

ಬೆಳಗಾವಿ: ನಾವು ಅಧಿವೇಶನ ಕರೆದಿರುವುದೇ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚಿಸಲು. ಮಹದಾಯಿ, ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ ಯೋಜನೆ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ ಯಾಕೆ? ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರಶ್ನಿಸಿದರು.
ಬೆಳಗಾವಿ ವಿಮಾನ ನಿಲ್ದಾಣ ಹಾಗೂ ಸರ್ಕಿಟ್ ಹೌಸ್ ಬಳಿ ಮಂಗಳವಾರ ಬೆಳಿಗ್ಗೆ ಮಾಧ್ಯಮಗಳ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಅವರು ಗ್ಯಾರಂಟಿ ಯೋಜನೆಗಳ ಜಾರಿ ಬಗ್ಗೆ ನಮಗೆ ಬದ್ಧತೆ ಇದೆ. ಕೇಂದ್ರ ಸರ್ಕಾರ ಜಿಎಸ್ ಟಿ ಪರಿಷ್ಕರಣೆ ಮೂಲಕ ರಾಜ್ಯದ ಆದಾಯ ಕಡಿಮೆ ಮಾಡಿದೆ. ವಾರ್ಷಿಕ 10-15 ಸಾವಿರ ಕೋಟಿ ಕೊರತೆಯಾಗಿದೆ. ನಾವು ಕೊಟ್ಟ ಮಾತಿಗೆ ಬದ್ಧವಾಗಿದ್ದೇವೆ.
ಒಂದೆರಡು ತಿಂಗಳು ಹೆಚ್ಚು ಕಮ್ಮಿಯಾಗಲಿದೆ. ಬಿಜೆಪಿಯವರು ಬೇರೆ ರಾಜ್ಯಗಳಲ್ಲಿ ಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲಿ. ಕೇಂದ್ರ ಸರ್ಕಾರ ರಾಜ್ಯದ ನೀರಾವರಿ ಯೋಜನೆಗೆ ಘೋಷಿಸಿದ ಅನುದಾನ ಇಲ್ಲಿಯವರೆಗೂ ಕೊಟ್ಟಿಲ್ಲ. ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ರೂ. ನೀಡಿಲ್ಲ, ಮಹದಾಯಿ ವಿಚಾರವಾಗಿ ಅನುಮತಿ ನೀಡಿಲ್ಲ, ಬಿಜೆಪಿ ಯಾಕೆ ಈ ಬಗ್ಗೆ ಮಾತನಾಡುತ್ತಿಲ್ಲ? ಕೃಷ್ಣಾ ಮೇಲ್ದಂಡೆ ಯೋಜನೆ ಅಧಿಸೂಚನೆ ಹೊರಡಿಸಿಲ್ಲ. ಇವುಗಳ ಬಗ್ಗೆ ಯಾಕೆ ಅವರು ಮಾತನಾಡುತ್ತಿಲ್ಲ?" ಎಂದು ಪ್ರಶ್ನಿಸಿದರು.
ನಮ್ಮದು ನಾಗರಿಕ ಸಮಾಜ. ಇಲ್ಲಿ ದ್ವೇಷ ಮಾಡಬಾರದು. ದ್ವೇಷ, ಗಲಾಟೆ ಮೂಲಕ ಸಮಾಜದಲ್ಲಿ ಕಾನೂನು ಸುವ್ಯವಸ್ಥೆ ಹಾಳು ಮಾಡಬಾರದು ಎಂಬ ದೃಷ್ಟಿಯಿಂದ ಕಾನೂನು ತರಲಾಗುತ್ತಿದೆ. ಇದರಿಂದ ರಾಜ್ಯ ಹಾಗೂ ಸಮಾಜಕ್ಕೆ ಒಳ್ಳೆಯದಾಗಲಿದೆ" ಎಂದರು. ಈ ದೇಶದಲ್ಲಿ ಪ್ರಜಾಪ್ರಭುತ್ವ ಉಳಿಯಬೇಕು. ಮತಕಳ್ಳತನದಿಂದ ಆಗುತ್ತಿರುವ ಅನ್ಯಾಯ ತಡೆಯಬೇಕು ಎಂದು ಸಾವಿರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇದೇ ನಮ್ಮ ಯಶಸ್ವಿ" ಎಂದರು.
ನಾವು ಅನೇಕರಿಗೆ ಅಧಿಕಾರವನ್ನೇ ಕೊಟ್ಟಿಲ್ಲ. ಆದರೂ ಸಾವಿರಾರು ರೂಪಾಯಿ ಹಣವನ್ನು ಖರ್ಚು ಮಾಡಿಕೊಂಡು ದೆಹಲಿಗೆ ಬಂದು ಮಲ್ಲಿಕಾರ್ಜುನ ಖರ್ಗೆ ಅವರು ಹಾಗೂ ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಬೆಂಬಲ ನೀಡಿದ್ದಾರೆ. ಈ ಮೂಲಕ ಇಡೀ ದೇಶಕ್ಕೆ ಸಂದೇಶ ರವಾನಿಸಿದ್ದಾರೆ" ಎಂದರು. ಮತ್ತೆ ಬ್ಯಾಲೆಟ್ ಪೇಪರ್ ಮೂಲಕ ಮತದಾನ ನಡೆಸಬೇಕು ಎಂದು ಪ್ರಿಯಾಂಕ ಗಾಂಧಿ ಅವರು ಸಂದೇಶ ನೀಡಿದ್ದಾರೆ. ಪ್ರತಿಭಟನೆ ಯಶಸ್ವಿಯಾಯಿತು. ಕರ್ನಾಟಕದ ಮೂಲೆ, ಮೂಲೆಯಿಂದ ಬಂದ ಕಾರ್ಯಕರ್ತರು, ಮುಖಂಡರಿಗೆ ಪಕ್ಷದ ಪರವಾಗಿ ಧನ್ಯವಾದಗಳು" ಎಂದರು.
ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿದ್ದೀರಾ ಎಂದು ಕೇಳಿದಾಗ, "ಭೇಟಿಯಾಗಿದ್ದನ್ನು, ಕುಶಲೋಪರಿ ವಿಚಾರಿಸುವುದನ್ನು ಫೋಟೋಗಳಲ್ಲಿ ನೀವುಗಳೂ ನೋಡಿದ್ದೀರಲ್ಲ"ಎಂದರು. "ಕರ್ನಾಟಕದ ಅಭಿವೃದ್ಧಿ ಬಗ್ಗೆ ಏನು ಚರ್ಚೆಯಾಯಿತು ಎಂದು ಮಾಧ್ಯಮದವರು ಹೇಳುತ್ತಾರೆಯೇ?" ಎಂದು ಹೇಳಿದರು.
Advertisement