
17.5 ಕೋಟಿ ರೂ. ವಂಚನೆ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿ ಪುತ್ರನ ಹೆಸರು ಕೇಳಿಬಂದಿದ್ದು, ಮುಖ್ಯಮಂತ್ರಿ ಕಾರ್ಯಾಲಯ ಇದೀಗ ಸಾರ್ವಜನಿಕ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅವರ ಆಪ್ತ ಸಹಾಯಕ ಮತ್ತು OSD ವೆಂಕಟೇಶಯ್ಯ ಅವರ ಪುತ್ರ ರಜತ್ ವೆಂಕಟೇಶ್ ಹಾಗೂ ಉದ್ಯಮಿಗಳಾದ ಸ್ನೇಹಾ ರಾಕೇಶ್ ಮತ್ತು ರಾಬಿನ್ ಫ್ರಾನ್ಸಿಸ್ ವಿರುದ್ಧ ಅನಿವಾಸಿ ಭಾರತೀಯ ತೇಜಸ್ವಿ ಮರಿಯಪ್ಪ ನೀಡಿದ ದೂರಿನ ಮೇರೆಗೆ ಬನಶಂಕರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಆರೋಪಿಗಳು ಕಟ್ಟಡ ಖರೀದಿಸುವ ಪ್ರಸ್ತಾವನೆಯೊಂದಿಗೆ ದೂರುದಾರರನ್ನು ಸಂಪರ್ಕಿಸಿದ್ದು, ಆಸ್ತಿ ದಾಖಲೆ ಪಡೆದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಡೀಲ್ ಭದ್ರಪಡಿಸಿಕೊಳ್ಳಲು ಅವರು 17.5 ಕೋಟಿ ರೂಪಾಯಿ ಮೌಲ್ಯದ ಚೆಕ್ ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಆದಾಗ್ಯೂ, ಚೆಕ್ ನ್ನು ನಗದು ಆಗಿಸಲು ಪ್ರಸ್ತುತಪಡಿಸಿದಾಗ ಸಹಿ ನಕಲಿಯಾಗಿದ್ದು, ವಹಿವಾಟು ವಿಫಲವಾಗಿದೆ. ಪ್ರಭಾವಿ ರಾಜಕೀಯ ವ್ಯಕ್ತಿಗಳ ಸಂಪರ್ಕದ ಮೂಲಕ ನಂಬಿಕೆ ಹುಟ್ಟಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.
ಕಲಬುರಗಿ ಜಿಲ್ಲೆಯ ಆಳಂದ ಮತಕಳ್ಳತನ ಪ್ರಕರಣದಲ್ಲಿ ಬಿಜೆಪಿ ಮಾಜಿ ಶಾಸಕ ಸುಭಾಷ್ ಗುತ್ತೇದಾರ್ ಸೇರಿದಂತೆ 7 ಮಂದಿಯ ವಿರುದ್ಧ ಸಿಐಡಿ ಚಾರ್ಜ್‌ಶೀಟ್ ಸಲ್ಲಿಸಿದೆ. 22 ಸಾವಿರ ಪುಟಗಳ ದೋಷರೋಪ ಪಟ್ಟಿಯಲ್ಲಿ ಈ ಆರೋಪಿಗಳು ಹೆಸರಿಸಲಾಗಿದೆ. 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾಗಿದ್ದ ಮತಗಳ್ಳತನ ಪ್ರಕರಣದಲ್ಲಿ ಸುಭಾಷ್ ಗುತ್ತೇದಾರ್ ಪಾತ್ರವಿದೆ ಎಂಬುದು ತನಿಖೆಯಿಂದ ದೃಢಪಟ್ಟಿದೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ರಾಜ್ಯ ಸರ್ಕಾರದ ಆದೇಶದಂತೆ ಸಿಐಡಿ ಎಡಿಜಿಪಿ ಬಿಕೆ ಸಿಂಗ್ ನೇತೃತ್ವದಲ್ಲಿ ವಿಶೇಷ ತನಿಖಾ ತಂಡ (SIT) ರಚಿಸಲಾಗಿತ್ತು. 5,994 ಮತಗಳನ್ನು ಅಳಿಸಿ ಹಾಕಲು ಕಾಲ್ ಸೆಂಟರ್ ಬಳಕೆ ಮಾಡಲಾಗಿದೆ. ಮತ ಕಳವಿಗೆ ಮಾಜಿ ಶಾಸಕರು ಹಣ ಕೂಡ ಪಾವತಿ ಮಾಡಿದ್ದಾರೆ. ದಾಳಿ ವೇಳೆ ಸಿಕ್ಕಿದ ಡಿಜಿಟಲ್ ಸಾಕ್ಷ್ಯದಿಂದ ಕೃತ್ಯ ಸಾಬೀತಾಗಿದೆ ಎಂದು ಎಸ್‌ಐಟಿ ಹೇಳಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪಾಳ್ಯಾ ಬಳಿ ಕರ್ತವ್ಯ ನಿರತ ಕೆಎಸ್‌ಆರ್‌ಟಿಸಿ ಚೆಕಿಂಗ್ ಇನ್ಸ್‌ಪೆಕ್ಟರ್ ಶಕುನಿಗೌಡ ಲಾರಿ ಡಿಕ್ಕಿಯಿಂದ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಶಕುನಿ ಗೌಡ ರಸ್ತೆ ದಾಟುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ರಾಷ್ಟ್ರೀಯ ಹೆದ್ದಾರಿ-75ರಲ್ಲಿ ನಲ್ಲೂರು-ಮಗ್ಗೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ರಾಜ್ಯ ಸಾರಿಗೆ ಬಸ್ ಅನ್ನು ತಡೆದು, ಪ್ರಯಾಣಿಕರ ಟಿಕೆಟ್ ಪರಿಶೀಲನೆ ನಡೆಸುವ ಉದ್ದೇಶದಿಂದ ಬಸ್ ತಪಾಸಣೆಗಾಗಿ ಶಕುನಿ ಗೌಡ ರಸ್ತೆ ದಾಟುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಲಾರಿ ಚಾಲಕ ಪರಾರಿಯಾಗಿದ್ದಾನೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಮುಂದುವರಿಸಿದ್ದಾರೆ.
