

ಬೆಂಗಳೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಮಾಜಿ ಆಯುಕ್ತ ಜಿ.ಟಿ. ದಿನೇಶ್ ಕುಮಾರ್ ಅವರ ಕಾರ್ಯವೈಖರಿಯು, ಸಹಕಾರಿ ಸಂಘಗಳು, ಸಾರ್ವಜನಿಕ ಸೇವಕರು, ರಿಯಲ್ ಎಸ್ಟೇಟ್ ಉದ್ಯಮಿಗಳು, ಪ್ರಭಾವಿ ವ್ಯಕ್ತಿಗಳು ಮತ್ತು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡುವುದಕ್ಕೆ ಮತ್ತು ಯೋಜನೆ ಅನುಮೋದನೆ ಇತ್ಯಾದಿಗಳಿಗೆ ತಮ್ಮ ಸಂಬಂಧಿಕರು, ಸಹಚರರು ಹಾಗೂ ಸೇವಕರ ಮೂಲಕ ನಗದು ಲಂಚ, ಚರ ಮತ್ತು ಸ್ಥಿರ ಆಸ್ತಿಗಳ ರೂಪದಲ್ಲಿ ಲಂಚ ಪಡೆದಿರುವ ಬಗ್ಗೆ ಅಚ್ಚರಿಯ ವಿವರಗಳನ್ನು ಜಾರಿ ನಿರ್ದೇಶನಾಲಯ(ಇಡಿ) ಬಹಿರಂಗಪಡಿಸಿದೆ.
ಬಂಧನದ ನಂತರ ಜಾರಿ ನಿರ್ದೇಶನಾಲಯ (ಇಡಿ) ಸಂಗ್ರಹಿಸಿದ ಪುರಾವೆಗಳ ಪ್ರಕಾರ, ದಿನೇಶ್ ಕುಮಾರ್ ಅವರು ನಿವೇಶನ ಮತ್ತು ಭೂಮಿಯನ್ನು ಖರೀದಿಸಿ, ಎಸ್‌ಸಿ ರಘು, ಎಸ್‌ಸಿ ವಿನೋದ್ ಕುಮಾರ್, ಎಸ್‌ಸಿ ಅನುಪಮಾ, ಅವರ ಅತ್ತೆಯ ಎಲ್ಲಾ ಸಹೋದರರು; ಅವರ ಮಾವ ಕೆ.ಸಿ. ಪುಟ್ಟೇಗೌಡ; ಆಪ್ತ ಸಹಚರ ಬಿ.ಆರ್. ಹೊಯ್ಸಳ; ಅವರ ಪತ್ನಿಯ ಅಜ್ಜಿ ಗಾಯಿತ್ರಿ ಮತ್ತು ಅಜ್ಜ ಚಿಕ್ಕಬೋರಯ್ಯ; ಸೋದರ ಮಾವ ಕೆ.ಪಿ. ತೇಜಸ್ ಗೌಡ; ಅತ್ತೆಯ ಅತ್ತಿಗೆ ಲಾವಣ್ಯ; ಸೇವಕ ಕೆ. ರಮೇಶ್ ಕುಮಾರ್; ಸಂಬಂಧಿ ಸಿ. ಚಂದನ್; ಸಹಚರ ಸತೀಶ ಜಿ ಅವರ ಹೆಸರಿಗೆ ಮಾಡಿದ್ದಾರೆ ಮತ್ತು ಅವರ ಹೆಸರಿನಲ್ಲಿ ಸಹಕಾರಿ ಸಂಘಗಳ ಬ್ಯಾಂಕ್ ಖಾತೆಗಳಿಗೆ 22.47 ಕೋಟಿ ರೂಪಾಯಿ ಅಕ್ರಮವಾಗಿ ವರ್ಗಾವಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ದಿನೇಶ್ ಕುಮಾರ್ ಅವರು ತಮ್ಮ ಅಧಿಕಾರಾವಧಿಯಲ್ಲಿ 140 ಕೋಟಿ ರೂ. ಮೌಲ್ಯದ 283 ನಿವೇಶನಗಳನ್ನು ಅಕ್ರಮವಾಗಿ ಮಂಜೂರು ಮಾಡಿದ್ದರು. ಅದಕ್ಕಾಗಿ 22.47 ಕೋಟಿ ರೂ. ಲಂಚ ಪಡೆದಿದ್ದರು ಎಂಬುದು ಇಡಿ ತನಿಖೆಯಿಂದ ತಿಳಿದುಬಂದಿದೆ.
