

18 ರಿಂದ 52 ವರ್ಷದೊಳಗಿನ ಮಹಿಳಾ ಉದ್ಯೋಗಿಗಳಿಗೆ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ಹೆಚ್ಚುವರಿ ರಜೆ ನೀಡುವುದನ್ನು ಕಡ್ಡಾಯಗೊಳಿಸುವ ರಾಜ್ಯ ಸರ್ಕಾರದ ನವೆಂಬರ್ 20 ರ ಅಧಿಸೂಚನೆಗೆ ಕರ್ನಾಟಕ ಹೈಕೋರ್ಟ್ ಮಂಗಳವಾರ ತಡೆ ನೀಡಿದೆ.
ಬೆಂಗಳೂರು ಹೋಟೆಲ್‌ಗಳ ಸಂಘ ಮತ್ತು ಬೆಂಗಳೂರಿನ ಅವಿರತ ಎಎಫ್‌ಎಲ್ ಕನೆಕ್ಟಿವಿಟಿ ಸಿಸ್ಟಮ್ಸ್ ಲಿಮಿಟೆಡ್ ಸಲ್ಲಿಸಿದ ಎರಡು ಪ್ರತ್ಯೇಕ ಅರ್ಜಿಗಳ ಕುರಿತು ನ್ಯಾಯಮೂರ್ತಿ ಜ್ಯೋತಿ ಎಂ. ಅವರು ಇಂದು ಮಧ್ಯಂತರ ಆದೇಶವನ್ನು ಹೊರಡಿಸಿದರು.
ಬೆಂಗಳೂರು ಹೋಟೆಲ್ ಮಾಲೀಕರ ಸಂಘದ ಪರ ವಕೀಲರ ವಾದ ಆಲಿಸಿದ ಹೈ ಕೋರ್ಟ್ ಸರ್ಕಾರದ ಆದೇಶಕ್ಕೆ ತಡೆ ನೀಡಿದೆ. ಹೋಟೆಲ್ ಮಾಲೀಕರ ಸಂಘದ ಮಾನ್ಯ ಉಚ್ಚ ನ್ಯಾಯಾಲಯದ ಮುಂದೆ ಇಂದು ಅರ್ಜಿ ವಿಚಾರಣೆಗೆ ಬಂದಿದ್ದು, ಹೋಟೆಲ್ ಮಾಲೀಕರ ಸಂಘದ ಪರ ವಕೀಲರಾದ ಪ್ರಶಾಂತ್ ಬಿ.ಕೆ ವಾದ ಮಂಡಿಸಿದ್ದರು.
ಅರ್ಜಿದಾರರ ವಾದ
ಅರ್ಜಿದಾರರು ಅಧಿಸೂಚನೆಯ ಸಿಂಧುತ್ವವನ್ನು ಪ್ರಶ್ನಿಸಿರುವ ಪ್ರಾಥಮಿಕ ಆಧಾರವೆಂದರೆ, ಋತುಚಕ್ರ ಸಮಯದಲ್ಲಿ ರಜೆ ನೀಡಲು ಸಂಬಂಧಿತ ಕಾನೂನುಗಳಲ್ಲಿ ಯಾವುದೇ ನಿಬಂಧನೆ ಇಲ್ಲ. ಸರ್ಕಾರವು ವಿವಿಧ ಕಾರ್ಮಿಕ ಕಾನೂನುಗಳ ಅಡಿಯಲ್ಲಿ ನೋಂದಾಯಿಸಲಾದ ವಿವಿಧ ಸಂಸ್ಥೆಗಳಿಗೆ ಅಧಿಸೂಚನೆಯ ಮೂಲಕ ಹೆಚ್ಚುವರಿ ರಜೆಯನ್ನು ಪರಿಚಯಿಸುವ ಅಧಿಕಾರವನ್ನು ಹೊಂದಿಲ್ಲ.
ಋತುಚಕ್ರ ರಜೆ ನೀತಿ 2025 ಮೂಲಕ ಹೆಚ್ಚುವರಿ ರಜೆಯನ್ನು ಪರಿಚಯಿಸುವ ಮೊದಲು ಸರ್ಕಾರವು ಅರ್ಜಿದಾರರೊಂದಿಗೆ ಅಥವಾ ಅಂತಹುದೇ ಸ್ಥಳಗಳಲ್ಲಿರುವ ಸಂಸ್ಥೆಗಳೊಂದಿಗೆ ಸಮಾಲೋಚನೆ ನಡೆಸಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಲಾಗಿದೆ.
ಸರ್ಕಾರದ ಅಧಿಸೂಚನೆಯಲ್ಲಿ ಏನಿದೆ?
