

ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಭೀಕರ ಸಿಲಿಂಡರ್ ಸ್ಫೋಟ ಸಂಭವಿಸಿ ಏಳು ಜನರಿಗೆ ಗಂಭೀರ ಗಾಯಗಳಾಗಿವೆ. ಹೊಸ ಗ್ಯಾಸ್ ಸಿಲಿಂಡರ್ ಅಳವಡಿಕೆ ಮಾಡುತ್ತಿದ್ದ ವೇಳೆ ಇರಿಸಿದ್ದ ಸಿಲಿಂಡರ್ ಸ್ಫೋಟಗೊಂಡಿದ್ದು, ಮನೆಯಲ್ಲಿದ್ದವರೆಲ್ಲರೂ ತೀವ್ರ ಗಾಯಗೊಂಡ ದುರ್ಘಟನೆ ನಡೆದಿದೆ.
ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ನಡೆದ ಘಟನೆಯೇನು?
ಹೆಬ್ಬಾಳ ಗ್ರಾಮದ ಒಂದು ಮನೆಯಲ್ಲಿ ಹಳೆ ಸಿಲಿಂಡರ್ ಖಾಲಿಯಾಗಿ ಹೊಸ ಸಿಲಿಂಡರ್ ನ್ನು ಫಿಕ್ಸ್ ಮಾಡುತ್ತಿದ್ದರು. ಹೊಸ ಸಿಲಿಂಡರ್ ಅಳವಡಿಸುತ್ತಿದ್ದಾಗ ಅಚಾನಕಾಗಿ ಸ್ಫೋಟ ಸಂಭವಿಸಿ, ಮನೆಯ ಗೋಡೆಗಳು ಕುಸಿದುಬಿದ್ದಿದೆ.
ಅವಘಡದಲ್ಲಿ ಗಾಯಗೊಂಡವರನ್ನು ರಾಜ (38), ಸುರೇಶ್ (35), ದುರುಗಪ್ಪ (27), ಹುಸೇನಮ್ಮ (40), ನಾಗರಾಜ (18), ದುರುಗಮ್ಮ (17), ವಿಷ್ಣು (16), ಶ್ರೀಕಾಂತ್ (22) ಎಂದು ಗುರುತಿಸಲಾಗಿದೆ. ಎಲ್ಲರನ್ನೂ ಗಂಗಾವತಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳ ಸ್ಥಿತಿ ಕಂಡು ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.
ಹೊಸ ಸಿಲಿಂಡರ್ ಅಳವಡಿಸುತ್ತಿರುವಾಗ ಗ್ಯಾಸ್ ಲೀಕ್ ಆಗಿ ಸ್ಫೋಟ
ಪ್ರಾಥಮಿಕ ವರದಿಯ ಪ್ರಕಾರ, ಹೊಸ ಸಿಲಿಂಡರ್ ಅಳವಡಿಸುತ್ತಿರುವಾಗ ಗ್ಯಾಸ್ ಲೀಕ್ ಆಗಿ ಸ್ಫೋಟ ಸಂಭವಿಸಿದಂತೆ ತೋರುತ್ತದೆ. ಸಿಲಿಂಡರ್ ಅಳವಡಿಕೆಯಲ್ಲಿ ಸುರಕ್ಷತಾ ನಿಯಮಗಳನ್ನು ಪಾಲಿಸದೆ ಇರುವುದು ಕಾರಣವಾಗಿರಬಹುದು ಎಂದು ಪೊಲೀಸರು ತನಿಖೆಯಲ್ಲಿ ಸೂಚಿಸಿದ್ದಾರೆ. ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖಾ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪಂಚನಾಮೆ ನಡೆಸಿದ್ದಾರೆ. ಸಿಲಿಂಡರ್ ಸರಬರಾಜು ಮಾಡುವ ಕಂಪನಿಯ ಸಿಬ್ಬಂದಿಯನ್ನು ವಿಚಾರಣೆಗೆ ಕರೆಸಿಕೊಳ್ಳಲಾಗಿದ್ದು, ಗ್ಯಾಸ್ ಅಳವಡಿಕೆಯಲ್ಲಿ ತಪ್ಪುಗಳಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠರು ತಿಳಿಸಿದ್ದಾರೆ.
Advertisement