
ದ್ವೇಷಭಾಷಣಗಳಿಗೆ ಕಡಿವಾಣ ಹಾಕಲು ರಾಜ್ಯ ಸರ್ಕಾರ ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ(ಪ್ರತಿಬಂಧಕ) ವಿಧೇಯಕ- 2025 ಅನ್ನು ಬುಧವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಪ್ರಶ್ನೋತ್ತರ ಕಲಾಪದ ನಂತರ ಗೃಹ ಸಚಿವ ಡಾ. ಜಿ ಪರಮೇಶ್ವರ ದ್ವೇಷ ಭಾಷಣ ಪ್ರತಿಬಂಧಕ ಮಸೂದೆ ಮಂಡಿಸಿದರು. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ದ್ವೇಷ ಭಾಷಣ ಪ್ರಸರಣೆ, ಪ್ರಕಟಣೆ, ಪ್ರಚಾರ ತಡೆಯುವ ವಿಧೇಯಕ ಇದಾಗಿದ್ದು, ಯಾವುದೇ ಪೂರ್ವಾಗ್ರಹ ಪೀಡಿತ ಹಿತಾಸಕ್ತಿಯನ್ನು ಈಡೇರಿಸಲು, ಜೀವಂತ ಅಥವಾ ಸತ್ತ ವ್ಯಕ್ತಿ, ಅಥವಾ ವ್ಯಕ್ತಿಗಳ ಗುಂಪಿನ ವಿರುದ್ಧ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉಂಟುಮಾಡುವ ಉದ್ದೇಶದಿಂದ ಮಾಡಿದ ಭಾಷಣ, ಪ್ರಕಟಿಸಿದ ಅಥವಾ ಪ್ರಸಾರ ಮಾಡಿದ ಯಾವುದೇ ಅಭಿವ್ಯಕ್ತಿಯನ್ನು ದ್ವೇಷ ಭಾಷಣ ಎಂದು ವರ್ಗೀಕರಿಸಲಾಗಿದೆ. ಮೊದಲ ಬಾರಿಗೆ ದ್ವೇಷ ಭಾಷಣ, ದ್ವೇಷ ಅಪರಾಧಗಳಿಗೆ ಕನಿಷ್ಟ 1 ವರ್ಷ ಮತ್ತು ಗರಿಷ್ಟ 7 ವರ್ಷದವರೆಗೆ ಜೈಲು ಹಾಗೂ 50 ಸಾವಿರ ರೂ ದಂಡ ವಿಧಿಸಲು ಅವಕಾಶ ನೀಡಲಾಗಿದೆ. ಈ ಮಸೂದೆಯು ಒಂದು ಲಕ್ಷ ರೂ ವರೆಗೆ ದಂಡ ಮತ್ತು ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆಗೆ ಅವಕಾಶ ನೀಡುತ್ತದೆ.
ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಬಗ್ಗೆ ಆಡಳಿತ ಪಕ್ಷ ಕಾಂಗ್ರೆಸ್ ಶಾಸಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನ ಸದಾಶಿವನಗರದಂತಹ ಶ್ರೀಮಂತ ಪ್ರದೇಶದಲ್ಲಿರುವ ಮನೆಗಳಿಗೂ 200 ಯೂನಿಟ್ ವಿದ್ಯುತ್ ಉಚಿತ, ಲಕ್ಷಾಂತರ ರೂಪಾಯಿ ದುಡಿಯುವ ಮಹಿಳೆಯರಿಗೂ ಬಸ್ ಪ್ರಯಾಣ ಉಚಿತ ನೀಡಬೇಕಾ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಈ ಕುರಿತ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ಸಿಎಲ್ ಪಿ ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಪರಿಷ್ಕರಣೆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಹೇಳಿದ್ದಾರೆ. ಈಮಧ್ಯೆ, ಗ್ಯಾರಂಟಿ ಯೋಜನೆಗಳಿಂದಲೇ ರಾಜ್ಯದ ಜನತೆಯ ಮನಸ್ಸನ್ನು ಗೆಲ್ಲಲು ಸಾಧ್ಯವಿಲ್ಲ, ಗ್ಯಾರಂಟಿ ಯೋಜನೆಗಳ ಜೊತೆ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ಕೂಡ ಆಗಬೇಕು ಎಂಬುದನ್ನು ನಿನ್ನೆ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಯಲ್ಲಿ ಶಾಸಕರು ಅಭಿಪ್ರಾಯ ಹೊರಹಾಕಿದ್ದಾರೆ ಎಂದು ಹಿರಿಯ ಶಾಸಕ ಕೆ.ಎನ್ ರಾಜಣ್ಣ ಹೇಳಿದ್ದಾರೆ.
