532 ಎಕರೆ ಸರ್ಕಾರಿ ಭೂಮಿ ಕಬಳಿಕೆ ಯತ್ನ: CID ತನಿಖೆ ಕೋರಿ ಮುಖ್ಯಮಂತ್ರಿಗೆ ಸಚಿವ ಈಶ್ವರ್ ಖಂಡ್ರೆ ಪತ್ರ

90 ದಿನ ಪೂರ್ಣಗೊಳ್ಳಲು 1 ದಿನ ಬಾಕಿ ಇರುವವರೆಗೂ ಸರಕಾರದ ಹೆಚ್ಚುವರಿ ಸರಕಾರಿ ವಕೀಲ ಯೋಗಣ್ಣ ಈ ಮಾಹಿತಿಯನ್ನು ಸರಕಾರಕ್ಕಾಗಲಿ, ಅರಣ್ಯ ಇಲಾಖೆಗಾಗಲಿ ನೀಡಿರುವುದಿಲ್ಲ. ಮೇಲ್ಮನವಿ ಸಲ್ಲಿಸಲು ಇದು ಸೂಕ್ತ ಪ್ರಕರಣವಲ್ಲ ಎಂದು ನಮೂದಿಸಿ ಅರ್ಜಿದಾರರಿಗೆ ಅನುಕೂಲ ಮಾಡಿದ್ದಾರೆ.
Eshwar B Khandre
ಈಶ್ವರ್ ಖಂಡ್ರೆ
Updated on

ಬೆಳಗಾವಿ: 532 ಎಕರೆ ಅರಣ್ಯ ಮತ್ತು ಸರ್ಕಾರಿ ಭೂಮಿಯನ್ನು ಕಬಳಿಸಲು ನಕಲಿ ದಾಖಲೆಗಳನ್ನು ಬಳಸಲಾಗಿದೆ ಎಂದು ಹೇಳಲಾದ ಪಿತೂರಿಯ ಬಗ್ಗೆ ಸಿಐಡಿ ತನಿಖೆ ನಡೆಸಿ ನ್ಯಾಯಾಲಯದ ಆದೇಶವನ್ನು ಪಡೆಯಬೇಕೆಂದು ಕರ್ನಾಟಕ ಅರಣ್ಯ ಸಚಿವ ಈಶ್ವರ್ ಖಂಡ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದಾರೆ.

ಎಂ.ಬಿ.ನೇಮಣ್ಣ ಗೌಡ ಯಾನೆ ಎಂ.ಬಿ.ಮನ್ಮಥ ಎಂಬ ವ್ಯಕ್ತಿ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಇನಾಮ್ ರದ್ದು ಕಾಯಿದೆ ಅಡಿ ಹಾಸನದ ವಿಶೇಷ ಜಿಲ್ಲಾಧಿಕಾರಿ ಆದೇಶದಂತೆ ಬೆಂಗಳೂರು ಕೆಂಗೇರಿ ಬಳಿಯ ಬಿಎಂ ಕಾವಲ್ ನಲ್ಲಿ ತಮಗೆ ಮಂಜೂರು ಮಾಡಲಾಗಿದೆ ಎನ್ನಲಾದ 482 ಎಕರೆ ಕಾಯ್ದಿಟ್ಟ ಅರಣ್ಯಭೂಮಿ ಸೇರಿದಂತೆ ಒಟ್ಟು 532 ಎಕರೆ ಜಮೀನಿನ ದಾಖಲೆಗಳನ್ನು 3 ತಿಂಗಳೊಳಗೆ ತಮ್ಮ ಹೆಸರಿಗೆ ಮಾಡಿಕೊಡುವಂತೆ ಆದೇಶ ಪಡೆದಿದ್ದಾರೆ.

90 ದಿನ ಪೂರ್ಣಗೊಳ್ಳಲು 1 ದಿನ ಬಾಕಿ ಇರುವವರೆಗೂ ಸರಕಾರದ ಹೆಚ್ಚುವರಿ ಸರಕಾರಿ ವಕೀಲ ಯೋಗಣ್ಣ ಈ ಮಾಹಿತಿಯನ್ನು ಸರಕಾರಕ್ಕಾಗಲಿ, ಅರಣ್ಯ ಇಲಾಖೆಗಾಗಲಿ ನೀಡಿರುವುದಿಲ್ಲ. ಬದಲಾಗಿ ಮೇಲ್ಮನವಿ ಸಲ್ಲಿಸಲು ಇದು ಸೂಕ್ತ ಪ್ರಕರಣವಲ್ಲ ಎಂದು ನಮೂದಿಸಿ ಅರ್ಜಿದಾರರಿಗೆ ಅನುಕೂಲ ಮಾಡಿಕೊಡುವಂತೆ ವರ್ತಿಸಿದ್ದು, ಇದು ಅನುಮಾನಾಸ್ಪದವಾಗಿದೆ ಎಂದು ಅವರು ಪತ್ರದಲ್ಲಿ ತಿಳಿಸಿದ್ದಾರೆ.

