

ಬೆಳಗಾವಿ: ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದ ಸಿಎಂ ಸಿದ್ದರಾಮಯ್ಯನವರಿಗೆ ನಿನ್ನೆ ಇದ್ದಕ್ಕಿದ್ದಂತೆ ಹೊಟ್ಟೆನೋವು ಕಾಣಿಸಿಕೊಂಡಿತ್ತು.
ಬೆಳಗಾವಿ ಸುವರ್ಣ ಸೌಧದ ಹೊರಗೆ ಗಾಂಧಿ ಪ್ರತಿಮೆ ಮುಂದೆ ನಿನ್ನೆ ಕಾಂಗ್ರೆಸ್ ಏರ್ಪಡಿಸಿದ್ದ ಕೇಂದ್ರಸರ್ಕಾರದ ವಿರುದ್ಧ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಇದ್ದಕ್ಕಿದ್ದಂತೆ ಅನಾರೋಗ್ಯ ಕಾಣಿಸಿಕೊಂಡು ನಂತರ ಸರ್ಕ್ಯೂಟ್ ಹೌಸ್‌ಗೆ ತೆರಳಿದರು.
ಮಧ್ಯಾಹ್ನದಿಂದ ಕೊಠಡಿ ಬಿಟ್ಟು ಹೊರ ಬರದಿದ್ದಾಗ ಗೊತ್ತಾಗಿದ್ದು ಅವರಿಗೆ ಅನಾರೋಗ್ಯ ಎಂಬ ವಿಚಾರ. ಮೊನ್ನೆ ಮಂಗಳವಾರ ರಾತ್ರಿ ಊಟ ಮಾಡಿದ ನಂತರ ಫುಡ್‌ಪಾಯಿಸನ್ ಆಗಿ ಹೊಟ್ಟೆ ನೋವು ಕೂಡ ಆರಂಭವಾಗಿತ್ತಂತೆ. ಇದರಿಂದ ರಾತ್ರಿ ಸರಿಯಾಗಿ ನಿದ್ದೆ ಕೂಡ ಆಗಿರಲಿಲ್ಲ. ಬೆಳಗ್ಗೆಯಾದರೂ ಆರೋಗ್ಯ ಸರಿಯಾಗಿರಲಿಲ್ಲ. ಅದೇ ಸ್ಥಿತಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಿಸಿಲಿನಲ್ಲಿ ಕುಳಿತರು. ಇದಾದ ಸ್ವಲ್ಪ ಹೊತ್ತಿಗೆ ಸುಸ್ತಾಗಿ ಸಿಎಂ ನೇರವಾಗಿ ಸರ್ಕ್ಯೂಟ್ ಹೌಸ್‌ಗೆ ತೆರಳಿದರು.
ಕೂಡಲೇ ವೈದ್ಯರನ್ನು ಕರೆಸಿಕೊಂಡು ಚಿಕಿತ್ಸೆ ಕೂಡ ಪಡೆದುಕೊಂಡರು. ವೈದ್ಯರು ಸಿಎಂಗೆ ವಿಶ್ರಾಂತಿ ಪಡೆಯುವಂತೆ ಸೂಚನೆ ನೀಡಿದ ಹಿನ್ನೆಲೆ ಸಿಎಂ ನಿನ್ನೆ ಮಧ್ಯಾಹ್ನದಿಂದ ವಿಶ್ರಾಂತಿ ಪಡೆದರು. ಈ ಮಧ್ಯೆ ಅವರ ಆನಾರೋಗ್ಯ ವಿಚಾರ ಕೇಳಿದ ತಕ್ಷಣ ಅವರ ಪುತ್ರ, ವಿಧಾನಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ, ಸಚಿವ ಬೈರತಿ ಸುರೇಶ್, ಮಾಜಿ ಸಚಿವರಾದ ರಮೇಶ ಜಾರಕಿಹೊಳಿ, ಜಿಟಿ ದೇವೇಗೌಡ ಸೇರಿ ಹಲವು ನಾಯಕರು ಸರ್ಕ್ಯೂಟ್ ಹೌಸ್‌ಗೆ ತೆರಳಿದರು.
ಇಂದು ಅಧಿವೇಶನದಲ್ಲಿ ಭಾಗಿ
ತಂದೆಯವರ ಆರೋಗ್ಯ ವಿಚಾರಿಸಿ ಹೊರಬಂದ ನಂತರ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಯತೀಂದ್ರ ಸಿದ್ದರಾಮಯ್ಯ, ಈಗ ತಂದೆಯವರ ಆರೋಗ್ಯ ಚೆನ್ನಾಗಿದೆ, ವೈದ್ಯರು ಮಾತ್ರೆಗಳನ್ನು ಕೊಟ್ಟಿದ್ದಾರೆ. ಗ್ಯಾಸ್ಟ್ರೋಕೇಷನ್ ಇನ್ಫೆಕ್ಷನ್ ಆಗಿದೆ, ಡೈರಿಯಾ ಸಮಸ್ಯೆ ತರಾ ಆಗಿದೆ. ಸದ್ಯ ಆರೋಗ್ಯವಾಗಿದ್ದು ಇಂದು ಅಧಿವೇಶನದಲ್ಲಿ ಭಾಗಿಯಾಗುತ್ತಾರೆ ಎಂದು ತಿಳಿಸಿದ್ದಾರೆ.
ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಪ್ರತ್ಯೇಕವಾಗಿ ಬಂದು ಸಿಎಂ ಆರೋಗ್ಯ ವಿಚಾರಿಸಿದ್ದು ಎಲ್ಲರನ್ನೂ ಹುಬ್ಬೇರಿಸಿತ್ತು. ನಂತರ ಸಚಿವ ಭೈರತಿ ಸುರೇಶ್ ಬಂದರು. ಇಂದು ಅಧಿವೇಶನದಲ್ಲಿ ಭಾಗಿಯಾಗಿ ವಿಪಕ್ಷ ನಾಯಕರ ಪ್ರಶ್ನೆಗಳಿಗೆ ಉತ್ತರ ಕೊಡುತ್ತಾರೆ ಎಂದು ತಿಳಿಸಿದರು.
ಬೆಳಗಾವಿ ಅಧಿವೇಶನ ನಾಳೆ ಮುಕ್ತಾಯವಾಗಲಿದೆ.
Advertisement