

ಬೆಂಗಳೂರು: ರಾಜ್ಯದ ರೈತರ ನೆರವಿಗೆ ತಕ್ಷಣವೇ ಧಾವಿಸುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬರೆದ ಪತ್ರಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕದಲ್ಲಿ 9.67 ಲಕ್ಷ ಟನ್ ತೊಗರಿ ಖರೀದಿಗೆ ಅಸ್ತು ಎಂದಿದೆ.
ಕನಿಷ್ಠ ಬೆಂಬಲ ಬೆಲೆ(MSP) ಯೋಜನೆಯಡಿ ಕೇಂದ್ರದ ಸಂಸ್ಥೆಗಳ ಮೂಲಕ ತೊಗರಿ ಖರೀದಿಗೆ ತಕ್ಷಣವೇ ಅನುಮೋದನೆ ನೀಡಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ಮೋದಿಗೆ ಪತ್ರ ಬರೆದು ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಕೃಷಿ ಸಚಿವರು, ಕನಿಷ್ಠ ಬೆಂಬಲ ಬೆಲೆಯಲ್ಲಿ ರೈತರಿಂದ ತೊಗರಿಬೆಳೆ ಖರೀದಿಸಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ್ದಾರೆ.
ರಾಜ್ಯದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ನಫೆಡ್ (ರಾಷ್ಟ್ರೀಯ ಕೃಷಿ ಸಹಕಾರ ಮಾರುಕಟ್ಟೆ ಒಕ್ಕೂಟ) ಮತ್ತು ಎನ್‌ಸಿಸಿಎಫ್ ಮೂಲಕ 90 ದಿನದೊಳಗೆ ತೊಗರಿ ಖರೀದಿಸಲು ಅನುಮತಿ ನೀಡಲಾಗಿದೆ.
ಖರೀದಿ ಪ್ರಾರಂಭದ ದಿನಾಂಕದಿಂದ 90 ದಿನಗಳವರೆಗೆ ರಾಜ್ಯದಲ್ಲಿ ಪಿಎಸ್‌ಎಸ್ (ಕನಿಷ್ಠ ಬೆಂಬಲ ಬೆಲೆ) ಅಡಿ ಒಟ್ಟು 9.67 ಲಕ್ಷ ಮೆಟ್ರಿಕ್ ಟನ್ ತೊಗರಿಬೇಳೆ ಖರೀದಿಸಲಾಗುವುದು. 2025-26ಕ್ಕೆ ತೊಗರಿ ಬೆಳೆಗೆ ಘೋಷಿಸಲಾದ ಎಂಎಸ್‌ಪಿ ಕ್ವಿಂಟಾಲ್‌ಗೆ 8,000ರು. ಆಗಿದೆ.
ಈ ಸಂಬಂಧ ಪ್ರಧಾನಿ ಮೋದಿ ಹಾಗೂ ಕೇಂದ್ರ ಸಚಿವರಿಗೆ ಧನ್ಯವಾದ ಹೇಳಿರುವ ರಾಜ್ಯ ಬಿಜೆಪಿ ಅಧ್ಯಕ್ಷ ಬಿವೈ ವಿಜಯೇಂದ್ರ ಅವರು, ರಾಜ್ಯದ ತೊಗರಿ ಬೆಳೆಗಾರರ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ, ಪ್ರಸಕ್ತ ಹಂಗಾಮಿನ 9,67,000 ಮೆ.ಟನ್ ತೊಗರಿಯನ್ನು ಬೆಂಬಲ ಬೆಲೆ ಅಡಿಯಲ್ಲಿ ಖರೀದಿಸಲು ಒಪ್ಪಿಗೆ ನೀಡಿದೆ ಎಂದು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದಾರೆ.
Advertisement