

ಬೆಳಗಾವಿ: ಇತ್ತೀಚೆಗೆ ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ನೀಡುವಂತೆ ಒತ್ತಾಯಿಸಿ ಚರ್ಚೆಗೆ ಗ್ರಾಸವಾಗಿದ್ದ ಕಾಗವಾಡ ಶಾಸಕ ರಾಜು ಕಾಗೆ ಚಳಿಗಾಲದ ಅಧಿವೇಶನದಲ್ಲಿ ಮತ್ತೊಮ್ಮೆ ತಮ್ಮ ಬೇಡಿಕೆಯನ್ನು ಪುನರುಚ್ಚರಿಸಿದ್ದಾರೆ.
ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ನಡೆದ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಶಾಸಕ ರಾಜು ಕಾಗೆ, ಸರ್ಕಾರಗಳಿಂದ ದೀರ್ಘಕಾಲದ ನಿರ್ಲಕ್ಷ್ಯ ಮತ್ತು ತಾರತಮ್ಯವನ್ನು ಆರೋಪಿಸಿ ಪ್ರತ್ಯೇಕ ರಾಜ್ಯ ಸ್ಥಾನಮಾನಕ್ಕಾಗಿ ಒತ್ತಾಯಿಸುವುದನ್ನು ಮುಂದುವರಿಸುವುದಾಗಿ ಹೇಳಿದರು.
ಈ ಪ್ರದೇಶಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನವನ್ನು ಪರಿಗಣಿಸುವಂತೆ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಇಬ್ಬರಿಗೂ ಈಗಾಗಲೇ ಪತ್ರ ಬರೆದಿದ್ದೇನೆ. ಕೆಲವು ಮಾಧ್ಯಮ ಸಂಸ್ಥೆಗಳು ಮತ್ತು ಕನ್ನಡ ಪರ ಸಂಘಟನೆಗಳು ನನ್ನನ್ನು ಟೀಕಿಸಿವೆ. ಆದರೆ ಇನ್ನು ಕೆಲವರು ನನ್ನ ನಿಲುವನ್ನು ಬೆಂಬಲಿಸಿದ್ದಾರೆ. ಅವರು ಟೀಕಿಸಲಿ; ನಾನು ದೃಢವಾಗಿಯೇ ಇರುತ್ತೇನೆ. ನಾನು ಈ ಬೇಡಿಕೆಯನ್ನು ಮುಂದುವರಿಸುತ್ತೇನೆ ಎಂದು ಅವರು ಪ್ರತಿಪಾದಿಸಿದರು.
ತಮ್ಮ ಬೇಡಿಕೆಗೆ ಕಾರಣಗಳನ್ನು ನೀಡಿದ ಶಾಸಕರು, ಸರ್ಕಾರವು ಕಾಗವಾಡ ಸೇರಿದಂತೆ ಐದು ಹೊಸ ತಾಲ್ಲೂಕುಗಳನ್ನು ಘೋಷಿಸಿದ್ದರೂ, ಆಡಳಿತ ಕಚೇರಿಗಳು ಬಾಡಿಗೆ ಕಟ್ಟಡಗಳಿಂದ ಕಾರ್ಯನಿರ್ವಹಿಸುತ್ತಿವೆ. ಸರ್ಕಾರವು ವರ್ಷಗಳ ಹಿಂದೆಯೇ ಹೊಸ ತಾಲ್ಲೂಕು ಕಚೇರಿ ಕಟ್ಟಡಗಳಿಗೆ 8 ಕೋಟಿ ರೂಪಾಯು ಮಂಜೂರು ಮಾಡಿತ್ತು, ಆದರೆ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದರು.
ಕಡೂರು ತಾಲ್ಲೂಕಿಗೆ 16 ಕೋಟಿ ರೂಪಾಯಿ ನೀಡಲಾಗಿದೆ. ನಿರ್ಮಾಣಕ್ಕಾಗಿ 8 ಕೋಟಿ ರೂ.ಗಳ ಹಂಚಿಕೆಯನ್ನು 20% ರಷ್ಟು ಪರಿಷ್ಕರಿಸಬೇಕೆಂಬ ನಮ್ಮ ವಿನಂತಿಯನ್ನು ನಿರ್ಲಕ್ಷಿಸಲಾಗಿದೆ. ಪ್ರಮುಖ ಮೂಲಸೌಕರ್ಯ ಯೋಜನೆಗಳು ಸ್ಥಗಿತಗೊಂಡಿವೆ ಎಂದು ಶಾಸಕರು ಹೇಳಿದರು.
ಸಂಘಟನೆಗಳು ಅಥವಾ ಶಾಸಕರು ನನ್ನನ್ನು ದೂಷಿಸಲಿ - ಈ ಎಲ್ಲಾ ಕಾರಣಗಳಿಗಾಗಿ ನಾನು ಉತ್ತರ ಕರ್ನಾಟಕಕ್ಕೆ ಪ್ರತ್ಯೇಕ ರಾಜ್ಯ ಸ್ಥಾನಮಾನ ಬೇಕೆಂದು ಒತ್ತಾಯಿಸುವುದನ್ನು ಮುಂದುವರಿಸುತ್ತೇನೆ ಎಂದು ತಿಳಿಸಿದರು.
Advertisement