
ಕರ್ನಾಟಕದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿಗಳನ್ನು ಖಂಡಿಸಿ ಬಿಜೆಪಿ ಇಂದು ಬೆಳಗಾವಿಯಲ್ಲಿ ರೈತರೊಂದಿಗೆ ಪ್ರತಿಭಟನೆ ನಡೆಸಿತು. ಮಾಲಿನಿ ಸಿಟಿ ಮೈದಾನದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್ ಅಶೋಕ ಹಲವಾರು ಶಾಸಕರು, ಎಂಎಲ್‌ಸಿಗಳು ಮತ್ತು ಪಕ್ಷದ ಇತರ ಹಿರಿಯ ನಾಯಕರು ಪ್ರತಿಭಟನೆ ನಡೆಸಿದರು. ರಾಜ್ಯಕ್ಕೆ ಸಂಬಂಧಿಸಿದ ವಿವಿಧ ಸಮಸ್ಯೆಗಳು ಮತ್ತು ಕಾಂಗ್ರೆಸ್ ಸರ್ಕಾರದ 'ವೈಫಲ್ಯಗಳನ್ನು' ಎತ್ತಿ ತೋರಿಸಲು ಈ ಪ್ರತಿಭಟನೆಯನ್ನು ಆಯೋಜಿಸಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ರಾಜ್ಯದ ರೈತರ ಸಂಕಷ್ಟವನ್ನು ನಿರ್ಲಕ್ಷಿಸಿದೆ ಎಂದು ಪಕ್ಷದ ನಾಯಕರು ಆರೋಪಿಸಿದರು. ರೈತರೊಂದಿಗೆ ಸುವರ್ಣ ಸೌಧ ಮುತ್ತಿಗೆಗೆ ಯತ್ನಿಸಿದ ಬಿವೈ ವಿಜಯೇಂದ್ರ, ಸಿಟಿ ರವಿ ಸೇರಿದಂತೆ ಹಲವು ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು. ಈ ಮಧ್ಯೆ ತೊಗರಿ ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರ ನೆರವಿಗೆ ತಕ್ಷಣವೇ ಧಾವಿಸುವಂತೆ ಒತ್ತಾಯಿಸಿ ಸಿಎಂ ಸಿದ್ದರಾಮಯ್ಯ, ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನದ ಪ್ರಶ್ನೋತ್ತರ ಕಲಾಪದ ವೇಳೆ ಕೃಷ್ಣಾ ಮೇಲ್ದಂಡೆ ಯೋಜನೆ ಸಂಬಂಧ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಂಗಳವಾರ ಧ್ವನಿ ಎತ್ತಿದ್ದರು. ಇದಕ್ಕೆ ಉತ್ತರಿಸಿದ ಡಿಸಿಎಂ ಡಿಕೆ ಶಿವಕುಮಾರ್ ಕೃಷ್ಣಾ ಮೇಲ್ಡಂಡೆ ಯೋಜನೆ ಹಂತ-3ರ ಅನುಷ್ಠಾನಕ್ಕೆ 2013ರಿಂದ ಇಲ್ಲಿಯವರೆಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸದೆ ಬಾಕಿ ಉಳಿಸಿಕೊಂಡಿದೆ. ಮೊದಲು ಮಹಾರಾಷ್ಟ್ರ ಈಗ ಆಂಧ್ರಪ್ರದೇಶ ಅಡ್ಡಗಾಲು ಹಾಕುತ್ತಿವೆ ಎಂದರು. ಭೂ ಪರಿಹಾರದ ಬಗ್ಗೆ ನಮ್ಮ ಸರ್ಕಾರ ಐತಿಹಾಸಿಕ ತೀರ್ಮಾನ ತೆಗೆದುಕೊಂಡಿದ್ದೇವೆ. ಬಸವರಾಜ ಬೊಮ್ಮಾಯಿ ಕಾಲದಲ್ಲಿ ಆಗಿದ್ದ ಭೂ ಪರಿಹಾರ ತೀರ್ಮಾನವನ್ನ ಮಾರ್ಪಾಡು ಮಾಡಿ ಒಂದು ಹಂತಕ್ಕೆ ತಂದಿದ್ದೇವೆ. ಈ ಯೋಜನೆ ಪೂರ್ಣಗೊಳಿಸಲು ನಾವು ಬದ್ದವಾಗಿದ್ದೇವೆ ಎಂದರು. ಈ ಬಾರಿ ಅಧಿವೇಶನದ ಆರಂಭದಲ್ಲೇ ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಕುರಿತು ಚರ್ಚೆ ಆರಂಭವಾಗಿದೆ. ಸಾಮಾನ್ಯವಾಗಿ ಚಳಿಗಾಲದ ಅಧಿವೇಶನದ ಕೊನೆಯ 2-3 ದಿನ ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತಿತ್ತು. ಕೊನೆಯ ದಿನಗಳಲ್ಲಿ ಚರ್ಚೆಗಳಿಗೆ ಸಮರ್ಪಕವಾದ ಅವಕಾಶ ಸಿಗದೆ ಚರ್ಚೆಗಳು ನಿರುತ್ತರಗಳಾಗಿರುವ ಸಂದರ್ಭವೂ ಇತ್ತು ಎಂದು ಹೇಳಿದರು.
