
ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಚಳಿಗಾಲ ಅಧಿವೇಶನ ಮಧ್ಯೆ ಸಿಎಂ ಹುದ್ದೆ ಬದಲಾವಣೆ ವಿಷಯ ಚರ್ಚೆಯಾಗುತ್ತಲೇ ಇದೆ ಇಂದು ಸಿಎಂ ಸಿದ್ದರಾಮಯ್ಯ ಪುತ್ರ ವಿಧಾನ ಪರಿಷತ್ ಸದಸ್ಯ ಡಾ ಯತೀಂದ್ರ, ಸಿದ್ದರಾಮಯ್ಯ ಪೂರ್ಣಾವಧಿ ಸಿಎಂ ಹೇಳಿಕೆ ಪುನರುಚ್ಛರಿಸಿದ್ದಾರೆ. ಬೆಳಗಾವಿಯಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿರುವ ಯತೀಂದ್ರ ಸಿದ್ದರಾಮಯ್ಯ, ಮುಖ್ಯಮಂತ್ರಿ ಹುದ್ದೆಯಲ್ಲಿ ಯಾವುದೇ ಗೊಂದಲವಾಗಲಿ, ಭಿನ್ನಾಭಿಪ್ರಾಯವಾಗಲಿ ಇಲ್ಲ. ಎಲ್ಲವೂ ಸ್ಪಷ್ಟವಾಗಿದೆ. ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ಹೈಕಮಾಂಡ್ ಸ್ಪಷ್ಟವಾಗಿ ಹೇಳಿದೆ. ನನ್ನ ತಂದೆಯೇ 5 ವರ್ಷ ಸಿಎಂ ಆಗಿ ಇರುತ್ತಾರೆ ಎಂದು ಹೇಳಿದ್ದಾರೆ. ಯತೀಂದ್ರ ಅವರ ಹೇಳಿಕೆಗೆ ಡಿಸಿಎಂ ಡಿ ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದು ಇದಕ್ಕೆ ಸಿಎಂ ಅವರೇ ಉತ್ತರ ನೀಡುತ್ತಾರೆ ಎಂದು ತಿಳಿಸಿದ್ದಾರೆ. 5 ವರ್ಷ ಸಿಎಂ ಆಗಿರಲಿದ್ದಾರೆ ಎಂಬ ಹೇಳಿಕೆಯ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಯತೀಂದ್ರ ಅವರೊಂದಿಗೆ ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ಈ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಸಿಎಂ, ಹೈಕಮಾಂಡ್ ಏನು ಹೇಳತ್ತೆ ಹಾಗೆ ಕೇಳುತ್ತೇನೆ ಎಂದು ಹೇಳಿದ್ದಾರೆ.
ಸಭೆ- ಪಂಚಾಯ್ತಿ ಮೂಲಕ ಯಾವುದೇ ವ್ಯಕ್ತಿ, ಕುಟುಂಬ ಅಥವಾ ಕುಟುಂಬದ ಸದಸ್ಯರನ್ನು ಸಾಮಾಜಿಕವಾಗಿ ಬಹಿಷ್ಕರಿಸುವುದನ್ನು ನಿಷೇಧಿಸುವ ಮತ್ತು ಅಪರಾಧೀಕರಿಸುವ ಮಸೂದೆಯನ್ನು ರಾಜ್ಯ ಸರ್ಕಾರ ಗುರುವಾರ ವಿಧಾನಸಭೆಯಲ್ಲಿ ಮಂಡಿಸಿದೆ. ಈ ಮಸೂದೆ, ನಿಯಮಗಳನ್ನು ಉಲ್ಲಂಘಿಸಿ ಸಾಮಾಜಿಕ ಬಹಿಷ್ಕಾರ ಹಾಕುವವರಿಗೆ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು 1 ಲಕ್ಷ ರೂ. ದಂಡ ವಿಧಿಸಲು ಅವಕಾಶ ನೀಡುತ್ತದೆ. ಮಸೂದೆಯಲ್ಲಿ 20 ರೀತಿಯ ಸಾಮಾಜಿಕ ಬಹಿಷ್ಕಾರಗಳನ್ನು ಪಟ್ಟಿ ಮಾಡಲಾಗಿದೆ.
ಇದೇ ವೇಳೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಪರವಾಗಿ ಸಚಿವ ಮಹದೇವಪ್ಪ ಅವರು "ಗ್ರೇಟರ್ ಬೆಂಗಳೂರು ಆಡಳಿತ(ಎರಡನೇ ತಿದ್ದುಪಡಿ)ಮಸೂದೆ 2025 ಅನ್ನು ಮಂಡಿಸಿದರು. ಈ ಮಸೂದೆಯಲ್ಲಿ ಲೋಕಸಭೆ, ರಾಜ್ಯಸಭೆ, ರಾಜ್ಯ ವಿಧಾನಸಭೆ ಮತ್ತು ರಾಜ್ಯ ವಿಧಾನ ಪರಿಷತ್ತಿನ ಸದಸ್ಯರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸದಸ್ಯರನ್ನಾಗಿ ಸೇರಿಸಲು ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ, 2024ಕ್ಕೆ ತಿದ್ದುಪಡಿ ಮಾಡಲಾಗಿದೆ.
