

ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ರಾಜ್ಯ ವಿಧಾನಸಭೆಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಶುಕ್ರವಾರ ಆರೋಪಿಸಿದೆ. ಅಲ್ಲದೇ ವಿಧಾನಮಂಡಲದ ಅಧಿವೇಶನ ಮುಗಿಯುವವರೆಗೂ ಆಡಳಿತಾರೂಢ ಕಾಂಗ್ರೆಸ್‌ನ 'ಡಿನ್ನರ್ ರಾಜಕಾರಣ'ಕ್ಕೆ ಕಡಿವಾಣ ಹಾಕುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದೆ.
ಇಂತಹ 'ಡಿನ್ನರ್ ರಾಜಕೀಯ' ಸಚಿವರ ಕಾರ್ಯವೈಖರಿ ಮೇಲೆ ಪರಿಣಾಮ ಬೀರುತ್ತದೆ ಎಂದು ಪ್ರತಿಪಕ್ಷದ ನಾಯಕ ಆರ್ ಅಶೋಕ ಆರೋಪಿಸಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ ಕೆ ಶಿವಕುಮಾರ್ ನಡುವಿನ ಸಿಎಂ ಕುರ್ಚಿ ಗುದ್ದಾಟದ ನಡುವೆ
ಡಿನ್ನರ್ ನಲ್ಲಿ ಭಾಗವಹಿಸುವ ಮಂತ್ರಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಕಾಂಗ್ರೆಸ್‌ನ ಡಿನ್ನರ್ ರಾಜಕಾರಣದಿಂದ ಸಚಿವರು ಸದನಕ್ಕೆ ಬರುವ ಮೊದಲು ತಮ್ಮನ್ನು ತಾವು ಸಿದ್ಧಪಡಿಸಿಕೊಳ್ಳಲು, ಉದ್ಭವಿಸಿದ ಸಮಸ್ಯೆಗಳಿಗೆ ಅಥವಾ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಲು ಸಮಯವನ್ನು ನೀಡುತ್ತಿಲ್ಲ ಎಂದು ಕಿಡಿಕಾರಿದರು.
ವಿಧಾನಸಭೆ ಅಧಿವೇಶನ ನಡೆಯುತ್ತಿದ್ದು, ಸದನದಲ್ಲಿ ಕೇಳಿಬರುವ ಸಮಸ್ಯೆಗಳು ಅಥವಾ ಪ್ರಶ್ನೆಗಳಿಗೆ ಉತ್ತರಿಸಲು ಸಚಿವರು ಸಮರ್ಥರಿದ್ದು, ಸಜ್ಜಾಗಿ ಬರುತ್ತಾರೆ ಎಂದು ನಂಬಿದ್ದೇವೆ. ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಗೃಹ ಲಕ್ಷ್ಮಿ ಯೋಜನೆ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗದಿರುವ ಬಗ್ಗೆ ಮಹೇಶ್ ಟೆಂಗಿನಕಾಯಿ (ಬಿಜೆಪಿ ಶಾಸಕ) ಕೇಳಿದಾಗ, ಆಗಸ್ಟ್ ವರೆಗೆ ಹಣ ಮಂಜೂರಾಗಿದೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಎರಡು ತಿಂಗಳಿಂದ ಇನ್ನೂ ಹಣ ಜಮಾ ಆಗಿಲ್ಲ ಎಂದು ಶಾಸಕರು ಗಮನಕ್ಕೆ ತರಲು ಮುಂದಾದಾಗ, ನಾನು ಎಲ್ಲಾವನ್ನು ಹೇಳಿದ್ದೇನೆ ಎಂದು ಉತ್ತರಿಸಿದರು. ಇದಕ್ಕೆ ಪ್ರತಿಪಕ್ಷದ ಮುಖಂಡ ಆರ್ ಅಶೋಕ್ ಮತ್ತು ಬಿಜೆಪಿ ಶಾಸಕ ಸುನೀಲ್ ಕುಮಾರ್ , ಯಾವ ತಿಂಗಳವರೆಗೆ ಹಣ ಬಿಡುಗಡೆಯಾಗಿದೆ ಎಂಬುದನ್ನು