News headlines 08-12-2025 | ಜೈಲಿನಲ್ಲಿ ದಾಸನ ದಾಂಧಲೆ; ಇಂದಿನಿಂದ ಚಳಿಗಾಲದ ಅಧಿವೇಶನ; ಬೆಳಗಾವಿಯಲ್ಲಿ ಶಿವಸೇನೆ, MES ಪುಂಡಾಟಿಕೆ; ಚುನಾವಣಾ ಅಕ್ರಮ ಆರೋಪ: ಸಿಎಂಗೆ 'ಸುಪ್ರೀಂ' ನೊಟೀಸ್

News headlines 08-12-2025 | ಜೈಲಿನಲ್ಲಿ ದಾಸನ ದಾಂಧಲೆ; ಇಂದಿನಿಂದ ಚಳಿಗಾಲದ ಅಧಿವೇಶನ; ಬೆಳಗಾವಿಯಲ್ಲಿ ಶಿವಸೇನೆ, MES ಪುಂಡಾಟಿಕೆ; ಚುನಾವಣಾ ಅಕ್ರಮ ಆರೋಪ: ಸಿಎಂಗೆ 'ಸುಪ್ರೀಂ' ನೊಟೀಸ್

1. ಇಂದಿನಿಂದ ಚಳಿಗಾಲದ ಅಧಿವೇಶನ

ಕುಂದಾನಗರಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸೋಮವಾರದಿಂದ ವಿಧಾನ ಮಂಡಲ ಉಭಯ ಸದನಗಳ ಚಳಿಗಾಲದ ಅಧಿವೇಶನ ಆರಂಭವಾಗಿದೆ. ಕಲಾಪ ಆರಂಭವಾಗುತ್ತಿದ್ದಂತೆ ʻವೃಕ್ಷಮಾತೆʼ ಸಾಲುಮರದ ತಿಮ್ಮಕ್ಕ, ಮಾಜಿ ಸಚಿವ ಎಚ್ ವೈ ಮೇಟಿ ಸೇರಿದಂತೆ ಇತ್ತೀಚಿಗೆ ನಿಧನರಾದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಸಾಲುಮರದ ತಿಮ್ಮಕ್ಕ ಅವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿ ಪ್ರದಾನ ಮಾಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವೇಳೆ ಘೋಷಿಸಿದ್ದಾರೆ. ಅಧಿವೇಶನದಲ್ಲಿ ಬುಧವಾರ ಮತ್ತು ಗುರುವಾರ ಪೂರ್ತಿ ದಿನದ ಕಲಾಪವನ್ನು ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಚರ್ಚೆಗೆ ಮೀಸಲಿಡಲಾಗುವುದು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದ್ದಾರೆ. ಸುವರ್ಣಸೌಧದ ಎರಡನೇ ಮಹಡಿಯ ಕೊಠಡಿ ಸಂಖ್ಯೆ 238ರಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಹೊರಟ್ಟಿ, ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳ ಬಗ್ಗೆ 145ನೇ ಅಧಿವೇಶನದಲ್ಲಿ 6 ಗಂಟೆ 35 ನಿಮಿಷ ಚರ್ಚೆಯಾಗಿದ್ದು, 19 ಜನ ಪರಿಷತ್ ಶಾಸಕರು ಮಾತನಾಡಿದ್ದಾರೆ ಎಂದು ತಿಳಿಸಿದ್ದಾರೆ. ಡಿ.19 ವರೆಗೆ 10 ದಿನಗಳ ಕಾಲ ಅಧಿವೇಶನ ನಡೆಯಲಿದೆ.