ಅಕ್ರಮವಾಗಿ ದೇಶಕ್ಕೆ ಪ್ರವೇಶಿಸಿ ಉಡುಪಿಯಲ್ಲಿ ವಾಸವಾಗಿದ್ದ 10 ಬಾಂಗ್ಲಾದೇಶಿ ಪ್ರಜೆಗಳಿಗೆ 2 ವರ್ಷ ಜೈಲು ಶಿಕ್ಷೆ ಮತ್ತು ತಲಾ 10,000 ರೂ. ದಂಡ ವಿಧಿಸಲಾಗಿದೆ. ಮಲ್ಪೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿದ್ದ ಬಾಂಗ್ಲಾದೇಶಿ ವಲಸಿಗರಿಗೆ ಡಿಸೆಂಬರ್ 8 ರಂದು ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಶಿಕ್ಷೆ ವಿಧಿಸಿ ಆದೇಶಿಸಿದೆ. 2024ರ ಅಕ್ಟೋಬರ್ 11ರಂದು ಸಂಜೆ ಮಲ್ಪೆ ವಡಭಾಂಡೇಶ್ವರ ಬಸ್ ನಿಲ್ದಾಣದ ಬಳಿ ಏಳು ಜನರು ತಮ್ಮ ವಸ್ತುಗಳೊಂದಿಗೆ ಅನುಮಾನಾಸ್ಪದವಾಗಿ ಓಡಾಡುತ್ತಿರುವುದನ್ನು ಮಲ್ಪೆ ಪೊಲೀಸರು ಗಮನಿಸಿದ್ದರು. ಅವರೆಲ್ಲರೂ ನಕಲಿ ಆಧಾರ್ ಕಾರ್ಡ್ ದಾಖಲೆಗಳನ್ನು ಪಡೆದುಕೊಂಡಿದ್ದಾರೆ.
11 ಜನರನ್ನು ಬಲಿ ಪಡೆದ ಜೂನ್ 4ರ ಕಾಲ್ತುಳಿತ ಘಟನೆಯ ನಂತರ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕ್ರಿಕೆಟ್ ಪಂದ್ಯಗಳ ಆಯೋಜನೆ ಬಗ್ಗೆ ಕ್ರಿಕೆಟ್ ಅಭಿಮಾನಿಗಳಲ್ಲಿ ಗೊಂದಲ ಮೂಡಿತ್ತು. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಸ್ಪಷ್ಟನೆ ನೀಡಿದ್ದು, ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯಗಳನ್ನು ನಿಲ್ಲಿಸುವ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ನೂತನ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ನೇತೃತ್ವದ ಪದಾಧಿಕಾರಿಗಳ ತಂಡ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರನ್ನು ಬೆಳಗಾವಿಯಲ್ಲಿ ಭೇಟಿ ಮಾಡಿ, ಪಂದ್ಯಗಳ ಆಯೋಜನೆಗೆ ಸಹಕಾರ ಮತ್ತು ಅನುಮತಿ ಕೋರಿದ್ದಾರೆ. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, ಈ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಹಂಪಿಯ ನೆಲಮಹಡಿ ಶಿವ ದೇವಾಲಯದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವತಿಯಿಂದ ನಡೆಯುತ್ತಿರುವ ಪುನಶ್ಚೇತನ ಕಾಮಗಾರಿ ವೇಳೆ ಸ್ಮಾರಕ ಸ್ತಂಭವೊಂದನ್ನು ತುಂಡರಿಸಿದ ಮತ್ತು ಅದನ್ನು ನಾಪತ್ತೆ ಮಾಡಿದ ಕುರಿತು ದೂರು ದಾಖಲಾಗಿದೆ. ಕರ್ನಾಟಕ ರಕ್ಷಣಾ ವೇದಿಕೆ ಜನಸೇನೆಯ ವಿಜಯನಗರ ಜಿಲ್ಲಾಧ್ಯಕ್ಷರೂ ಆಗಿರುವ ಕಮಲಾಪುರ ನಿವಾಸಿ ಟಿ ಶಿವಕುಮಾರ್, ಎಎಸ್‌ಐ ನೇತೃತ್ವದ ಪುನಃಸ್ಥಾಪನೆ ಕಾರ್ಯಗಳ ಅಡಿಯಲ್ಲಿ ಪಕ್ಕದ ಗೋಡೆಯನ್ನು ನಿರ್ಮಿಸುವಾಗ ಕಲ್ಲಿನ ಕಂಬವನ್ನು ಯಂತ್ರಗಳು ಮುರಿದಿವೆ ಎಂದು ಆರೋಪಿಸಿದ್ದಾರೆ. ಡಿ.2ರಂದು ಈ ಬಗ್ಗೆ ಎಎಸ್ಐಗೆ ದೂರು ನೀಡಿದ್ದೆ. ಆದರೆ ಕ್ರಮ ಕೈಗೊಳ್ಳಲಿಲ್ಲ. ಬಳಿಕ ಅದನ್ನು ನಾಪತ್ತೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ.
Advertisement