ಸಚಿವರು ಸ್ಪಷ್ಟವಾಗಿ ಉತ್ತರಿಸಿಲ್ಲ, ಸದನಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ದಡ್ಡರಿಗೆ ಹೇಳಿದ ಹಾಗೆ ಹೇಳಿದ್ದಾರೆ: ಆಗಸ್ಟ್ ವರೆಗೂ ಗೃಹಲಕ್ಷ್ಮಿ ಹಣ ಕ್ಲೀಯರ್ ಆಗಿದೆ ಎಂದು ಸಚಿವರು ಹೇಳಿದ್ದಾರೆ. ಆದರೆ, ಅವರು ಅರ್ಥ ಮಾಡ್ಕೊಳ್ಳಿ ಅಂತ ದಡ್ಡರಿಗೆ ಹೇಳಿದ ಹಾಗೆ ಹೇಳಿದ್ದಾರೆ, ನೀವೆಲ್ಲ ದಡ್ಡರು, ಕಡಿಮೆ ಜ್ಞಾನ ಇದೆ ಅನ್ನೋ ಥರ ಸಚಿವೆ ಲಕ್ಷ್ಮಿ ಉತ್ತರ ಕೊಟ್ಟಿದ್ದಾರೆ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು, ಈ ಹಂತದಲ್ಲಿ ಮಧ್ಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ, ಅರ್ಥಮಾಡ್ಕೊಳ್ಳಿ ಅಂತಾ ಸಚಿವರು ಹೇಳಿದ್ದಾರೆ. ದಡ್ಡರಿಗೆ ಹೇಳಿದ ಹಾಗೆ ಹೇಳಿಲ್ಲ ಎಂದರು.
ಅಗಸ್ಟ್ ವರೆಗೆ ಹಣ ಬಿಡುಗಡೆ ಮಾಡಿದ್ದೇವೆ ಎಂದು ಸಚಿವರು ಹೇಳಿದ್ದಾರೆ, ಒಂದು ವೇಳೆ ಮಾರ್ಚ್ ತಿಂಗಳ ಹಣ ಬಂದಿಲ್ಲ ಅಂದರೆ ಅದನ್ನು ಬಿಡುಗಡೆ ಮಾಡಿಸೋಣ ಎಂದು ಹೇಳಿದ್ದಾರೆ. ಸಾಮಾನ್ಯವಾಗಿ ಫಲಾನುಭವಿಗಳಿಗೆ ಹಣ ನೀಡುವಾಗ ಎರಡು ತಿಂಗಳು ವಿಳಂಬವಾಗಿರುತ್ತದೆ, ಅದು ಬಂದಿಲ್ಲ ಅಂದರೆ, ಕೂಡಲೇ ಕೊಡಿಸುವ ಕೆಲಸ ಮಾಡಲಾಗುವುದು ಎಂದು ಮುಖ್ಯಮಂತ್ರಿ ಅವರು ಸದನಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಡಿ. 9ರಂದು ಸದನದಲ್ಲಿ ಟೆಂಗಿನಕಾಯಿ ಹೆಬ್ಬಾಳ್ಕರ್‌ಗೆ ಪ್ರಶ್ನೆ ಕೇಳಿದ್ದರು. ಮರುದಿನವೇ ಫೆಬ್ರವರಿ ಮತ್ತು ಮಾರ್ಚ್ ತಿಂಗಳಲ್ಲಿ ಫಲಾನುಭವಿಗಳಿಗೆ ಜಮಾ ಆಗಿರುವ ಹಣದ ಕುರಿತು ಧಾರವಾಡ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಂದ ಮಾಹಿತಿ ಕೇಳಿದ್ದರು. ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನಲ್ಲಿ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ಬಿಡುಗಡೆಯಾಗಿಲ್ಲ ಎಂದು ಲೆಟರ್‌ಹೆಡ್‌ನಲ್ಲಿರುವ ಅಧಿಕಾರಿ ಪತ್ರವನ್ನು ಓದಿದ ಅಶೋಕ್, ಗದಗ ಮತ್ತು ಹಾವೇರಿ ಜಿಲ್ಲೆಯ ಅಧಿಕಾರಿಗಳಿಂದ ಇದೇ ರೀತಿಯ ಪ್ರತಿಕ್ರಿಯೆಗಳು ಬಂದಿವೆ. ಹೆಬ್ಬಾಳ್ಕರ್ ಅವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಆರೋಪಿಸಿದರು.
ಈ ಸದನದಲ್ಲಿ ಸಚಿವರು ನೀಡುವ ಉತ್ತರ ಅಥವಾ ಹೇಳಿಕೆಗಳನ್ನು ನಾವು ಹೇಗೆ ನಂಬಬೇಕು, ಇದು ಸದನಕ್ಕೆ ಅಗೌರವ ತೋರಿದಂತಾಗುತ್ತದೆ. ಸಚಿವರು ಡಿನ್ನರ್ ರಾಜಕಾರಣದಲ್ಲಿ ಪಾಲ್ಗೊಳ್ಳುವುದು ಈ ಪರಿಸ್ಥಿತಿಗೆ ಕಾರಣವಾಗಿದೆ ಎಂದು ಆರೋಪಿಸಿದರು.
ನೈಟ್ ಡಿನ್ನರ್ ಗಳನ್ನು ಮುಂಬರುವ ಈ ಹತ್ತು ದಿನ ಕಡಿತ ಮಾಡಿ, ಡಿನ್ನರ್ ಗಳಿಗೆ ಬೀಗ ಹಾಕಿಸಿ, ಸದನ ಸರಿಯಾಗಿ ನಡೆಯುತ್ತೆ ಎಂದು ಅಶೋಕ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಹಕ್ಕು ಚ್ಯುತಿ ಉಲ್ಲಂಘನೆ ಮಾಡಿದ್ದಾರೆಯೇ?
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಶಾಸಕ ಸುನೀಲ್ ಕುಮಾರ್, ಫಲಾನುಭವಿಗಳ ಖಾತೆಗೆ ಹಣ ಜಮಾ ಆಗುವುದನ್ನು ಖಚಿತಪಡಿಸಿಕೊಳ್ಳುವುದು ಸದನದ ಒಂದು ಭಾಗವಾಗಿದೆ, ಆದರೆ ಸಚಿವರು ಸದನಕ್ಕೆ ತಪ್ಪು ಉತ್ತರ ನೀಡುವ ಮೂಲಕ ಹಕ್ಕು ಚ್ಯುತಿ ಉಲ್ಲಂಘನೆ ಮಾಡಿದ್ದಾರೆಯೇ ಎಂಬುದನ್ನು ನೋಡಬೇಕು ಎಂದರು. ಕಾಂಗ್ರೆಸ್ ಶಾಸಕರಾದ ಶಿವಲಿಂಗೇಗೌಡ ಮತ್ತು ಎನ್ ಹೆಚ್ ಕೋನರೆಡ್ಡಿ ಅವರು ಕುಮಾರ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು, ಇದು ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ಮಾತಿನ ಚಕಮಕಿಗೆ ಕಾರಣವಾಯಿತು.
ಸದನಕ್ಕೆ ತಪ್ಪು ಮಾಹಿತಿ ನೀಡಿದ ಹೆಬ್ಬಾಳ್ಕರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಶೋಕ ಮತ್ತು ಇತರ ಪ್ರತಿಪಕ್ಷಗಳ ಸದಸ್ಯರು ಪಟ್ಟು ಹಿಡಿದಾಗ, ಸ್ಪೀಕರ್ ಯು ಟಿ ಖಾದರ್ ಅವರೊಂದಿಗೆ ಮಾತನಾಡಿ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸುವುದಾಗಿ ಮತ್ತು ಅಂತಹ ವಿಷಯಗಳು ಪುನರಾವರ್ತನೆಯಾಗದಂತೆ ನೋಡಿಕೊಳ್ಳುವುದಾಗಿ ಸಿಎಂ ಹೇಳಿದರು. ಸೋಮವಾರ ಹೆಬ್ಬಾಳ್ಕರ್ ಸ್ಪಷ್ಟನೆ ನೀಡಲಿದ್ದು, ಮುಂದೆ ಇಂತಹ ಘಟನೆಗಳು ನಡೆಯದಂತೆ ನೋಡಿಕೊಳ್ಳಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
Advertisement