ಬೆಳಗಾವಿಯ ಸುವರ್ಣಸೌಧದ ಪಶ್ವಿಮ ದ್ವಾರದಲ್ಲಿ ಜಗತ್ತಿನ ಎರಡನೇ ಅತಿ ದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಸಿಎಂ ಸಿದ್ಧರಾಮಯ್ಯ ಇಂದು ಚರಕ ತಿರುಗಿಸುವ ಮೂಲಕ ಅನಾವರಣಗೊಳಿಸಿದರು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಬೆಳಗಾವಿ ಕಾಂಗ್ರೇಸ್ ಅಧಿವೇಶನದ ಅಧ್ಯಕ್ಷತೆ ವಹಿಸಿದ್ದ ನೆನಪಾರ್ಥ ಈ ರಾಷ್ಟ್ರಧ್ವಜವನ್ನು ಅನಾವರಣಗೊಳಿಸಲಾಗಿದೆ. 75 ಅಡಿ ಉದ್ದ ಹಾಗೂ 55 ಅಡಿ ಅಗಲದ ವಿಶಾಲ ಧ್ವಜವು ದೇಶಪ್ರೇಮದ ಸಂಕೇತವಾಗಿದ್ದು, ನೋಡುಗರಲ್ಲಿ ದೇಶಭಕ್ತಿಯ ಸುಂದರ ಭಾವನೆಗಳನ್ನು ಬಿತ್ತಲಿದೆ. ಇಂತಹ ಮಹತ್ವದ ಧ್ವಜದ ನಿರ್ಮಾಣಕ್ಕೆ ಶ್ರಮಿಸಿದ ವಿನೋದಕುಮಾರ ರೇವಪ್ಪ ಬಮ್ಮಣ್ಣಗೆ ಮುಖ್ಯಮಂತ್ರಿಗಳು ಸನ್ಮಾನಿಸಿ ಗೌರವಿಸಿದರು.
18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನ ಹೆಚ್ಚುವರಿ ರಜೆ ನೀಡುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ತಡೆ ನೀಡಿದೆ. ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತು ಬೆಂಗಳೂರಿನ ಅವಿರತ ಎಎಫ್‌ಎಲ್ ಕನೆಕ್ಟಿವಿಟಿ ಸಿಸ್ಟಮ್ಸ್ ಲಿಮಿಟೆಡ್ ಸಲ್ಲಿಸಿದ ಎರಡು ಪ್ರತ್ಯೇಕ ಅರ್ಜಿಗಳ ಕುರಿತು ನ್ಯಾಯಮೂರ್ತಿ ಜ್ಯೋತಿ ಎಂ ಏಕಪೀಠ ಇಂದು ಈ ಅಧಿಸೂಚನೆಗೆ ತಡೆ ನೀಡಿ ಮಧ್ಯಂತರ ಆದೇಶ ಹೊರಡಿಸಿದ್ದು, ವಿಚಾರಣೆಯನ್ನು ನಾಳೆಗೆ ಮುಂದೂಡಿದೆ. ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪರ ವಕೀಲ ಪ್ರಶಾಂತ್ ಬಿ.ಕೆ ವಾದ ಆಲಿಸಿದ ಹೈ ಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ.
ರಾಜ್ಯದಲ್ಲಿ ಟಿಪ್ಪು ಜಯಂತಿ ವಿವಾದ ಮತ್ತೆ ಭುಗಿಲೆದ್ದಿದ್ದು, ಬಿಜೆಪಿ ನಾಯಕರು ಕಿಡಿಕಾರಿದ್ದಾರೆ. ಕಾಂಗ್ರೆಸ್ ಶಾಸಕ ಕಾಶಪ್ಪನವರ್ ವಿಧಾನಸಭೆಯ ಕಲಾಪದಲ್ಲಿ ಟಿಪ್ಪು ಜಯಂತಿಯನ್ನು ಮತ್ತೆ ಆರಂಭಿಸುವಂತೆ ಪ್ರಸ್ತಾಪಿಸಲು ನಿರ್ಧರಿಸಿರುವುದು ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಈ ಸಂಪ್ರದಾಯವನ್ನು ಪ್ರಾರಂಭಿಸಿದ್ದರು. ನಂತರ ಕೊಡಗಿನಲ್ಲಿ ನಡೆದ ಹಿಂಸಾತ್ಮಕ ಪ್ರತಿಭಟನೆ ಸೇರಿದಂತೆ ವ್ಯಾಪಕ ಪ್ರತಿಭಟನೆಗಳ ಕಾರಣ ಟಿಪ್ಪು ಜಯಂತಿ ಆಚರಣೆಗೆ ಬ್ರೇಕ್ ಬಿದ್ದಿತ್ತು. ಕಾಶಪ್ಪನವರ್ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿರುವ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ್, 'ಟಿಪ್ಪು ಜಯಂತಿ, ಒಸಾಮಾ ಬಿನ್ ಲಾಡೆನ್ ಜನ್ಮ ದಿನಾಚರಣೆ ಮತ್ತು ಪಾಕಿಸ್ತಾನದ ಸ್ವಾತಂತ್ರ್ಯ ದಿನವನ್ನು ಆಚರಿಸಲಿ. ಇದು ಕಾಂಗ್ರೆಸ್ ಸರ್ಕಾರ. ಇವರ ಮನಸ್ಥಿತಿ ಜನರಿಗೆ ತಿಳಿಯುತ್ತದೆ ಎಂದರು.
Advertisement