

ಬೆಳಗಾವಿ: ಅರಭಾವಿ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನಿನ್ನೆ ಬೆಳಗಾವಿ ಚಳಿಗಾಲ ಅಧಿವೇಶನ ಆರಂಭದ ದಿನ ಭೇಟಿ ಮಾಡಿ ಬೆಳಗಾವಿ ಜಿಲ್ಲೆ ವಿಭಜನೆಗೆ ಒತ್ತಾಯಿಸಿತು.
ಬೆಳಗಾವಿಯನ್ನು ಸಣ್ಣ ಜಿಲ್ಲೆಯಾಗಿ ಉಳಿಸಿಕೊಂಡು ಚಿಕ್ಕೋಡಿ ಮತ್ತು ಗೋಕಾಕ್ ಎಂಬ ಎರಡು ಹೊಸ ಜಿಲ್ಲೆಗಳನ್ನು ರಚಿಸುವುದು ಬೇಡಿಕೆಯಾಗಿದೆ. 18 ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಬೆಂಗಳೂರಿನ ಹೊರಗಿನ ಅತಿದೊಡ್ಡ ರಾಜಕೀಯ ಜಿಲ್ಲೆಯಾಗಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಸಚಿವ ಬಾಲಚಂದ್ರ ಜಾರಕಿಹೊಳಿ ಅವರ ಸಹೋದರ ಸತೀಶ್ ಜಾರಕಿಹೊಳಿ, ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನಾವೆಲ್ಲರೂ ಒತ್ತಡ ಹೇರುತ್ತಿದ್ದೇವೆ. ಶಾಸಕರು ಇದರ ಪರವಾಗಿದ್ದಾರೆ. ಬಹುಶಃ ಶಾಸಕರ ಸಭೆ ಕರೆದು ಮುಖ್ಯಮಂತ್ರಿ ನಮ್ಮೊಂದಿಗೆ ಚರ್ಚಿಸುತ್ತಾರೆ ಎಂದು ಕಾಣುತ್ತದೆ ಎಂದರು.
ಗೋಕಾಕ್ ಜಿಲ್ಲಾ ವಿಭಜನೆ ನಿಯೋಗವು ಸಿಎಂ ಭೇಟಿಯಾಗಿಯಾಗಿದ್ದು, ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ಪರಿಷತ್ ಸದಸ್ಯರ ಸಭೆ ಕರೆದು, ಅಂತಿಮ ನಿರ್ಣಯ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿರುವುದಾಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.
ಬೆಳಗಾವಿ ಜಿಲ್ಲೆ ವಿಭಜನೆ ವಿಚಾರಕ್ಕೆ ಇತಿಶ್ರೀ ಹಾಡುವಂತೆ ಸರ್ಕಾರ ಮತ್ತು ಮುಖ್ಯಮಂತ್ರಿಗಳ ಮೇಲೆ ನಾವು ಒತ್ತಡ ಹೇರುತ್ತಿದ್ದೇವೆ. ಗೋಕಾಕ್ ಮತ್ತು ಚಿಕ್ಕೋಡಿ ಜಿಲ್ಲೆ ಆಗಬೇಕು ಎಂಬ ಬೇಡಿಕೆ ಇಟ್ಟಿದ್ದೇವೆ. ಬೆಳಗಾವಿ ಜಿಲ್ಲೆಯ ಎಲ್ಲ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರ ಸಭೆ ಕರೆದು, ಅಂತಿಮ ನಿರ್ಣಯ ತೆಗೆದುಕೊಳ್ಳುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ. ಇದೇ ಮೊದಲ ಬಾರಿ ಮುಖ್ಯಮಂತ್ರಿಗಳು ಶಾಸಕರ ಸಭೆ ಕರೆಯುತ್ತಿದ್ದಾರೆ ಎಂದರು.
20 ವರ್ಷಗಳ ಹಿಂದೆ ಆಯೋಗಗಳು ಶಿಫಾರಸು ಮಾಡಿರುವಂತೆ ಗೋಕಾಕ್, ಚಿಕ್ಕೋಡಿ ಜಿಲ್ಲೆ ಆಗಬೇಕು. ಅಥಣಿ, ಬೈಲಹೊಂಗಲ ಜಿಲ್ಲೆ ಆಗುವುದು ಕಷ್ಟದ ಕೆಲಸ. ಆರ್ಥಿಕ ಹಿನ್ನೆಲೆ ಸೇರಿ ಎಲ್ಲ ಸೌಲಭ್ಯಗಳ ಆಧಾರದ ಮೇಲೆ ಗೋಕಾಕ್, ಚಿಕ್ಕೋಡಿ ಜಿಲ್ಲೆಯಾದರೆ ಒಳ್ಳೆಯದು. ಆದಷ್ಟು ಬೇಗನೇ ಇತ್ಯರ್ಥ ಪಡಿಸುವಂತೆ ಮುಖ್ಯಮಂತ್ರಿಗಳಿಗೆ ತಿಳಿಸಿದ್ದೇವೆ. ಎರಡು ದಿನಗಳಲ್ಲಿ ಸಭೆ ಕರೆಯುವುದಾಗಿ ಸಿಎಂ ಹೇಳಿದ್ದಾರೆ. ಸಭೆಯಲ್ಲಿ ಏನು ಅಭಿಪ್ರಾಯ ಬರುತ್ತದೆ ನೋಡೋಣ ಎಂದರು.
Advertisement