ಸುಮಾರು 25 ಸಾವಿರ ಕೋಟಿ ರೂ. ಬೆಲೆ ಬಾಳುವ ಈ ಭೂಮಿಯ ಬಗ್ಗೆ ಕೊನೆ ಕ್ಷಣದಲ್ಲಿ ಇಲಾಖೆಗೆ ಮಾಹಿತಿ ಬಂದಿದ್ದು, ಕೂಡಲೆ ತಾವು ಸಭೆ ನಡೆಸಿ ಮೇಲ್ಮನವಿ ಸಲ್ಲಿಸಲು ಸೂಚಿಸಿರುವುದಾಗಿ ತಿಳಿಸಿರುವ ಈಶ್ವರ್ ಖಂಡ್ರೆ, ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಭೂಮಿ ಮತ್ತು ಅರಣ್ಯ ಭೂಮಿ ಕಬಳಿಸಲು ಯತ್ನಿಸುತ್ತಿದ್ದು, ಮೇಲೆ ಹೇಳಲಾದ ವ್ಯಕ್ತಿ ಮನ್ಮಥ ಯಾನೆ ನೇಮಣ್ಣ ಗೌಡ ಈ ಹಿಂದೆಯೂ ಇದೇ ರೀತಿ ಸುಳ್ಳು ಮತ್ತು ನಕಲಿ ದಾಖಲೆ ನೀಡಿ ಸರಕಾರಿ ಭೂಮಿಯ ಮೇಲೆ ಹಕ್ಕು ಸಾಧಿಸಲು ಪ್ರಯತ್ನಿಸಿದ್ದಾರೆ ಎಂದು ಗಮನ ಸೆಳೆದಿದ್ದಾರೆ.

Eshwar B Khandre
ಮಾನವ-ಪ್ರಾಣಿ ಸಂಘರ್ಷವನ್ನು ನೈಸರ್ಗಿಕ ವಿಕೋಪವೆಂದು ಘೋಷಿಸಿ: ಸರ್ಕಾರಕ್ಕೆ ಸಚಿವ ಈಶ್ವರ್ ಖಂಡ್ರೆ ಆಗ್ರಹ

ಈ ಸಂಬಂಧ ಚಿಕ್ಕಮಗಳೂರಿನ ಅಂದಿನ ಉಪ ವಿಭಾಗಾಧಿಕಾರಿ ದಬ್ಜೀತ್ ಕುಮಾರ್ ಸದರಿ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವಂತೆ 2024ರ ಸೆ.25ರ ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ. ಬೆಂಗಳೂರು ಬಿ.ಎಂ. ಕಾವಲ್ ವಿಚಾರ ನನ್ನ ಗಮನಕ್ಕೆ ಬಂದ ಕೂಡಲೇ ಚಿಕ್ಕಮಗಳೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದೂರು ದಾಖಲಿಸಲು ಸೂಚಿಸಿದ್ದು, ನ.28ರಂದು ದೂರು ಸ್ವೀಕರಿಸಿರುವ ಮೂಡಿಗೆರೆ ಆರಕ್ಷಕ ವೃತ್ತ ನಿರೀಕ್ಷಕರು ಈವರೆಗೆ ಎಫ್.ಐ.ಆರ್. ದಾಖಲಿಸದೆ ಇರುವುದೂ ಅನುಮಾನಕ್ಕೆ ಕಾರಣವಾಗಿದೆ ಎಂದು ಈಶ್ವರ್ ಖಂಡ್ರೆ ತಿಳಿಸಿದ್ದಾರೆ.

ಸಾವಿರಾರು ಕೋಟಿ ರೂ. ಬೆಲೆ ಬಾಳುವ ಸರಕಾರಿ ಭೂಮಿ ಮತ್ತು ಅರಣ್ಯ ಭೂಮಿ ಕಬಳಿಸುವವರಿಗೆ ಪರೋಕ್ಷವಾಗಿ ಮತ್ತು ಪ್ರತ್ಯಕ್ಷವಾಗಿ ಕೆಲವು ಅಧಿಕಾರಿಗಳು ಮತ್ತು ಹೆಚ್ಚುವರಿ ಸರಕಾರಿ ವಕೀಲರು ಸಹಾಯ ಮಾಡುತ್ತಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದು, ಈ ಬಗ್ಗೆ ಒಂದು ಎಸ್‍ಐಟಿ ರಚಿಸಿ ಅಥವಾ ಸಿಐಡಿಗೆ ವಹಿಸಿ ಸಮಗ್ರ ತನಿಖೆ ಮಾಡಿಸಬೇಕು. ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಅವರು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com