1948 ರ ಕಾರ್ಖಾನೆ ಕಾಯ್ದೆ, 1961 ರ ಕರ್ನಾಟಕ ಮಳಿಗೆ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ, 1951 ರ ತೋಟಗಾರಿಕಾ ಕಾಯ್ದೆ, 1966 ರ ಬೀಡಿ ಮತ್ತು ಸಿಗಾರ್ ಕಾರ್ಮಿಕರ (ಉದ್ಯೋಗ ಪರಿಸ್ಥಿತಿಗಳು) ಕಾಯ್ದೆ ಮತ್ತು 1961 ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆಯಡಿಯಲ್ಲಿ ನೋಂದಾಯಿಸಲಾದ ಸಂಸ್ಥೆಗಳಿಗೆ ಋತುಚಕ್ರದ ರಜೆ ಕಡ್ಡಾಯಗೊಳಿಸಲಾಗಿದೆ.
ಮಹಿಳಾ ಉದ್ಯೋಗಿಗಳು ಆಯಾ ತಿಂಗಳಲ್ಲಿ ಒಂದು ದಿನ ಋತುಚಕ್ರದ ರಜೆಯನ್ನು ಬಳಸಿಕೊಳ್ಳಬೇಕು, ಹಿಂದಿನ ತಿಂಗಳ ರಜೆಯನ್ನು ಮುಂದಿನ ತಿಂಗಳಿಗೆ ವಿಸ್ತರಿಸಲು (carry over) ಮಾಡಲು ಸಾಧ್ಯವಿಲ್ಲ. ಅಲ್ಲದೆ, ಈ ರಜೆಯನ್ನು ಪಡೆಯಲು ಮಹಿಳಾ ಉದ್ಯೋಗಿಗಳು ಪ್ರತಿ ತಿಂಗಳು ಯಾವುದೇ ವೈದ್ಯಕೀಯ ಪ್ರಮಾಣಪತ್ರವನ್ನು ನೀಡುವ ಅಗತ್ಯವಿಲ್ಲ ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ.
ಡಿಸೆಂಬರ್ 2 ರಂದು, ರಾಜ್ಯದ ಮಹಿಳಾ ಸರ್ಕಾರಿ ಉದ್ಯೋಗಿಗಳಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಪ್ರತಿ ತಿಂಗಳು ಒಂದು ದಿನದ ಮುಟ್ಟಿನ ರಜೆಯನ್ನು ಮಂಜೂರು ಮಾಡುವಂತೆ ಸರ್ಕಾರ ಆದೇಶಿಸಿತ್ತು.
ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರ: ಹೈ ಕೋರ್ಟ್
ಅಸೋಸಿಯೇಶನ್ನ ಪರ ವಾದ ಆಲಿಸಿದ ನ್ಯಾ.ಜ್ಯೋತಿ ಮೂಲಿಮನಿ ಅವರಿದ್ದ ಹೈಕೋರ್ಟ್ ಪೀಠ ಋತುಚಕ್ರ ರಜೆ ಸಂಬಂಧಿಸಿದ ರಾಜ್ಯ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಿದೆ. ಕಾಯ್ದೆಯಲ್ಲಿಲ್ಲದ ನಿಯಮವನ್ನು ಸರ್ಕಾರಿ ಆದೇಶದ ಮೂಲಕ ಜಾರಿಗೊಳಿಸಿದೆ. ಸರ್ಕಾರದ ಏಕಪಕ್ಷೀಯ ಆದೇಶದಿಂದ ಹೋಟೆಲ್ಗಳಿಗೆ ಸಮಸ್ಯೆ ಎಂದು ಹೋಟೆಲ್ ಮಾಲೀಕರ ಸಂಘದ ಪರ ವಕೀಲರಾದ ಪ್ರಶಾಂತ್ ಬಿ.ಕೆ ವಾದ ಮಂಡಿಸಿದ್ದರು. ಆದೇಶಕ್ಕೆ ಮುನ್ನ ಸಂಘಟನೆಗಳ ಅಭಿಪ್ರಾಯ ಪಡೆಯಲಾಗಿತ್ತೆ ಎಂದು ಪ್ರಶ್ನೆ ಹಾಕಿದ ನ್ಯಾಯಮೂರ್ತಿಯವರಿಗೆ ಇಲ್ಲ ಎಂದು ಹೋಟೆಲ್ ಮಾಲೀಕರ ಸಂಘದ ಪರ ವಕೀಲರ ಉತ್ತರ ನೀಡಿದ್ದು, ಮುಂದಿನ ವಿಚಾರಣೆವರೆಗೆ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ನೀಡಲಾಗಿದೆ. ಮಧ್ಯಂತರ ತಡೆಯಾಜ್ಞೆ ತೆರವಿಗೆ ಅರ್ಜಿ ಸಲ್ಲಿಸಲು ಸರ್ಕಾರ ಸ್ವತಂತ್ರವೆಂದು ಹೈಕೋರ್ಟ್ ಏಕಸದಸ್ಯ ಪೀಠ ಅಭಿಪ್ರಾಯ ಪಟ್ಟಿದೆ.
Advertisement