ವಿಧಾನ ಪರಿಷತ್ ಸಭಾಧ್ಯಕ್ಷ ಬಸವರಾಜ ಹೊರಟ್ಟಿ ಅವರ ವಿರುದ್ಧ ಕಾಂಗ್ರೆಸ್ ಶಾಸಕ ನಾಗರಾಜ್ ಯಾದವ್ ಭ್ರಷ್ಟಾಚಾರ ಆರೋಪ ಮಾಡಿದ್ದು, ವಿಧಾನ ಪರಿಷತ್ ಸದಸ್ಯರಿಂದ ಪಕ್ಷಾತೀತವಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದೇ ವೇಳೆ ಸಭಾಧ್ಯಕ್ಷರ ವಿರುದ್ಧ ನೀಡಿರುವ ಆಕ್ಷೇಪಾರ್ಹ ಹೇಳಿಕೆಗಳ ಕುರಿತು ತನಿಖೆ ನಡೆಸಲು ಉಪಾಧ್ಯಕ್ಷ ಎಂ.ಕೆ. ಪ್ರಾಣೇಶ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲು ಸರ್ವಾನುಮತದಿಂದ ಸದಸ್ಯರು ಒಪ್ಪಿಕೊಂಡಿದ್ದಾರೆ. ಚಳಿಗಾಲದ ಅಧಿವೇಶನ ಪ್ರಾರಂಭವಾಗುವ ಮುನ್ನ, ಪರಿಷತ್ ಸಚಿವಾಲಯದಲ್ಲಿ ಇತ್ತೀಚೆಗೆ 30 ಸಿಬ್ಬಂದಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿದ್ದು, ಇದರಲ್ಲಿ ಹೊರಟ್ಟಿ ಭಾಗಿಯಾಗಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಆರೋಪಿಸಿದ್ದರು. ಈ ಆರೋಪಗಳನ್ನು ಹೊರಟ್ಟಿ ಸ್ಪಷ್ಟವಾಗಿ ತಳ್ಳಿಹಾಕಿದ್ದಾರೆ.
ಮನೆಗೆಲಸದ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಜೈಲು ಶಿಕ್ಷೆ ಅನುಭವಿಸುತ್ತಿರುವ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ತಮ್ಮ ವಿರುದ್ಧದ ಎರಡು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ಬೇರೆ ಕೋರ್ಟ್ ಗೆ ವರ್ಗಾಯಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ. ಸಿಜೆಐ ಸೂರ್ಯಕಾಂತ್ ನೇತೃತ್ವದ ತ್ರಿಸದಸ್ಯ ಪೀಠ, ಕೆಳ ನ್ಯಾಯಾಲಯದ ಜಡ್ಜ್ ಅವರ ಅಭಿಪ್ರಾಯಗಳು, ಪೂರ್ವಾಗ್ರಹಪೀಡಿತರಾಗಿದ್ದಾರೆ ಎಂಬುದಕ್ಕೆ ಯಾವುದೇ ಆಧಾರ ಇಲ್ಲ ಎಂದು ಹೇಳಿದೆ.
ಸರ್ಕಾರಿ ಆಸ್ಪತ್ರೆಯಲ್ಲಿ ಜನೌಷಧಿ ಕೇಂದ್ರ ಮುಚ್ಚುವ ರಾಜ್ಯ ಸರ್ಕಾರದ ಆದೇಶಕ್ಕೆ ಹೈಕೋರ್ಟ್ ನ ಧಾರವಾಡ ಪೀಠ ತಡೆಯಾಜ್ಞೆ ನೀಡಿದೆ. ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ರಾಕೇಶ್, ಮಹಾಲಿಂಗಪ್ಪ ಮತ್ತಿತರರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ಧಾರವಾಡ ಹೈಕೋರ್ಟ್ ಪೀಠ ರಾಜ್ಯ ಸರ್ಕಾರ ಆದೇಶವನ್ನ ರದ್ದುಗೊಳಿಸಿದೆ. 120 ಚದರ ಅಡಿ ಜಾಗದಲ್ಲಿ ಜನೌಷಧಿ ಇಟ್ಟು ಬಡವರಿಗೆ ಕಡಿಮೆ ಹಣದಲ್ಲಿ ಔಷಧಿ ನೀಡಿದರೆ ಏನು ಸಮಸ್ಯೆ? ಜನೌಷಧಿ ಬಗ್ಗೆ ಯಾರಾದರೂ ದೂರು ಕೊಟ್ಟಿದ್ದಾರಾ? ಬಸ್ ಉಚಿತ ಮಾಡಿ ಎಂದು ತಮಗೆ ಯಾರು ಹೇಳಿದ್ದರು ಎಂದು ಪ್ರಶ್ನಿಸಿ ಸರ್ಕಾರವನ್ನು ತರಾಟೆಗೆ ತೆಗದುಕೊಂಡಿತು.
Advertisement