
ಡಿ.8 ರಿಂದ ಚಳಿಗಾಲದ ಅಧಿವೇಶನ ಆರಂಭವಾಗಲಿದ್ದು, ಕುಂದಾನಗರಿ ಬೆಳಗಾವಿ ಸಕಲ ರೀತಿಯಲ್ಲಿ ಸಜ್ಜಾಗಿದೆ. ಚಳಿಗಾಲದ ಅಧಿವೇಶನ ಹಿನ್ನೆಲೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ಬಾರಿ ಬೆಳಗಾವಿ ನಗರದಲ್ಲಿ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿದೆ.
ಡಿ.19 ವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು, 21ಕ್ಕೂ ಹೆಚ್ಚು ವಿಧೇಯಕಗಳ ಮಂಡನೆ ಸಾಧ್ಯತೆ ಇದೆ. ದ್ವೇಷ ಭಾಷಣ ತಡೆಗೆ ಹೊಸ ಕಾನೂನು, ಸಾಮಾಜಿಕ ಬಹಿಷ್ಕಾರ ವನ್ನು ಶಿಕ್ಷಾರ್ಹ ಅಪರಾಧವಾಗಿ ಪರಿಗಣಿಸುವ ಎರಡು ವಿಧೇಯಕಗಳು ಚರ್ಚೆಗೆ ಬರಲಿವೆ. ಸರ್ಕಾರಿ ಇಲಾಖೆ, ಸಂಸ್ಥೆಗಳಲ್ಲಿ ಖಾಸಗಿ ಹೊರ ಗುತ್ತಿಗೆ ಸೇವೆ ರದ್ದುಪಡಿಸುವ ಸಂಬಂಧದ ಮಹತ್ವದ ವಿಧೇಯಕ, ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ತಿದ್ದುಪಡಿ ವಿಧೇಯಕ, ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ತಿದ್ದುಪಡಿ ವಿಧೇಯಕ, ಗೃಹ ಕೆಲಸಗಾರರ ಸಾಮಾಜಿಕ ಭದ್ರತೆ ಮತ್ತು ಕಲ್ಯಾಣ ತಿದ್ದುಪಡಿ ವಿಧೇಯಕಗಳು ಮಂಡನೆಯಾಗಲಿವೆ.
ರಾಜ್ಯ ಸರ್ಕಾರ ಭಾನುವಾರ ತನ್ನ ಮೆಕ್ಕೆಜೋಳ ಖರೀದಿ ಆದೇಶವನ್ನು ಪರಿಷ್ಕರಿಸಿದ್ದು, ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಪ್ರತಿಯೊಬ್ಬ ರೈತರಿಂದ ಖರೀದಿಸಬಹುದಾದ ಗರಿಷ್ಠ ಪ್ರಮಾಣವನ್ನು ಹೆಚ್ಚಿಸಿದೆ. ಸರ್ಕಾರದ ಆದೇಶದ ನಂತರ ಹೊರಡಿಸಲಾದ ತಿದ್ದುಪಡಿಯಲ್ಲಿ ಪ್ರತಿ ರೈತನಿಗೆ 20 ಕ್ವಿಂಟಾಲ್‌ಗಳ ಹಿಂದಿನ ಮಿತಿಯನ್ನು 50 ಕ್ವಿಂಟಾಲ್‌ಗಳಿಗೆ ಹೆಚ್ಚಿಸಲಾಗಿದೆ. ರೈತರ ನೋಂದಣಿ ಮತ್ತು ಏಕೀಕೃತ ಫಲಾನುಭವಿ ಮಾಹಿತಿ ವ್ಯವಸ್ಥೆ (FRUITS) ಸಾಫ್ಟ್‌ವೇರ್‌ನಲ್ಲಿ ದಾಖಲಾಗಿರುವ ರೈತರ ಭೂಮಿಯ ವಿಸ್ತೀರ್ಣದ ಆಧಾರದ ಮೇಲೆ, ಪ್ರತಿ ರೈತನಿಂದ 50 ಕ್ವಿಂಟಾಲ್‌ಗಳವರೆಗೆ ಮೆಕ್ಕೆಜೋಳವನ್ನು ಖರೀದಿಸಬಹುದು. ಪ್ರತಿ ಕ್ವಿಂಟಾಲ್‌ಗೆ 2,400 ರೂ.ಗಳ ಬೆಂಬಲ ಬೆಲೆ ನೀಡಲಾಗುತ್ತದೆ.
ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಮಾರ್ಗದಲ್ಲಿ ಟ್ರಾಫಿಕ್ ಜಾಮ್ ನಿಯಂತ್ರಿಸಲು 2,215 ಕೋಟಿ ರೂಪಾಯಿ ಮೊತ್ತದ ಅವಳಿ ಸುರಂಗ ರಸ್ತೆ ಮತ್ತು ಫ್ಲೈಓವರ್ ನಿರ್ಮಾಣಕ್ಕೆ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಹೆಬ್ಬಾಳ ಫ್ಲೈಓವರ್-ಮೇಖ್ರಿ ವೃತ್ತದ ನಡುವೆ ಸುರಂಗ ರಸ್ತೆ ಹಾಗೂ ಎತ್ತರದ ಕಾರಿಡಾರ್ ನಿರ್ಮಾಣಕ್ಕೆ ಡಿಸಿಎಂ ಮತ್ತು ಬೆಂಗಳೂರು ಅಭಿವೃದ್ಧಿ ಸಚಿವ ಡಿಕೆ ಶಿವಕುಮಾರ್, ಆದೇಶದ ಬಳಿಕ ಅವಳಿ ಸುರಂಗ ರಸ್ತೆ ಮತ್ತು ಎತ್ತರದ ಕಾರಿಡಾರ್ ನಿರ್ಮಾಣಕ್ಕೆ ಅನುಮೋದನೆ ಸಿಕ್ಕಿದೆ. ಈ ಯೋಜನೆಯನ್ನುGBA ಮತ್ತು BDA ಕಾರ್ಯಗತಗೊಳಿಸಲಿವೆ. ಗಾಂಧಿ ಕೃಷಿ ವಿಜ್ಞಾನ ಕೇಂದ್ರ (GKVK) ಕ್ಯಾಂಪಸ್‌ನಲ್ಲಿರುವ ಭೂಮಿಯನ್ನು ಸಹ ಈ ಯೋಜನೆಯು ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿನ ಕೈದಿಗಳಿಗೆ ಸಿಗರೇಟ್ ಹಾಗೂ ನಿಷೇಧಿತ ಮಾದಕವಸ್ತು ಕಳ್ಳಸಾಗಣೆ ಮಾಡಲು ಯತ್ನ ನಡೆಸಿದ ಆರೋಪದ ಮೇಲೆ ಜೈಲಿನ ವಾರ್ಡನ್'ನ್ನು ಬಂಧಿಸಲಾಗಿದೆ. ಜೈಲು ವಾರ್ಡನ್ ರಾಹುಲ್ ಪಾಟೀಲ್ ಎಂಬಾತ ಬಂಧನಕ್ಕೊಳಗಾಗಿದ್ದು, ಈತ ಹಿಂದಿನ ಜೂನ್‍ನಲ್ಲಿ ಬೆಳಗಾವಿ ಜೈಲಿನಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ವರ್ಗಾವಣೆಯಾಗಿದ್ದ. ಡಿ.5 ರಂದು ಸಂಜೆ ಕೆಎಸ್‍ಇಎಸ್‍ಎಫ್ ಸಿಬ್ಬಂದಿ ಕಾರಾಗೃಹದ ಮುಖ್ಯದ್ವಾರದ ಬಳಿ ತಪಾಸಣೆ ಮಾಡುತ್ತಿದ್ದಾಗ ಜೈಲ್ ವಾರ್ಡನ್ ರಾಹುಲ್ ಪಾಟೀಲ್ ಒಳ ಉಡುಪಿನಲ್ಲಿ ಎರಡು ಸಿಗರೇಟ್ ಪ್ಯಾಕ್‍ಗಳನ್ನು ಇಟ್ಟುಕೊಂಡಿರುವುದು ಕಂಡುಬಂದಿತ್ತು.
ಅತಿವೃಷ್ಟಿಯಿಂದ ಬೆಳೆ ಹಾನಿಯಾಗಿದ್ದರೂ ರೈತರಿಗೆ ಪರಿಹಾರ ನೀಡುವಲ್ಲಿ ರಾಜ್ಯ ಸರ್ಕಾರ ನಿರ್ಲಕ್ಷ್ಯ ವಹಿಸಿದೆ ಮತ್ತು ಕಬ್ಬಿಗೆ ಸೂಕ್ತ ಬೆಲೆ ನೀಡುವಂತೆ ಆಗ್ರಹಿಸಿ ಬಿಜೆಪಿ ಭಾನುವಾರ ಕಲಬುರಗಿಯಲ್ಲಿ ಪ್ರತಿಭಟನೆ ನಡೆಸಿತು. ಎನ್ ಡಿಆರ್ ಎಫ್ ನ ನಿಯಮಾವಳಿ ಪ್ರಕಾರ ಪ್ರತಿ ಹೆಕ್ಟೇರ್ ಗೆ 8, 500 ನಂತೆ ಎರಡು ಹೆಕ್ಟೇರ್ ಗೆ ಕೇಂದ್ರ ಸರ್ಕಾರ 1,700 ರೂ ನೀಡುತ್ತದೆ. ರಾಜ್ಯ ಸರ್ಕಾರ 1700 ರೂ ನೀಡಿದರೆ ಐದು ಎಕರೆ ಭೂಮಿ ಇರುವ ರೈತನಿಗೆ 3400 ಪರಿಹಾರ ದೊರಕಬೇಕು. ಆದರೆ ರಾಜ್ಯ ಸರ್ಕಾರ ಬಿಡಿಗಾಸು ನೀಡಿ ಕೈ ತೊಳೆದುಕೊಂಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಹಾಲಿನ ಪ್ರೋತ್ಸಾಹ ಧನವನ್ನು 5 ರೂ.ನಿಂದ 7 ರೂ.ಗೆ ಹೆಚ್ಚಿಸಬೇಕು. 620 ಕೋಟಿ ರೂ. ಪ್ರೋತ್ಸಾಹ ಧನದ ಬಾಕಿ ಹಣ ಬಿಡುಗಡೆ ಮಾಡಬೇಕು. ಕಬ್ಬಿಗೆ ಪ್ರತಿ ಟನ್ ಗೆ 3300 ರೂ. ಬೆಂಬಲ ಬೆಲೆಯನ್ನು ಜಾರಿಗೆ ತರಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
Advertisement