ ನೀಡಿದ್ದಾಗ ಜಾರಿ ನಿರ್ದೇಶನಾಲಯಕ್ಕೆ ಎಲ್ಲಾ ವಿವರಗಳನ್ನು ನೀಡಿದ್ದೇನೆ. ನ್ಯಾಷನಲ್ ಹೆರಾಲ್ಡ್ ಮತ್ತು ಯಂಗ್ ಇಂಡಿಯಾ ಸಂಸ್ಥೆಗಳು ಕಾಂಗ್ರೆಸ್ ಪಕ್ಷದ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಪಕ್ಷದ ಸಂಕಷ್ಟದ ಸಮಯದಲ್ಲಿ, ನಮ್ಮಂತಹ ಕಾಂಗ್ರೆಸ್ಸಿಗರು ಟ್ರಸ್ಟ್‌ಗಳ ಮೂಲಕ ಆ ಸಂಸ್ಥೆಗಳಿಗೆ ಸಹಾಯ ಮಾಡಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ನಾಯಕರ ಮೇಲೆ ಕೇಳಿಬರುತ್ತಿರುವ ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ಬಿಜೆಪಿಯ ಬೆದರಿಕೆ ತಂತ್ರ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ. ಆರ್‌ಎಸ್‌ಎಸ್ ಹಣಕಾಸಿನ ಮೂಲದ ಬಗ್ಗೆ ತನಿಖಾ ಸಂಸ್ಥೆಗಳು ಏಕೆ ತನಿಖೆ ಮಾಡುತ್ತಿಲ್ಲ, ತನಿಖಾ ಸಂಸ್ಥೆಗಳು ಕೇಂದ್ರ ಸರ್ಕಾರದ ಕೈಗೊಂಬೆ ಎಂದು ಆರೋಪಿಸಿದ್ದಾರೆ.
ರಾಜಕಾರಣಿಗಳು ರಾಜಕಾರಣ ಮಾಡಲಿ. ಆದರೆ ಧರ್ಮಾಧಿಕಾರಿಗಳು ಯಾರೋ ಒಬ್ಬರ ಪರ ಅಭಿಪ್ರಾಯ ವ್ಯಕ್ತಪಡಿಸುವ ವ್ಯಾಮೋಹ ಬಿಡಬೇಕು ಎಂಬ ತಮ್ಮ ಹೇಳಿಕೆಗೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಅವರು, ಇಂದು ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳ ಸಮ್ಮುಖದಲ್ಲಿ ಕ್ಷಮೆಯಾಚಿಸಿದ್ದಾರೆ. ಮಂಡ್ಯದ ವಿಸಿ ಫಾರಂನಲ್ಲಿ ನಡೆಯುತ್ತಿರುವ ಕೃಷಿ ಮೇಳದ ವೇದಿಕೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಕುಮಾರಸ್ವಾಮಿ, ನಿರ್ಮಲಾನಂದನಾಥ ಸ್ವಾಮೀಜಿ ಅವರಷ್ಟು ವಿದ್ಯಾವಂತರಾದ ಮತ್ತೊಬ್ಬ ಸ್ವಾಮೀಜಿಗಳು ಇಲ್ಲ. ಅವರಿಗೆ ಅಗೌರವ ಆಗಬಾರದು ಎಂಬ ದೃಷ್ಟಿಯಿಂದ ಶ್ರೀಗಳನ್ನು ಬಳಕೆ ಮಾಡಿಕೊಳ್ಳಬಾರದು ಎಂದಿದ್ದೆ. ನನ್ನ ಹೇಳಿಕೆಯಿಂದ ಆದಿಚುಂಚನಗಿರಿ ನಿರ್ಮಲಾನಂದ ಶ್ರೀಗಳಿಗೆ ನೋವಾಗಿದ್ದರೆ ಸಾರ್ವಜನಿಕವಾಗಿ ಕ್ಷಮೆ ಕೇಳುತ್ತೇನೆಂದು ಹೇಳಿದರು. ಮತ್ತೊಂದೆಡೆ ಕುಮಾರಸ್ವಾಮಿ ಅವರು, ನಮ್ಮ ನೆಲದ ಪವಿತ್ರ ಗ್ರಂಥ ಭಗವದ್ಗೀತೆಯನ್ನು ವಿದ್ಯಾರ್ಥಿಗಳಿಗೆ ಪಠ್ಯದ ಮೂಲಕ ಬೋಧಿಸಬೇಕು. ಹೀಗಾಗಿ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಸೇರಿಸುವಂತೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪತ್ರ ಬರೆದಿದ್ದಾರೆ.