ಮುಡಾ ಭೂಸ್ವಾಧೀನಕ್ಕೆ ಪರಿಹಾರದ ನೆಪದಲ್ಲಿ ದಿನೇಶ್ ಕುಮಾರ್ ಸುಳ್ಳು ಮಾಹಿತಿ, ನಕಲಿ ದಾಖಲೆ, ವಂಚನೆ ಮತ್ತು ಅನಗತ್ಯ ಪ್ರಭಾವ ಬಳಸಿ ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಮೈಸೂರು, ಕುವೆಂಪು ನಗರ, ದಟ್ಟಗಳ್ಳಿ ಮತ್ತು ವಿಜಯನಗರ 2ನೇ ಹಂತದ ವಿಳಾಸ ಹೊಂದಿರುವ ಎಂ. ರವಿಕುಮಾರ್, ಎಂ. ರಾಜು, ಎಂ. ಮಹೇಶ್, ಸುಜಾತ ಮತ್ತು ಕುಮಾರಿ ಅವರಿಗೆ 31 ನಿವೇಶನಗಳನ್ನು ಹಂಚಿಕೆ ಮಾಡಿದ್ದಾರೆ ಎಂದು ತಿಳಿಸಿವೆ.
ಅದೇ ರೀತಿ, ಅವರು ಮೈಸೂರಿನ ಮಂಡಿಮೊಹಲ್ಲಾ, ಜೆ.ಪಿ. ನಗರ, ನಾಚನಹಳ್ಳಿ ಮತ್ತು ವಿಜಯನಗರದಲ್ಲಿ 41 ನಿವೇಶನಗಳನ್ನು ಅಬ್ದುಲ್ ವಹೀದ್ ಅವರಿಗೆ ಹಂಚಿಕೆ ಮಾಡಿದ್ದಾರೆ. ಬದಲಾಗಿ, ವಹೀದ್ ಮೂರು ನಿವೇಶನಗಳನ್ನು, ನಾಚನಹಳ್ಳಿಯಲ್ಲಿ ರಘು ಅವರಿಗೆ 35 ಲಕ್ಷ ರೂ.ಗೆ ಒಂದನ್ನು ಹಂಚಿಕೆ ಮಾಡಿದ್ದಾರೆ, ಇದರಲ್ಲಿ ಮಾರ್ಗಸೂಚಿ ಮೌಲ್ಯ 49.68 ಲಕ್ಷ ರೂ.ಗಳಾಗಿದ್ದು, ಸತೀಶ ಮತ್ತು ಮಂಜುನಾಥ್ ಅವರಿಗೆ 70 ಲಕ್ಷ ರೂ.ಗಳಿಗೆ ನಿಗದಿಪಡಿಸಲಾಗಿದೆ, ಮಾರ್ಗಸೂಚಿ ಮೌಲ್ಯ 86.40 ಲಕ್ಷ ರೂ.ಗಳಾಗಿದೆ. ಇನ್ನೊಂದು ನಿವೇಶನವನ್ನು ವಿಜಯನಗರ 4ನೇ ಹಂತದಲ್ಲಿ ಸತೀಶ ಅವರಿಗೆ 1.55 ಕೋಟಿ ರೂ.ಗಳಿಗೆ ಹಂಚಿಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಆದಾಗ್ಯೂ, ರಾಷ್ಟ್ರೀಕೃತ ಬ್ಯಾಂಕಿನಿಂದ 1.55 ಕೋಟಿ ರೂ.ಗಳಿಗೆ ಮೂರು ಪಾವತಿಗಳನ್ನು ಮಾಡಲಾಗಿದೆ, ಆದರೆ ಸತೀಶ ಅವರು ಯಾವುದನ್ನೂ ಪಾವತಿಸಿಲ್ಲ.
ಮುಡಾ ಮಾಜಿ ಆಯುಕ್ತ ದಿನೇಶ್ ಕುಮಾರ್ ಇಡೀ ಹಗರಣದ ಸೂತ್ರಧಾರಿ ಎಂಬುದು ಇಡಿ ತನಿಖೆಯಿಂಗ ಗೊತ್ತಾಗಿದೆ. ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಲು ಅವರು ನಗದು, ಚರ ಮತ್ತು ಸ್ಥಿರ ಆಸ್ತಿಗಳ ರೂಪದಲ್ಲಿ ಲಂಚ ಪಡೆದಿದ್ದಾರೆ ಎಂಬುದೂ ಬಹಿರಂಗವಾಗಿದೆ ಎಂದು ‘ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಉಲ್ಲೇಖಿಸಿದೆ.
Advertisement