ಡಿಕೆ ಶಿವಕುಮಾರ್ ಅವರು ಜನವರಿ 6 ರಂದು ಮುಖ್ಯಮಂತ್ರಿಯಾಗಲಿದ್ದಾರೆ ಎಂದು ಶಾಸಕ ಇಕ್ಬಾಲ್ ಹುಸೇನ್ ಭವಿಷ್ಯ ನುಡಿದಿದ್ದಾರೆ. ಸಿದ್ದರಾಮಯ್ಯ ಅವರು ಹುದ್ದೆ ಬಿಟ್ಟುಕೊಡಬೇಕು, ಡಿಕೆ ಶಿವಕುಮಾರ್ ಗೆ ಅವಕಾಶ ಸಿಗಬೇಕು ಎಂದು ಹೇಳಿದರು. ಡಿಕೆಶಿ ಅವರ ಶ್ರಮಕ್ಕೆ ಪ್ರತಿಫಲ ಸಿಗಬೇಕು ಎಂಬುದು ನಮ್ಮ ಬೇಡಿಕೆ ಎಂದು ಹೇಳಿದರು. ಇದೇ ವೇಳೆ ಸಿಎಂ ಬದಲಾವಣೆ ಇಲ್ಲ ಎಂದ ಯತೀಂದ್ರ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯಿಸಿ, ಯಾರು ಏನೇ ಹೇಳಿಕೊಳ್ಳಲಿ ಎಂದು ಇಕ್ಬಾಲ್ ಹೇಳಿದ್ದಾರೆ. ಇಕ್ಬಾಲ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಡಿಕೆ ಶಿವಕುಮಾರ್, ಇಕ್ಬಾಲ್ ಹುಸೇನ್ ಮಾತನ್ನು ಯಾರೂ ನಂಬಬೇಡಿ, ಅವನಿಗೆ ಮಾತಾಡೋ ಚಟ ಇದೆ. ಅವನ ವಿರುದ್ಧ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಸಿಡಿಮಿಡಿಗೊಂಡರು.
ಕರ್ನಾಟಕದಲ್ಲಿ ಚಳಿಗಾಲದ ತೀವ್ರತೆ ಹೆಚ್ಚಾಗಿದ್ದು, ಬೆಂಗಳೂರಿನಲ್ಲಿ ತಾಪಮಾನ 12.9° ಸೆಲ್ಸಿಯಸ್‌ಗೆ ಇಳಿದಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಶೀತಗಾಳಿ ಮುಂದುವರಿಯಲಿದ್ದು, ಜನರು ಚಳಿಯಿಂದ ನಡುಗುತ್ತಿದ್ದಾರೆ. ಐಎಂಡಿ ಮುನ್ಸೂಚನೆಯ ಪ್ರಕಾರ, ಮುಂದಿನ 5 ದಿನಗಳವರೆಗೆ ರಾಜ್ಯದಲ್ಲಿ ಶೀತ ವಾತಾವರಣ ಮುಂದುವರಿಯಲಿದೆ. ದಕ್ಷಿಣ ಒಳನಾಡಿನ ಭಾಗಗಳಲ್ಲಿಯೂ ಸಹ ಶೀತಗಾಳಿ ಬೀಸುವ ಸಾಧ್ಯತೆ ಇದೆ. ಚಳಿಗಾಲ ಮುಂದುವರೆದಂತೆ ಬೆಂಗಳೂರಿನಲ್ಲಿ ತಾಪಮಾನ ಇನ್ನೂ ಕಡಿಮೆಯಾಗುವ ನಿರೀಕ್ಷೆಯಿದೆ.
Advertisement