2. ಬೆಳಗಾವಿಯಲ್ಲಿ ಶಿವಸೇನೆ, MES ಪುಂಡಾಟಿಕೆ

ಬೆಳಗಾವಿಯಲ್ಲಿ ವಿಧಾನಮಂಡಲ ಅಧಿವೇಶನ ಆರಂಭದ ಮೊದಲ ದಿನವೇ ಮಹಾರಾಷ್ಟ್ರದ ಶಿವಸೇನೆ ಹಾಗೂ ಎಂಇಎಸ್ ಕಾರ್ಯಕರ್ತರು ಮತ್ತೆ ಪುಂಡಾಟಿಕೆ ಮೆರೆದಿದ್ದು, ಗಡಿಭಾಗದಲ್ಲಿ ಉದ್ವಿಗ್ನತೆ ಹೆಚ್ಚಿಸಿದೆ. ಇಂದು ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಮಹಾಮೇಳಾವ್ ನಡೆಸಲು ಮುಂದಾಗಿದ್ದರು. ಆದರೆ ಜಿಲ್ಲಾಡಳಿತ ಇದಕ್ಕೆ ಅನುಮತಿ ನೀಡಿಲ್ಲ. ವ್ಯಾಕ್ಸಿ ಡಿಪೋದ ಮೈದಾನಕ್ಕೆ ಆಗಮಿಸುತ್ತಿದ್ದಂತೆಯೇ ಮಾಜಿ ಮೇಯರ್ ಅಷ್ಟೇಕರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೀಗಾಗಿ ಕೊಲ್ಲಾಪುರದಲ್ಲಿ ಶಿವಸೇನೆ ಕಾರ್ಯಕರ್ತರು ರಸ್ತೆಗಿಳಿದು ಕೆಎಸ್ಆರ್ ಟಿಸಿ ಬಸ್ಸುಗಳನ್ನು ತಡೆದು ಪ್ರತಿಭಟನೆ ನಡೆಸಿದರು. ಕೊಲ್ಲಾಪುರ ಸೆಂಟ್ರಲ್ ಬಸ್ ಸ್ಟ್ಯಾಂಡ್‌ನಲ್ಲಿ ಶಿವಸೇನೆ ಕಾರ್ಯಕರ್ತರು ಉದ್ಧಟತನ ಪ್ರದರ್ಶಿಸಿದ್ದು, ಠಾಕ್ರೆ ಬಣದ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ ದೇವಣೆ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಮುನ್ನೆಚ್ಚರಿಕೆ ಕ್ರಮವಾಗಿ ಬಸ್ ಸಂಚಾರ ತಡೆಯುವಂತೆ ಪೊಲೀಸರು ಸೂಚಿಸಿದ ಕಾರಣ ಸಾರಿಗೆ ಸಂಸ್ಥೆಯ ಅಧಿಕಾರಿಗಳು ಮಹಾರಾಷ್ಟ್ರಕ್ಕೆ KSRTC ಬಸ್ ಸಂಚಾರವನ್ನು ಬಂದ್ ಮಾಡಿದ್ದಾರೆ.

3. ಸಿಎಂ ವಿರುದ್ಧ ಚುನಾವಣಾ ಅಕ್ರಮ ಆರೋಪ: ಸುಪ್ರೀಂ ನೊಟೀಸ್

ರಾಜ್ಯದಲ್ಲಿ ಅಧಿಕಾರ ಹಸ್ತಾಂತರದ ಕದನದ ನಡುವಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮತ್ತೊಂದು ಸವಾಲು ಎದುರಾಗಿದೆ. ಚುನಾವಣೆ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಅವರಿಗೆ ಸುಪ್ರೀಂ ಕೋರ್ಟ್ ನೋಟಿಸ್ ಜಾರಿ ಮಾಡಿದೆ. ವರುಣಾ ವಿಧಾನಸಭಾ ಕ್ಷೇತ್ರದಿಂದ ಆಯ್ಕೆ ಪ್ರಶ್ನಿಸಿ ಶಂಕರ್ ಎಂಬುವವರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯನ್ನು ಹೈಕೋರ್ಟ್ ಅರ್ಜಿ ವಜಾಗೊಳಿಸಿತ್ತು. ನಂತರ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಗ್ಯಾರಂಟಿಗಳ ಆಮಿಷವನ್ನು ಒಡ್ಡುವ ಮೂಲಕ ಸಿದ್ದರಾಮಯ್ಯ 2023ರ ಚುನಾವಣೆಯಲ್ಲಿ ಗೆದ್ದಿದ್ದಾರೆ. ಮತದಾರರಿಗೆ ಆಮಿಷ ನೀಡಿ ಮತದಾರರನ್ನು ಆಕರ್ಷಿಸುವುದು ಚುನಾವಣಾ ನಿಯಮಗಳಿಗೆ ವಿರುದ್ಧವಾದದ್ದು. ಆ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಆಯ್ಕೆಯನ್ನು ಅಸಿಂಧುಗೊಳಿಸಬೇಕೆಂದು ಅರ್ಜಿಯಲ್ಲಿ ಶಂಕರ್ ಮನವಿ ಮಾಡಿದ್ದರು.

