

ಬೆಳಗಾವಿ: ರಾಜ್ಯದ ಎಲ್ಲಾ ತಾಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ 24 ಗಂಟೆಗಳ ಸೇವೆಯ ಖಾತ್ರಿ ಗುರಿಯನ್ನು ರಾಜ್ಯ ಸರ್ಕಾರ ಹೊಂದಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಕುಷ್ಟಗಿಯ ಬಿಜೆಪಿ ಶಾಸಕ ದೊಡ್ಡನಗೌಡ ಹೆಚ್ ಪಾಟೀಲ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಅಗತ್ಯ ಸಂಖ್ಯೆಯ ವೈದ್ಯರು, ತಜ್ಞರು ಮತ್ತು ವೈದ್ಯಕೀಯ ಸಿಬ್ಬಂದಿಗಳ ನೇಮಕಾತಿ ಮೂಲಕ ಈ ಗುರಿ ಸಾಧಿಸಲಾಗುತ್ತಿದೆ ಎಂದರು.
ಪ್ರತಿ ತಾಲೂಕು ಆಸ್ಪತ್ರೆಯು 24 ಗಂಟೆ ಸೇವೆ ಒದಗಿಸುವುದು ನಮ್ಮ ಉದ್ದೇಶವಾಗಿದೆ. 24 ಗಂಟೆಗಳ ಸೇವೆಯ ಖಾತ್ರಿಗೆ ಈಗ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಇಬ್ಬರು ಪ್ರಸೂತಿ ತಜ್ಞರು, ಅರಿವಳಿಕೆ ತಜ್ಞರು, ಮಕ್ಕಳ ತಜ್ಞರು, ಒಬ್ಬ ರೇಡಿಯಾಲಜಿಸ್ಟ್ ಮತ್ತು ಒಬ್ಬ ವೈದ್ಯರನ್ನು ಖಚಿತಪಡಿಸಿಕೊಳ್ಳುತ್ತೇವೆ. ಜನರು ಅವರಿಗೆ ಅಗತ್ಯವಿರುವಾಗ ಸೇವೆ ಪಡೆಯಬಹುದಾಗಿದೆ ಎಂದು ತಿಳಿಸಿದರು.
ಸಮಯೋಚಿತ ವೈದ್ಯಕೀಯ ಆರೈಕೆಯ ಕೊರತೆಯಿಂದ ಬಾಣಂತಿಯರ ಸಾವುಗಳು ಹೆಚ್ಚಾಗಿ ಸಂಭವಿಸುತ್ತಿವೆ. ತಾಲೂಕು ಆಸ್ಪತ್ರೆಗಳಲ್ಲಿ ಸೇವೆಗಳನ್ನು ಸುಧಾರಿಸುವುದರಿಂದ ಜನರು ಜಿಲ್ಲಾ ಆಸ್ಪತ್ರೆಗಳಿಗೆ ಹೋಗುವುದನ್ನು ತಪ್ಪಿಸಬಹುದು.ಕಾರ್ಯನಿರ್ವಹಣೆ ಕಡಿಮೆ ಇರುವ ತಾಲ್ಲೂಕ್ ಆಸ್ಪತ್ರೆಗಳಲ್ಲಿ 30 ಕ್ಕಿಂತ ಕಡಿಮೆ ಹೆರಿಗೆಗಳಾದರೆ, ಇಬ್ಬರು ಎಂಬಿಬಿಎಸ್ ವೈದ್ಯರೊಂದಿಗೆ ಇಬ್ಬರು ಸ್ತ್ರೀ ರೋಗ ತಜ್ಞರನ್ನು ಬದಲಾವಣೆ ಮಾಡುತ್ತೇವೆ. ಒಬ್ಬರು ಫಿಜಿಸಿಯನ್ ಇರಲಿದ್ದಾರೆ. ಸಂಜೆ 4 ಗಂಟೆ ನಂತರ ಬಾಗಿಲು ಬಂದ್ ಮಾಡಲಾಗುತ್ತಿದ್ದ ಸಮುದಾಯ ಆರೋಗ್ಯ ಕೇಂದ್ರಗಳು ಇದೀಗ 24 ಗಂಟೆಗಳ ಸೇವೆ ಒದಗಿಸಬೇಕಾಗುತ್ತದೆ ಎಂದು ತಿಳಿಸಿದರು.
ರಾಜ್ಯದ ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ಕರ್ತವ್ಯ ವೈದ್ಯಾಧಿಕಾರಿಗಳು, ನರ್ಸ್‍ಗಳು ಹಾಗೂ ಫಾರ್ಮಸಿಸ್ಟ್ ಹುದ್ದೆಗಳನ್ನು ಒಂದು ತಿಂಗಳೊಳಗೆ ಭರ್ತಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಲಾಖೆಯಲ್ಲಿ ಖಾಲಿ ಇರುವ 337 ತಜ್ಞ ವೈದ್ಯರು, 250 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳನ್ನು ಗುತ್ತಿಗೆ ಆಧಾರದಲ್ಲಿ ಭರ್ತಿ ಮಾಡಲು ಈಗಾಗಲೆ ಅನುಮತಿ ನೀಡಲಾಗಿದೆ. ಸರ್ಕಾರಿ ಕೋಟಾದಡಿ ವ್ಯಾಸಂಗ ಪೂರೈಸಿದ ವೈದ್ಯರು, ತಜ್ಞ ವೈದ್ಯರು 01 ವರ್ಷ ಕಡ್ಡಾಯ ಸರ್ಕಾರಿ ಸೇವೆ ಕೈಗೊಳ್ಳುವ ಕಾರ್ಯಕ್ರಮದಡಿ 1500 ವೈದ್ಯರನ್ನು ನೇಮಕ ಮಾಡಲು ಕೂಡ ಕ್ರಮ ಕೈಗೊಳ್ಳಲಾಗಿದೆ ಎಂದರು.
ಇಲಾಖೆಯಲ್ಲಿ ಮಂಜೂರಾಗಿ ಖಾಲಿ ಇರುವ 120 ತಜ್ಞ ವೈದ್ಯರು ಮತ್ತು 100 ಸಾಮಾನ್ಯ ಕರ್ತವ್ಯ ವೈದ್ಯಾಧಿಕಾರಿಗಳ ಹುದ್ದೆಗಳನ್ನು ನೇರ ನೇಮಕಾತಿ ಮುಖಾಂತರ ಭರ್ತಿ ಮಾಡಿಕೊಳ್ಳಲು ಆರ್ಥಿಕ ಇಲಾಖೆ ಸಹಮತಿಸಿದ್ದು, ಈ ಪ್ರಕ್ರಿಯೆಯೂ ಕೂಡ ಪ್ರಗತಿಯಲ್ಲಿದೆ. ತಜ್ಞ ವೈದ್ಯರ ನೇಮಕಾತಿ ಕುರಿತಂತೆ ಹೈಕೋರ್ಟ್‍ನಲ್ಲಿದ್ದ ಪ್ರಕರಣ ಕೂಡ ಅಂತಿಮ ಹಂತದಲ್ಲಿದ್ದು, ಶೀಘ್ರ ಇತ್ಯರ್ಥಗೊಳ್ಳಲಿದೆ ಎಂದರು.
Advertisement