

ಬೆಳಗಾವಿ: 44,208 ರೈತರು ಮಳೆ ಮತ್ತು ಪ್ರವಾಹ ಸಂಬಂಧಿತ ಬೆಳೆ ನಷ್ಟಕ್ಕೆ ಇನ್ನೂ ಪರಿಹಾರ ಪಡೆದಿಲ್ಲ. ಅಧಿಕೃತ ದಾಖಲೆಗಳಲ್ಲಿನ ತಾಂತ್ರಿಕ ಹೊಂದಾಣಿಕೆಯ ಕೊರತೆಯೇ ಈ ವಿಳಂಬಕ್ಕೆ ಕಾರಣ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಶುಕ್ರವಾರ ಹೇಳಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಪ್ರವಾಹ ಪೀಡಿತ ಅನೇಕ ಜನರಿಗೆ ಯಾವುದೇ ಪರಿಹಾರ ಸಿಕ್ಕಿಲ್ಲ ಎಂದು ಶಾಸಕ ತಿಪ್ಪಣ್ಣ ಕಾಮಕನೂರ್ ಅವರು ವಿಧಾನ ಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಹಲವಾರು ರೈತರು ನೆರವು ಪಡೆದಿಲ್ಲ ಎಂಬ ಕಾಮಕನೂರ್ ಅವರ ಮಾತನ್ನು ಒಪ್ಪಿಕೊಂಡ ಸಚಿವರು, "ಸುಮಾರು ಶೇಕಡಾ ಮೂರರಷ್ಟು ರೈತರು ಯಾವುದೇ ಪರಿಹಾರವನ್ನು ಪಡೆದಿಲ್ಲ. ಹೆಸರುಗಳಲ್ಲಿ ಹೊಂದಾಣಿಕೆ ಇಲ್ಲದಿರುವುದು ಇದಕ್ಕೆ ಕಾರಣ. ಆಧಾರ್‌ನಲ್ಲಿ ಅವರ ಹೆಸರು ಕೃಷಿ ಇಲಾಖೆಯಲ್ಲಿರುವ ಹೆಸರಿನೊಂದಿಗೆ ಹೊಂದಾಣಿಕೆಯಾಗುತ್ತಿಲ್ಲ" ಎಂದರು.
ಒಟ್ಟು 44,208 ರೈತರು ಪರಿಹಾರ ಪಡೆದಿಲ್ಲ.ತಾಂತ್ರಿಕ ಸಮಸ್ಯೆ ಸರಿಪಡಿಸಿದ ನಂತರ, ಅವರ ಬ್ಯಾಂಕ್ ಖಾತೆಗಳಿಗೆ ಹಣವನ್ನು ಜಮಾ ಮಾಡಲಾಗುತ್ತದೆ. ರೈತರು ತಮ್ಮ ಹೆಸರುಗಳನ್ನು ತಿದ್ದುಪಡಿ ಮಾಡಬೇಕು ಮತ್ತು ಬ್ಯಾಂಕ್ ಖಾತೆಗಳೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಬೇಕು ಎಂದು ಅವರು ಮನವಿ ಮಾಡಿದರು.
ಕಲಬುರಗಿ ಜಿಲ್ಲೆಯಲ್ಲಿ 3.23 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಇದಕ್ಕಾಗಿ ರಾಜ್ಯ ವಿಪತ್ತು ಪ್ರತಿಕ್ರಿಯೆ ನಿಧಿ(SDRF) ಮಾನದಂಡಗಳ ಪ್ರಕಾರ 250.97 ಕೋಟಿ ರೂ. ಪರಿಹಾರ ನೀಡಲಾಗಿದೆ ಎಂದು ಸಚಿವರು ಮಾಹಿತಿ ನೀಡಿದರು,
ರಾಜ್ಯ ಸರ್ಕಾರವು 247.75 ಕೋಟಿ ರೂ.ಗಳ ಹೆಚ್ಚುವರಿ ಪರಿಹಾರವನ್ನು ಸಹ ನೀಡಿದೆ ಎಂದು ಅವರು ಹೇಳಿದರು.
ರಾಜ್ಯಾದ್ಯಂತ ಒಟ್ಟು 14.21 ಲಕ್ಷ ರೈತರಿಗೆ ಪರಿಹಾರ ನೀಡಲಾಗುತ್ತಿದೆ. SDRF ಮಾನದಂಡಗಳ ಅಡಿಯಲ್ಲಿ 1,216 ಕೋಟಿ ರೂ.ಗಳನ್ನು ನೀಡಲಾಗಿದೆ. ಇದಕ್ಕೆ ಪೂರಕವಾಗಿ ಸರ್ಕಾರವು 1,033 ಕೋಟಿ ರೂ.ಗಳ ಹೆಚ್ಚುವರಿ ಅನುದಾನವನ್ನು ನೀಡಿದೆ. ಎರಡೂ ಸೇರಿ, ರೈತರಿಗೆ 2,249 ಕೋಟಿ ರೂ.ಗಳನ್ನು ನೀಡಲಾಗಿದೆ ಎಂದರು.
Advertisement