ಎರಡು ಗುಂಪುಗಳ ನಡುವಿನ ಜಗಳದಲ್ಲಿ ಗ್ರಾಮ ಪಂಚಾಯತ್ ಸದಸ್ಯನನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಿಕ್ಕಮಗಳೂರಿನ ಕಡೂರು ತಾಲೂಕಿನ ಸಖರಾಪಟ್ಟಣದ ಸಮೀಪದ ಕಲ್ಮುರುಡೇಶ್ಚರ ಮಠದ ಬಳಿ ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಕಳೆದ ರಾತ್ರಿ 10:30ರ ಸುಮಾರಿಗೆ ಉಂಟಾದ ಗಲಾಟೆಯಲ್ಲಿ ಗಣೇಶ್ ಗೌಡ ಎಂಬಾತನನ್ನು ಕೊಲೆ ಮಾಡಲಾಗಿದೆ. ಗಣೇಶ್ ಮುಂದೆ ಬರಲಿರುವ ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸಖರಾಯಪಟ್ಟಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆರೋಪಿಗಳಾದ ಸಂಜಯ್ ಮತ್ತು ಮಿಥುನ್ ಬಜರಂಗದಳ ಕಾರ್ಯಕರ್ತರು ಎನ್ನಲಾಗಿದೆ. ಘಟನೆ ಬಳಿಕ ಸಖರಾಯಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ.
ಮಾದಕ ವಸ್ತುಗಳನ್ನು ಜೈಲಿನೊಳಗೆ ಬಿಡದೆ, ಕಠಿಣ ನಿಯಮಗಳನ್ನು ಕಡ್ಡಾಯ ಪಾಲನೆ ಮಾಡಿದ್ದಕ್ಕೆ ಜೈಲರ್ ಸೇರಿದಂತೆ ಮೂವರು ಸಿಬ್ಬಂದಿಗಳ ಮೇಲೆ ಕೈದಿಗಳು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕಾರವಾರ ಜಿಲ್ಲಾ ಕಾರಾಗೃಹದಲ್ಲಿ ನಡೆದಿದೆ. ಗಾಯಗೊಂಡಿರುವ ಜೈಲರ್ ಹಾಗೂ ಸಿಬ್ಬಂದಿಗಳನ್ನು ಕಾರವಾರ ಆಸ್ಪತ್ರೆಗೆ ದಾಖಲಾಗಿದೆ. ಮಂಗಳೂರು ಮೂಲದ ರೌಡಿ ಶೀಟರ್‌ಗಳಾದ ಮೊಹ್ಮದ್ ಅಬ್ದುಲ್ ಫಯಾನ್ ಹಾಗೂ ಕೌಶಿಕ ನಿಹಾಲ್ ಹಲ್ಲೆ ನಡೆಸಿದ ಕೈದಿಗಳಾಗಿದ್ದಾರೆ. ಮಂಗಳೂರು ಜೈಲಿನಲ್ಲಿ ಹೆಚ್ಚುವರಿಯಾಗಿದ್ದ ಆರೋಪಿಗಳನ್ನು ಕಾರವಾರಕ್ಕೆ ಸ್ಥಳಾಂತರ ಮಾಡಲಾಗಿತ್ತು. ಘಟನೆ ಬೆನ್ನಲ್ಲೇ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.
Advertisement