4. ಜೈಲಿನಲ್ಲಿ ದಾಸನ ದಾಂಧಲೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ನಟ ದರ್ಶನ್ ಜೈಲಿನಲ್ಲೂ ಯಡವಟ್ಟು ಮಾಡಿಕೊಂಡಿದ್ದು, ಸಹ ಕೈದಿಗೆ ಥಳಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಾಮೀನು ರದ್ದಾಗಿ ಪರಪ್ಪನ ಅಗ್ರಹಾರ ಜೈಲಿಗೆ ಮರಳಿರುವ ನಟ ದರ್ಶನ್ ಸಹ ಕೈದಿಗಳಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿರುವುದು ಬೆಳಕಿಗೆ ಬಂದಿದ್ದು, ದೊಡ್ಡ ಜಗಳಗಳು ನಡೆದಿವೆ. ಜೈಲಿನಲ್ಲಿ ನಡೆಯುತ್ತಿದ್ದ ಅಕ್ರಮಗಳು ಕುರಿತು ಮಾಧ್ಯಮಗಳು ಸುದ್ದಿ ಮಾಡುತ್ತಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ಅಕ್ರಮಗಳಿಗೆ ಬ್ರೇಕ್ ಹಾಕಿದ್ದಾರೆ. ಈಗ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಿಯಮಗಳು ಕಠಿಣವಾಗಿದ್ದು, ಮಾನಸಿಕ ಒತ್ತಡಕ್ಕೆ ಒಳಗಾಗಿ ದರ್ಶನ್ ಕೈದಿಗಳಿಗೆ ಕಿರುಕುಳ ನೀಡುತ್ತಿರುವ ಆರೋಪ ಕೇಳಿ ಬಂದಿದೆ.

5. ಹಿಂದೂ ಎನ್ನುವುದು ಧರ್ಮವೇ ಅಲ್ಲ; ಕೆಟ್ಟ ಬೈಗುಳ- ನಿವೃತ್ತ ಹೈಕೋರ್ಟ್ ನ್ಯಾ. ಬಿ.ಜಿ ಕೋಲ್ಸೆ ಪಾಟೀಲ್

ಹಿಂದೂ ಎನ್ನುವುದು ಧರ್ಮವೇ ಅಲ್ಲ. ಅದು ಪರ್ಷಿಯನ್ ಭಾಷೆಯಲ್ಲಿ ಕೆಟ್ಟ ಬೈಗುಳ ಎಂದು ಹಿಂದೂ ಧರ್ಮದ ಬಗ್ಗೆ ಮುಂಬೈ ನಿವೃತ ಹೈಕೋರ್ಟ್ ನ್ಯಾಯಮೂರ್ತಿ ಬಿ.ಜಿ ಕೋಲ್ಸೆ ಪಾಟೀಲ್ ಹೇಳಿಕೆ ನೀಡಿದ್ದಾರೆ. ವಿಧಾನ ಪರಿಷತ್ ಮುಖ್ಯ ಸಚೇತಕ ಸಲೀಂ ಅಹ್ಮದ್, ಬೀದರ್ ನ ಬಸವಕಲ್ಯಾಣದಲ್ಲಿ ಆಯೋಜಿಸಿದ್ದ ಸೂಫಿ ಸಂತರ ಸಮಾವೇಶದಲ್ಲಿ ಮಾತನಾಡಿದ ಕೋಲ್ಸೆ, ಹಿಂದೂ ಧರ್ಮವೇ ಇಲ್ಲ. ಬ್ರಾಹ್ಮಣರು ಅವರ ಬುದ್ಧಿಯಿಂದ ನಮ್ಮನ್ನು ಗುಲಾಮರನ್ನಾಗಿಸಿ, ಹಿಂದೂ ಧರ್ಮವನ್ನು ಸೃಷ್ಟಿಸಿದರು. ಸಂತರು, ಮೌಲ್ವಿಗಳು ಕಾರ್ಯಗಾರಗಳನ್ನು ನಡೆಸಿ ಈ ಇತಿಹಾಸವನ್ನು ಹೇಳಬೇಕು ಎಂದು ಕರೆ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com